



ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‌ನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮನೀಷಾ ಖಾರ್ವಿ (ಶ್ರೀಮತಿ ಅನಿತಾ ಮತ್ತು ಶ್ರೀ ಮಂಜುನಾಥ ಖಾರ್ವಿ ಇವರ ಪುತ್ರಿ, sslc 95%,1 puc 97%) ಇವಳಿಗೆ ಗಂಗೊಳ್ಳಿಯಲ್ಲಿ, ತನ್ನ ಮಾತಾಪಿತೃಗಳಾದ ಜಲಜಾಕ್ಷಿ ಮತ್ತು ರಾಘವೇಂದ್ರ ರಾವ್ ಇವರ ಸ್ಮರಣೆಯಲ್ಲಿ ಅವರ ಸುಪುತ್ರ ಮುಂಬೈಯ ಶ್ರೀ ಆರ್. ಸುಂದರ ರಾವ್ ಮತ್ತು ಸೊಸೆ ಶ್ರೀಮತಿ ಪ್ರೇಮಾ ಇವರ ಪ್ರಾಯೋಜಕತ್ವದಲ್ಲಿ ನಿರ್ಮಿಸಿದ ನೂತನ ಮನೆ ‘ಶ್ರೀ ರಾಘವೇಂದ್ರ ನಿಲಯ’ ನಿನ್ನೆ (12.06.2026) ಉದ್ಘಾಟನೆಗೊಂಡಿತು. ಜ್ಯೋತಿ ಬೆಳಗಿಸಿದ ಸುಂದರ ರಾವ್ ಮಾತನಾಡಿ ನನ್ನ ತಂದೆ ಕಡು ಬಡತನದಲ್ಲಿ ಮುಂಬೈಗೆ ಹೋಗಿ ಹೋಟೆಲ್ ಆರಂಭಿಸಿದ್ದನ್ನು ಸ್ಮರಿಸಿಕೊಂಡರು. ಪರೋಪಕಾರಿಯಾಗಿದ್ಧ ಅವರ ಸ್ಮರಣೆಯಲ್ಲಿ ಬಡವರಿಗೆ ಸಹಾಯ ಮಾಡಬೇಕೆಂಬ ಅಪೇಕ್ಷೆಯನ್ನು ನನ್ನ ಮಡದಿ ವ್ಯಕ್ತಪಡಿಸಿದಳು. ರಘುರಾಮ ಆಚಾರ್ಯರು ವಿದ್ಯಾಪೋಷಕ್ ವಿದ್ಯಾರ್ಥಿಗಳಿಗೆ ಈ ಸಂಸ್ಥೆ ಮನೆಕಟ್ಟಿಸಿ ಕೊಡುವ ವಿಷಯ ಹೇಳಿದರು. ಎರಡೂ ಕೂಡಿ ಬಂತು ಸತ್ಪಾತ್ರಕ್ಕೆ ಸಂದಾಯವಾದುದಕ್ಕೆ ಈಗ ನಾವು ಅತ್ಯಂತ ಸಂತೋಷಗೊಂಡಿದ್ದೇವೆ ಎಂದರು.
