Yakshagana Kalaranga

ವಿದ್ಯಾಪೋಷಕ್ ಯಕ್ಷಗಾನ ಕಲಾರಂಗದ 104ನೆಯ ಮನೆ ಹಸ್ತಾಂತರ

ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‍ನ ದ್ವಿತೀಯ ಪಿಯುಸಿ ವಿದ್ಯಾರ್ಥಿ ವಿನಯ್ ಆಚಾರ್ಯ (ಲತಾ ಮತ್ತು ಗೋಪಾಲ ಆಚಾರ್ಯರ ಪುತ್ರ) ಇವನಿಗೆ ಕಾಪು ತಾಲೂಕಿನ ಮುದರಂಗಡಿಯಲ್ಲಿ, ನಿಟ್ಟೆ ವಿಶ್ವವಿದ್ಯಾಲಯದ ನಿರ್ದೇಶಕರಾದ ಜಪಾನ್‍ನ ಅಲೆವೂರು ಹರಿಕೃಷ್ಣ ಭಟ್ ಮತ್ತು ಪತ್ನಿ ಯಸುಕೊ ಸತೊ ಇವರ ಪ್ರಾಯೋಜಕತ್ವದಲ್ಲಿ ರೂ.7 ಲಕ್ಷ ವೆಚ್ಚದಲ್ಲಿ ಪೂರ್ಣಗೊಳಿಸಿದ ಮನೆ ‘ಶಾಂತಿ ನಿಲಯ’ವನ್ನು ಇಂದು (03.10.2026) ಹರಿಕೃಷ್ಣ ಭಟ್ ದಂಪತಿಗಳು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಅವರು ತನ್ನ ಬಾಲ್ಯದ ಕಷ್ಟದ ದಿನಗಳನ್ನು ನೆನಪಿಸಿಕೊಂಡು ನಾನೂ ಬೇರೆಯವರ ಸಹಾಯ ಪಡೆದು ಈ ಸಾಧನೆ ಮಾಡಲು ಸಾಧ್ಯವಾಯಿತು. ವಿನಯನು ಒಳ್ಳೆಯ ಅಂಕ ಗಳಿಸಿ ನಿಟ್ಟೆ ವಿಶ್ವವಿದ್ಯಾಲಯದಲ್ಲಿ ಕಲಿತು ಜಪಾನಿನಲ್ಲಿ ಉದ್ಯೋಗ ಪಡೆಯಲು ಸಾಧ್ಯವಿದೆ ಎಂದರು. ಶ್ರೀಮತಿ ಯಸುಕೊ ಸತೊ ಕನ್ನಡದಲ್ಲಿ ಶುಭಕೋರಿದರು. ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಯಕ್ಷಗಾನ ಕಲಾರಂಗದ ಕಾರ್ಯಕ್ರಮಗಳನ್ನು ನಾವು ತಪ್ಪಿಸಿಕೊಳ್ಳುವುದಿಲ್ಲ. ಅವರ ಪ್ರತಿಯೊಂದು ಕೆಲಸದಲ್ಲೂ ಸಮಾಜಕ್ಕೊಂದು ಸಂದೇಶವಿರುತ್ತದೆ. ಬಡವಿದ್ಯಾರ್ಥಿಗಳ ಕುರಿತು ಅವರು ಮಾಡುವ ಕೆಲಸ ಅತ್ಯಂತ ಶ್ಲಾಘನೀಯ ಎಂದು ಹೇಳಿದರು. ಹಿರಿಯರಾದ ಎ. ರಘುಪತಿ ಭಟ್ ಮಾತನಾಡಿ ಅನೇಕರಿಗೆ ಯಕ್ಷಗಾನ ಕಲಾರಂಗದ ಕಾರ್ಯಚಟುವಟಿಕೆಯನ್ನು ಪರಿಚಯಿಸಿದ್ದೇನೆ. ನನ್ನ ತಮ್ಮ ಮಾಡಿದ ಈ ಕೆಲಸ ನನಗೆ ಅತ್ಯಂತ ಸಂತೋಷ ತಂದಿದೆ ಎಂದರು.