ಸ್ಥಾಪನೆ

1975ರಲ್ಲಿ ಸದಭಿರುಚಿಯ ಯಕ್ಷಗಾನವನ್ನು ಸಂಯೋಜಿಸುವ ದೃಷ್ಠಿಯಿಂದ ಸ್ಥಾಪನೆಗೊಂಡ ಯಕ್ಷಗಾನ ಕಲಾರಂಗ ಇಂದು ಉಡುಪಿಯ ಪ್ರತಿಷ್ಠಿತ ಸಾಂಸ್ಕೃತಿಕ – ಸಾಮಾಜಿಕ ಸಂಘಟನೆಯಾಗಿ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಅದು ಯಕ್ಷಗಾನಾಸಕ್ತರಾದ ಅಮ್ಮುಂಜೆ ನಾಗೇಶ್ ನಾಯಕ್, ನಿಟ್ಟೂರು ಸುಂದರ ಶೆಟ್ಟಿ, ಎಂ. ಎಸ್. ಕೃಷ್ಣನ್, ಜಿ.ವಿ.ಶೆಣೈ, ಕೆ. ಆನಂದ ಗಾಣಿಗ, ಯು. ಉಪೇಂದ್ರ ಕೆ. ವಿಶ್ವಜ್ಞ ಶೆಟ್ಟಿ ಇವರೇ ಮೊದಲಾದ ಸಮಾನಾಸಕ್ತರು ಯಕ್ಷಗಾನ ಕಲಾರಂಗವನ್ನು ಸ್ಥಾಪಿಸಿ ಹಿರಿಯ ಸಾಹಿತಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೋಟ ಶಿವರಾಮ ಕಾರಂತರಿಂದ ಉದ್ಘಾಟನೆಗೊಂಡಿತು. ಡಾ.ಬಿ.ಬಿ.ಶೆಟ್ಟಿಯವರು ಉಪಾಧ್ಯಕ್ಷರಾಗಿ , ಪ್ರೊ.ಐ.ನಾರಾಯಣರು ಸ್ಥಾಪಕ ಕಾರ್ಯದರ್ಶಿಯಾದರು.

ಪ್ರೊ.ಬಿ.ವಿ. ಆಚಾರ್ಯರು, ಜಗಜ್ಜೀವನದಾಸ್ ಶೆಟ್ಟಿ, ಡಾ.ತಲ್ಲೂರು ಶಿವರಾಮ ಶೆಟ್ಟಿ ಹಾಗೂ ಕೆ. ಗಣೇಶ್ ರಾವ್ ಇವರ ಅಧ್ಯಕ್ಷತೆಯಲ್ಲಿ ಸಂಸ್ಥೆ ಗಣನೀಯವಾದ ಬೆಳವಣಿಗೆಯನ್ನು ಕಂಡಿತು. ಪ್ರಸ್ತುತ ಎಂ. ಗಂಗಾಧರ ರಾವ್ ಇವರು ಅಧ್ಯಕ್ಷರಾಗಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಅಂತೆಯೇ ವಿಶ್ವಜ್ಞ ಶೆಟ್ಟಿ ಹಾಗೂ ಎಸ್. ವಿ. ಭಟ್ ಇವರ ಕಾರ್ಯದರ್ಶಿತ್ವದಲ್ಲಿ ಕಲಾಹಿರಿಮೆಯನ್ನು ಮೆರೆದ ಈ ಸಂಸ್ಥೆ ಕಳೆದ 30 ವರ್ಷಗಳಿಂದ ಮುರಳಿ ಕಡೆಕಾರ್ ಇವರು ಕಾರ್ಯದರ್ಶಿಯಾಗಿದ್ದು, ಸಾಂಸ್ಕೃತಿಕ – ಸಾಮಾಜಿಕ ಪರವಾದ ಹಲವು ಯೋಜನೆಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ.

ಪ್ರಾರಂಭದಲ್ಲಿ ಕಲಾಸಕ್ತರು ವಾರ್ಷಿಕ ಸದಸ್ಯತ್ವ ಪಡೆದು ಸಂಸ್ಥೆಗೆ ಸೇರ್ಪಡೆಗೊಂಡರು. ಆ ನಂತರದಲ್ಲಿ ಸಂಸ್ಥೆಯ ಕಾರ್ಯವೈಖರಿಯಿಂದ ಪ್ರೇರಿತರಾದ ಆಸಕ್ತ ಯಕ್ಷಗಾನ ಕಲಾಭಿಮಾನಿಗಳು ಅಜೀವ, ಪೋಷಕ ಹಾಗು ಮಹಾಪೋಷಕರಾಗಿ ಸಂಸ್ಥೆಯ ಸದಸ್ಯರಾದರು. ಸಂಸ್ಥೆ 37 ಮಹಾಪೋಷಕರನ್ನು, 151 ಪೋಷಕರನ್ನು ಹಾಗು 984 ಅಜೀವ ಸದಸ್ಯರನ್ನು ಹೊಂದಿದೆ ಎಂದು ತಿಳಿಸಲು ಸಂತೋಷವಾಗುತ್ತದೆ.

ಸಂಸ್ಥೆಯು ನಿರಂತರ ಕ್ರಿಯಾಶೀಲವಾಗಿದ್ದು ತನ್ನ ದಶಮಾನ, ವಿಶಂತಿ ಮತ್ತು ರಜತ ಸಂಭ್ರಮವನ್ನು ವಿಶಿಷ್ಟವಾಗಿ ಆಚರಿಸಿದೆ. ಈ ಸಂದರ್ಭದಲ್ಲಿ ವಿಶಿಷ್ಟ ಕಾರ್ಯಕ್ರಮಗಳೊಂದಿಗೆ ಅರ್ಥಪೂರ್ಣ ಸ್ಮರಣ ಸಂಚಿಕೆಯನ್ನೂ ಪ್ರಕಟಿಸಿದೆ.

ಕಲಾರಸಿಕರಿಗೆ ರುಚಿಶುದ್ಧಿಯ ಯಕ್ಷಗಾನ ಪ್ರದರ್ಶನ ನೀಡುವ ಉದ್ದೇಶದಿಂದ ಸಂಸ್ಥೆ ಸಂಯೋಜನೆಗೊಳಪಟ್ಟ ಕಾಲಮಿತಿಯ ಹಗಲು ಯಕ್ಷಗಾನವನ್ನು ಆರಂಭಿಸಿತು.

ಆನಂತರದಲ್ಲಿ ಯಕ್ಷಗಾನಕ್ಕೆ ಕಾಯಕಲ್ಪ ನೀಡುವ ಕಮ್ಮಟ-ವಿಚಾರ ಸಂಕಿರಣ , ಸ್ತ್ರೀವೇಷ ಕಮ್ಮಟ, ಯುವ ಭಾಗವತರ ಶಿಬಿರ, ಸಾಕ್ಷ್ಷ್ಯಚಿತ್ರ, ಯಕ್ಷನೃತ್ಯ ಪ್ರಾತ್ಯಕ್ಷಿಕೆ, ಒಡ್ಡೋಲಗ ಪ್ರಾತ್ಯಕ್ಷಿಕೆ, ಮಕ್ಕಳ ಯಕ್ಷಗಾನ ಸ್ಪರ್ಧೆ, ಯಕ್ಷಗಾನ ಸ್ಪರ್ಧೆ, ದೊಂದಿ ಬೆಳಕಿನ ಯಕ್ಷಗಾನ, ಯಕ್ಷಗಾನ ಅಷ್ಟಾವಧಾನ, ಗಾನವೈವಿಧ್ಯ, ಏಕವ್ಯಕ್ತಿ ಯಕ್ಷಗಾನ, ಏಕವ್ಯಕ್ತಿ ತಾಳಮದ್ದಲೆ, ತಾಳಮದ್ದಲೆ ಸಪ್ತಾಹ, ವೇಷಗಾರಿಕೆ, ಬಣ್ಣಗಾರಿಕೆ ಶಿಬಿರ, ವಿಶೇಷ ಉಪನ್ಯಾಸಗಳು, ಸಾಧಕರಿಗೆ ಅಭಿನಂದನೆ, ಚಿಂತನ ಸರಣಿ, ಸಂವಾದ ಕಾರ್ಯಕ್ರಮ ಇತ್ಯಾದಿ ಚಟುವಟಿಕೆಗಳನ್ನು ಹಮ್ಮಿಕೊಂಡಿತು.

ಸಂಸ್ಥೆಯು ಪ್ರತೀ ವರ್ಷ ಹಿರಿಯ ಸಾಧಕ ಕಲಾವಿದರಿಗೆ ತಲಾ ರೂಪಾಯಿ 20,000/- ನಗದು ಪುರಸ್ಕಾರದ 20 ಯಕ್ಷಗಾನ ಕಲಾರಂಗ ಪ್ರಶಸ್ತಿಗಳನ್ನು ನೀಡುತ್ತಿದೆ. ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆಗೈದ ವಿದ್ವಾಂಸರಿಗೆ ಅವರ ಸಾಧನೆಯ ಕುರಿತು ಕಾರ್ಯಕ್ರಮ ಆಯೋಜಿಸಿ ರೂ. 40,000/- ನಗದು ಪುರಸ್ಕಾರದೊಂದಿಗೆ ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ ಹಾಗೂ ಯಕ್ಷಗಾನದ ಬೆಳವಣಿಗೆಗೆ ವಿಶೇಷ ಕೊಡುಗೆ ನೀಡಿದ ಸಂಸ್ಥೆಗೆ ರೂ. 50,000/- ನಗದು ಪುರಸ್ಕಾರದ ಶ್ರೀವಿಶ್ವೇಶತೀರ್ಥ ಪ್ರಶಸ್ತಿ ಪ್ರದಾನ ಮಾಡುತ್ತಾ ಬಂದಿದೆ.

ಸಂಸ್ಥೆಯು ಈವರೆಗೆ 21 ಸಂಸ್ಥೆಗಳು ಸೇರಿದಂತೆ ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಲವಾರು ಹಿರಿಯ ಕಲಾವಿದರಿಗೆ ಒಟ್ಟು 355 ಪ್ರಶಸ್ತಿಗಳನ್ನು ನೀಡಿದೆ.

ಗೌಪ್ಯತಾ ನೀತಿ | ನಿಯಮ ಮತ್ತು ಷರತ್ತುಗಳು

ಕೃತಿ ಸ್ವಾಮ್ಯ ಇ-2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿದೆ | ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ  

We're currently hard at work gathering information and crafting content to bring you the best experience. Stay tuned for exciting updates!