ಕೊಲೆಕಾಡಿಯ ವೇದಮೂರ್ತಿ ವಾದಿರಾಜ ಉಪಾಧ್ಯಾಯರು ಶುಭಾಶಂಸನೆಗೈದು ಯಕ್ಷಗಾನ ಕಲಾರಂಗ ಸಂಯೋಜಿಸುವ ಒಳ್ಳೆಯ ಆಟ ಕೂಟಗಳಲ್ಲಿ ಭಾಗವಹಿಸಿ ಆನಂದ ಅನುಭವಿಸಿದ್ದೆ. ಅವರ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳ ಬಗ್ಗೆ ಕೇಳಿದ್ದೆ ಈಗ ಅದನ್ನು ಪ್ರತ್ಯಕ್ಷ ನೋಡುವ ಅವಕಾಶ ಒದಗಿತು. ಈ ಸಂಸ್ಥೆಗೆ ಭಗವದನುಗ್ರಹ ಸದಾ ಇರಲೆಂದು ಹಾರೈಸಿದರು. ಶ್ರೀ ಪೇಜಾವರ ಮಠದ ದಿವಾನರಾದ ರಘುರಾಮ ಆಚಾರ್ಯರು ದಿನದ ಇಪ್ಪತ್ನಾಲ್ಕು ಗಂಟೆಯೂ ಕಲೆ, ಸಮಾಜ, ಶಿಕ್ಷಣಕ್ಕಾಗಿ ಯೋಚಿಸುತ್ತಾ ಕೆಲಸ ಮಾಡುವ ಇಂತಹ ಇನ್ನೊಂದು ಸಂಸ್ಥೆಯನ್ನು ನಾನು ಕಂಡಿಲ್ಲ ಎಂದರು. ಕುಂದಾಪುರ ಓಂ ಟೈಲ್ಸ್ ನ ಮಾಲಕರಾದ ಸೀತಾರಾಮ ನಕ್ಕತ್ತಾಯ ಮಾತನಾಡಿ ವಿದ್ಯಾಪೋಷಕ್ ಮೂಲಕ ನಿಮ್ಮ ಸಂಸ್ಥೆ ಮಾಡುತ್ತಿರುವ ಕೆಲಸ ಅಗಾಧವಾದುದು. ತಾನು ಆಡಳಿತ ಸಮಿತಿಯ ಸದಸ್ಯನಾಗಿರುವ ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾಪೋಷಕ್ ವಿದ್ಯಾರ್ಥಿಗಳ ಕಾಲೇಜು ಶುಲ್ಕದಲ್ಲಿ ರಿಯಾಯತಿಗಾಗಿ ಪ್ರಯತ್ನಿಸುತ್ತೇನೆ ಎಂದರು. ವೇದಿಕೆಯಲ್ಲಿ ಸುಂದರ ರಾಯರ ಬಂಧುಗಳಾದ ಸುಶೀಲ ಮುಗೆರಾಯ, ಎಚ್.ವಿ. ರಮಾದೇವಿ, ಗೀತಾ ಆರ್. ಆಚಾರ್ಯ ಹಾಗೂ ಪಂಚಾಯತ್ ಅಧ್ಯಕ್ಷೆ ಜಯಂತಿ ಮೇಡಮ್ ಉಪಸ್ಥಿತರಿದ್ದರು. ಪೇಜಾವರ ಮಠದ ವಿಷ್ಣುಮೂರ್ತಿ ಆಚಾರ್ಯ, ಸ್ನೇಹಾ ವಿ. ಆಚಾರ್ಯ, ಸಂಸ್ಥೆಯ ಉಪಾಧ್ಯಕ್ಷ ಪಿ. ಕಿಶನ್ ಹೆಗ್ಡೆ, ಕೋಶಾಧಿಕಾರಿ ಕೆ. ಸದಾಶಿವ ರಾವ್, ಸದಸ್ಯರುಗಳಾದ ಯು. ವಿಶ್ವನಾಥ ಶೆಣೈ, ಯು.ಎಸ್. ರಾಜಗೋಪಾಲ ಆಚಾರ್ಯ, ವಿಜಯ ಕುಮಾರ್ ಮುದ್ರಾಡಿ, ಭುವನಪ್ರಸಾದ್ ಹೆಗ್ಡೆ, ಹಿರಿಯಣ್ಣ ಕಿದಿಯೂರ್, ಸುಜಯೀಂದ್ರ ಹಂದೆ, ಜಯರಾಮ ಪಡಿಯಾರ್, ವಿದ್ಯಾಪೋಷಕ್ ಫಲಾನುಭವಿಗಳಾದ ಡಾ.ದೀಪಿಕಾ ಶಾನುಭಾಗ್, ನಿಶಾ, ಶ್ರಾವ್ಯ, ನಿಸರ್ಗ ಭಾಗವಹಿಸದ್ದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.