ಗೋವಾ ರಾಜ್ಯ ಉನ್ನತ ಶಿಕ್ಷಣ ಸಮಿತಿ ಉಪಾಧ್ಯಕ್ಷ ಡಾ. ಗೋಪಾಲ್ ಮುಗೇರಾಯರು ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುವುದರಿಂದ ಅವರು ಬದುಕು ಕಟ್ಟಿಕೊಳ್ಳುವುದು ಸಾಧ್ಯವಾಗುತ್ತದೆ. ನನ್ನ ವಿದ್ಯಾಗುರುಗಳಾದ ಡಾ.ಹರಿಕೃಷ್ಣ ಭಟ್ ಇಲ್ಲಿಯ ಯುವಕರಿಗೆ ಜಪಾನಿನಲ್ಲಿ ಉದ್ಯೋಗ ಕೊಡುವ ಕೆಲಸವನ್ನು ಮಾಡುತ್ತಿದ್ದಾರೆ. ಹುಟ್ಟೂರಿನ ಮೇಲಿನ ಪ್ರೀತಿ ಅವರಿಂದ ಇಂತಹ ಸತ್ಕಾರ್ಯವನ್ನು ಮಾಡಿಸುತ್ತಿದೆ ಎಂದರು. ನಿಟ್ಟೆ ಯೂನಿವರ್ಸಿಟಿಯ ಸಹಾಯಕ ಪ್ರೊಫೆಸರ್ ಡಾ. ರಾಘವೇಂದ್ರ ಪೈ ಅವರು ಡಾ.ಹರಿಕೃಷ್ಣ ಭಟ್ಟರ ಉನ್ನತ ಸಾಧನೆಯನ್ನು ಪರಿಚಯಿಸಿದರು. ಮನೆಯ ಇಂಜಿನಿಯರ್ ಮುಬಾರಕ್ ಇವರನ್ನು ಗೌರವಿಸಲಾಯಿತು.ವೇದಿಕೆಯಲ್ಲಿ ರಾಜಾ ರಾವ್-ವತ್ಸಲಾ ದಂಪತಿ, ಶೋಭಾ ಗೋಪಾಲ್ ಮುಗೇರಾಯ ಉಪಸ್ಥಿತರಿದ್ದರು.ಸಂಸ್ಥೆಯ ಉಪಾಧ್ಯಕ್ಷ ವಿ.ಜಿ.ಶೆಟ್ಟಿ, ಕೋಶಾಧಿಕಾರಿ ಕೆ. ಸದಾಶಿವ ರಾವ್, ಸದಸ್ಯರುಗಳಾದ ಯು.ಎಸ್. ರಾಜಗೋಪಾಲ ಆಚಾರ್ಯ, ವಿಜಯಕುಮಾರ್ ಮುದ್ರಾಡಿ, ಯು. ಅನಂತರಾಜ ಉಪಾಧ್ಯ, ಭುವನಪ್ರಸಾದ ಹೆಗ್ಡೆ, ಡಾ.ರಾಜೇಶ್ ನಾವುಡ, ಮರ್ಣೆ ಉಮೇಶ ಭಟ್, ಎಲ್ಲೂರು ಗಣೇಶ ರಾವ್, ಆರ್. ವಸಂತ, ವಿಶ್ವನಾಥ, ವಿನೀತ್,ನಿವೃತ್ತ ಪ್ರಾಂಶುಪಾಲರಾದ ಶ್ರೀನಿವಾಸ ಪ್ರಭು, ಅದಮಾರು ಶಾಲಾ ಮುಖ್ಯೋಪಾಧ್ಯಾಯ ಶ್ರೀಕಾಂತ ಆಚಾರ್, ಉದ್ಯಮಿ ವೀರೇಂದ್ರ ಹೆಗ್ಡೆ ಭಾಗವಹಿಸಿದ್ದರು.ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ.ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

We're currently hard at work gathering information and crafting content to bring you the best experience. Stay tuned for exciting updates!