



ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ ನ, ವಿವೇಕ ವಿದ್ಯಾಸಂಸ್ಥೆಯ,ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕೀರ್ತನಾ ( ಶ್ರೀದೇವಿ ಮತ್ತು ಕೇಶವ ಆಚಾರ್ ಇವರ ಪುತ್ರಿ) ಇವಳಿಗೆ ಕುಂದಾಪುರ ತಾಲೂಕಿನ ಹಳ್ಳಾಡಿಯಲ್ಲಿ, ಉಡುಪಿಯ ನಿವೃತ್ತ ಉಪತಹಶೀಲ್ದಾರ್ ವಿಷ್ಣುಮೂರ್ತಿ ಭಟ್ ಇವರು ತಮ್ಮ ಮಾತಾ-ಪಿತೃಗಳಾದ ಯಮುನಮ್ಮ ಮತ್ತು ಮಾಧವ ಭಟ್ ಇವರ ಸ್ಮರಣೆಯಲ್ಲಿ ರೂ.7 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ನೂತನ ಮನೆ ‘ಯಮುನಾಮಾಧವ’ 21.08.2026ರಂದು ಉದ್ಘಾಟನೆಗೊಂಡಿತು. ಜ್ಯೋತಿ ಬೆಳಗಿಸಿದ ವಿಷ್ಣುಮೂರ್ತಿ ಭಟ್ ಅವರು ನನಗೆ ