Yakshagana Kalaranga

ಯಕ್ಷಗಾನ ಮಾರ್ಗದರ್ಶಿ ಶಿಬಿರ – 2026 ಸಮಾರೋಪ ಮತ್ತು ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ ಸಮಾರಂಭ – 2026

MALYADI_CLICKK
MALYADI_CLICKK
MALYADI_CLICKK
MALYADI_CLICKK
MALYADI_CLICKK
MALYADI_CLICKK
MALYADI_CLICKK
MALYADI_CLICKK
MALYADI_CLICKK
MALYADI_CLICKK

ವೃತ್ತಿ ಮೇಳದ ಯುವ ಕಲಾವಿದರಿಗೆ ಯಕ್ಷಗಾನ ಕಲಾರಂಗವು ಆಯೋಜಿಸಿದ್ದ ನಾಲ್ಕು ದಿನಗಳ ಮಾರ್ಗದರ್ಶಿ ಶಿಬಿರದ ಸಮಾರೋಪ ಮತ್ತು ಸಂಸ್ಥೆ ಯಕ್ಷ ವಿದ್ವಾಂಸರಿಗೆ ನೀಡುತ್ತಾ ಬಂದ ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ನೆನಪಿನ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ಸಮಾರಂಭವು ಸಂಸ್ಥೆಯ ಐವೈಸಿ ಸಭಾಭವನದಲ್ಲಿ ಇಂದು (05.06.2026) ಜರುಗಿತು. 60000 ರೂ. ನಗದನ್ನೊಳಗೊಂಡ ಈ ಪ್ರಶಸ್ತಿಯನ್ನು ಹೊರನಾಡು ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನ ಧರ್ಮಕರ್ತೃ ಡಾ. ಜಿ. ಭೀಮೇಶ್ವರ ಜೋಶಿಯವರು ಪ್ರದಾನ ಮಾಡಿ, ಕಲಾರಂಗವು ಕಲೆ-ಶಿಕ್ಷಣ-ಸಮಾಜಕ್ಕೆ ಮಾಡುತ್ತಿರುವ ಸೇವೆ ಅನ್ಯಾದೃಶ. ಸಮರ್ಥ ನಾಯಕತ್ವ, ಸಮರ್ಪಣಾ ಭಾವದ ಕಾರ್ಯಕರ್ತರ ತಂಡ ಏನೆಲ್ಲ ಮಾಡಬಹುದು ಎಂಬುದಕ್ಕೆ ಈ ಸಂಸ್ಥೆ ಅತ್ಯುತ್ತಮ ಉದಾಹರಣೆಯಾಗಿದೆ ಎಂದರು. ಅಭಿನಂದನಾ ನುಡಿಯೊಂದಿಗೆ ಶುಭ ಹಾರೈಸಿದ ಹಿರಿಯ ವಿದ್ವಾಂಸರಾದ ಡಾ. ಬಿ. ಎ. ವಿವೇಕ ರೈ ಅವರು ತಮ್ಮ ನಿಡುಗಾಲದ ಸ್ನೇಹಿತ ಡಾ. ಚಂದ್ರಶೇಖರ ದಾಮ್ಲೆಯವರ ಸಾಧನೆಗಳನ್ನು ಪರಿಚಯಿಸಿದರು. ಶಿಬಿರಾರ್ಥಿಗಳನ್ನು ಉದ್ದೇಶಿಸಿ ಯಕ್ಷಗಾನದ ವಾಚಿಕ ಅತ್ಯಂತ ಸಮೃದ್ಧವಾದುದು.ಶುದ್ಧ ಉಚ್ಚಾರ, ಸ್ಪಷ್ಟ ಮಾತುಗಾರಿಕೆಯಿಂದ ನೀವೆಲ್ಲ ಈ ಕ್ಷೇತ್ರದ ಶ್ರೇಷ್ಠ ಕಲಾವಿದರಾಗಿ ಎಂದು ಶುಭ ಕೋರಿದರು. ಪ್ರಶಸ್ತಿ ಸ್ವೀಕರಿಸಿದ ಡಾ. ದಾಮ್ಲೆಯವರು ಯಕ್ಷಗಾನದ ಹಿತರಕ್ಷಣೆಗಾಗಿ ವೇದಿಕೆ ಸ್ಥಾಪಿಸಿದೆ, ಮಕ್ಕಳಿಗೆ ತರಬೇತಿ ನೀಡಿ ಪ್ರದರ್ಶನ ಏರ್ಪಡಿಸಿದೆ, ಕಮ್ಮಟ-ಕಾರ್ಯಾಗಾರ ಆಯೋಜಿಸಿದೆ. ಇದೇ ಕೆಲಸವನ್ನು ಯಕ್ಷಗಾನ ಕಲಾರಂಗ ಈ ಭಾಗದಲ್ಲಿ ಎಲ್ಲರ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆಸುತ್ತಿದೆ. ಇಂತಹ ಸಂಸ್ಥೆಯಿಂದ ಈ ಪ್ರಶಸ್ತಿ ಸ್ವೀಕರಿಸಿರುವುದು ಧನ್ಯತೆ ತಂದಿದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ಮಾತನಾಡಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ ನ ಮೂಲಕ ನಮ್ಮ ಹಿರಿಯರ ನೆನಪಿನಲ್ಲಿ ಡಾ. ಚಂದ್ರಶೇಖರ ದಾಮ್ಲೆಯವರಂತಹ ಸಾಧಕ ವಿದ್ವಾಂಸರಿಗೆ ಪ್ರಶಸ್ತಿ ನೀಡಿರುವುದು ಅತ್ಯಂತ ಸಂತೋಷ ತಂದಿದೆ. ಯಕ್ಷಗಾನ ಕಲಾರಂಗದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿರುವುದು ಅಭಿಮಾನದ ವಿಷಯವಾಗಿದೆ ಎಂದರು.ಇದೇ ಸಂದರ್ಭದಲ್ಲಿ ಶ್ರೀಮತಿ ಜಯಲಕ್ಮೀ ಸಿ. ದಾಮ್ಲೆ ಮತ್ತು ಅಕ್ಷರ ದಾಮ್ಲೆಯವರನ್ನೂ ಗೌರವಿಸಲಾಯಿತು.ತಲ್ಲೂರು ಫ್ಯಾಮಿಲಿ ಟ್ರಸ್ಟ್ ನ ವಿಶ್ವಸ್ಥರಾದ ಗಿರಿಜಾ ಶಿವರಾಮ ಶೆಟ್ಟಿ,ತಲ್ಲೂರು ಶಿವಪ್ರಸಾದ್ ಶೆಟ್ಟಿ,ಸುನಿಲ್ ಕುಮಾರ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆರಂಭದಲ್ಲಿ ಶಿಬಿರಾರ್ಥಿಗಳಾದ ಶ್ರೇಯಸ್,ಸುಧೀರ್ ಉಪ್ಪೂರು, ಶಿವಕುಮಾರ್ ಅಳಗೊಡು, ವಿನಯ್ ಬೇರೊಳ್ಳಿ, ಚಂದ್ರಹಾಸ ಗೌಡ ಹೊಸಪಟ್ಟಣ,ಶಿವಮೂರ್ತಿ ತಾರೇಕೋಡ್ಲು ತಮ್ಮ ಅನುಭವ ಹಂಚಿಕೊಂಡರು. ಶಿಬಿರದ ನಿರ್ದೇಶಕ ಪವನ್ ಕಿರಣ್ ಕೆರೆಯವರು ಇಂತಹ ಶಿಬಿರವು ಕಲಾವಿದರು ತಮ್ಮ ಕಲಾ ಕೌಶಲವನ್ನು ಅಭಿವರ್ಧಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು. ನಾಲ್ಕೂ ದಿನ ಶಿಬಿರಾರ್ಥಿಗಳೊಂದಿಗಿದ್ದು ಮಾರ್ಗದರ್ಶನ ನೀಡಿದ ಹಿರಿಯ ಕಲಾವಿದರಾದ ಕೊಂಡದಕುಳಿ ರಾಮಚಂದ್ರ ಹೆಗಡೆ, ಅನಂತ ಪದ್ಮನಾಭ ಪಾಠಕರನ್ನು ಗೌರವಿಸಲಾಯಿತು. ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ, ಉಪಯುಕ್ತ ಪುಸ್ತಕಗಳೊಂದಿಗೆ ಗೌರವ ಸಂಭಾವನೆ ವಿತರಿಸಲಾಯಿತು. ಕಲಾರಂಗದ ಅಧ್ಯಕ್ಷರೂ, ಶಿಬಿರದ ಪ್ರಾಯೋಜಕರೂ ಆದ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ಧನ್ಯವಾದ ಸಮರ್ಪಿಸಿದರು. ವಿದ್ಯಾಪ್ರಸಾದ್ ಸಹಕರಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

We're currently hard at work gathering information and crafting content to bring you the best experience. Stay tuned for exciting updates!