Yakshagana Kalaranga

ವಿದ್ಯಾಪೋಷಕ್ ಯಕ್ಷಗಾನ ಕಲಾರಂಗದ 105ನೆಯ ಮನೆ ಹಸ್ತಾಂತರ

ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‍ನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಅಕ್ಷಿತಾ ನಾಯ್ಕ್ (ಶ್ರೀಮತಿ ಗೀತಾ ಮತ್ತು ಶ್ರೀ ಉದಯ ನಾಯ್ಕ್ ಪುತ್ರಿ) ಇವಳಿಗೆ ಹಿರಿಯಡಕದ ಬೊಮ್ಮರಬೆಟ್ಟುವಿನಲ್ಲಿ, ಉಡುಪಿ ಗಾಂಧಿ ಆಸ್ಪತ್ರೆಯ ಸಂಸ್ಥಾಪಕರಾದ ಡಾ. ಹರಿಶ್ಚಂದ್ರ ಇವರು ತಮ್ಮ ತಂದೆ-ತಾಯಿ ಸ್ಮರಣೆಯಲ್ಲಿ ನಿರ್ಮಿಸಿದ ನೂತನ ಮನೆ
‘ರಂಗ-ರುಕ್ಮಿಣಿ’ಯನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಇಂದು ನನ್ನ ಹುಟ್ಟುಹಬ್ಬ. ನಾನು ಮತ್ತು ಲಕ್ಷ್ಮಿ ವಿವಾಹವಾದ ಶುಭದಿನ. ಇನ್ನೂ ಒಂದು ವಿಶೇಷವೆಂದರೆ ತಂದೆಯ 105ನೆಯ ಜನ್ಮ ವರ್ಷದಂದೇ ಸಂಸ್ಥೆಯ 105ನೆಯ ಮನೆಯ ಪ್ರಾಯೋಜಕತ್ವ ವಹಿಸಿರುವುದು ನನ್ನ ಭಾಗ್ಯ.ಇದು ನನ್ನ 60ನೆಯ ವರ್ಷ. ಈ ವರ್ಷ ಕಲಾರಂಗ ನಿರ್ಮಿಸುವ ಎಲ್ಲ ಮನೆಯ ಒಕ್ಕಲಿನಂದು ನೀಡುವ ಉಪಹಾರದ ವೆಚ್ಚ ಭರಿಸುವ ಅವಕಾಶ ತನಗೆ ಕೊಡಬೇಕೆಂದು ಕೇಳಿಕೊಂಡರು. ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರು ಗಳಿಸಿದ ಹಣವನ್ನು ಹೋಗುವಾಗ ಕೊಂಡೊಯ್ಯುವಂತಿಲ್ಲ. ಇರುವಾಗಲೇ ಸತ್ಕಾರ್ಯಕ್ಕೆ ವಿನಿಯೋಗಿಸಿದರೆ ಬದುಕಿಗೊಂದು ಸಾರ್ಥಕ್ಯ ದೊರೆಯುತ್ತದೆ. ಡಾ. ಹರಿಶ್ಚಂದ್ರರು ನಿರಂತರ ಒಳ್ಳೆಯ ಕೆಲಸ ಮಾಡುತ್ತಾ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು. ಉದ್ಯಮಿ-ಸಮಾಜ ಸೇವಕ ಪಿ.ನಟರಾಜ ಹೆಗ್ಡೆ ಯವರು ಫಲಾನುಭವಿಗಳ ಆಯ್ಕೆಯಲ್ಲಿ ಕಲಾರಂಗ ವಹಿಸುವ ಮಾನದಂಡ ಅನುಕರಣೀಯ. ಸಮರ್ಥ ನಾಯಕತ್ವ, ನಿಸ್ವಾರ್ಥ ಕಾರ್ಯಕರ್ತರ ಪಡೆ ಎಲ್ಲರನ್ನೂ ಸೇರಿಸಿಕೊಂಡು ದೊಡ್ಡ ಕೆಲಸ ಮಾಡುತ್ತಿದೆ ಎಂದರು. ಹಿರಿಯಡಕ ಕೆ.ಪಿ.ಎಸ್.ನ ಎಸ್.ಡಿ.ಎಂ.ಸಿ ಯ ಉಪಾಧ್ಯಕ್ಷ ಬಿ. ಎಲ್. ವಿಶ್ವಾಸ್ ಮತ್ತು ಶ್ರೀಮತಿ ಲಕ್ಷ್ಮೀ ಹರಿಶ್ಚಂದ್ರ ಶುಭಕೋರಿದರು. ವೇದಿಕೆಯಲ್ಲಿ ಡಾ. ಪಂಚಮಿ, ಎಂ. ದಾಮೋದರ ಭಟ್, ಎಂ. ಅನಂತ ಭಟ್, ಜಯಲಕ್ಷ್ಮೀ ತಂತ್ರಿ, ಶಕುಂತಲಾ ಐತಾಳ್ ಉಪಸ್ಥಿತರಿದ್ದರು. ವಿವಾಹದ ಶುಭದಿನದ ಸಂದರ್ಭದಲ್ಲಿ ಡಾ. ಹರಿಶ್ಚಂದ್ರ ದಂಪತಿಗಳನ್ನು ಸಂಸ್ಥೆಯ ವತಿಯಿಂದ ಶಾಲು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಸಂಸ್ಥೆಯ ಉಪಾಧ್ಯಕ್ಷ ಪಿ. ಕಿಶನ್ ಹೆಗ್ಡೆ, ಕೋಶಾಧಿಕಾರಿ ಕೆ. ಸದಾಶಿವ ರಾವ್, ಸದಸ್ಯರುಗಳಾದ ಯು. ವಿಶ್ವನಾಥ ಶೆಣೈ,ಯು. ಎಸ್. ರಾಜಗೋಪಾಲ ಆಚಾರ್ಯ, ಭುವನಪ್ರಸಾದ ಹೆಗ್ಡೆ, ಯು. ಅನಂತರಾಜ ಉಪಾಧ್ಯ, ಮರ್ಣೆ ಉಮೇಶ್ ಭಟ್, ರಾಜೇಶ್ ಭಟ್ ಪಣಿಯಾಡಿ, ಆರ್. ವಸಂತ, ಡಾ. ಪ್ರತಿಮಾ ಆಚಾರ್ಯ, ಶಾಲಾ ಆಡಳಿತ ಸಮಿತಿ ಸದಸ್ಯ ಅಶೋಕ್ ಜೋಗಿ,ಮುಖ್ಯೋಪಾಧ್ಯಾಯ ಪ್ರಕಾಶ್ ಪ್ರಭು,ನರಸಿಂಹಮೂರ್ತಿ ರಾವ್,ನಾಗಭೂಷಣ ಭಟ್,ಜನಾರ್ದನ ಕೊಡವೂರು ಭಾಗವಹಿಸಿದ್ದರು.ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

We're currently hard at work gathering information and crafting content to bring you the best experience. Stay tuned for exciting updates!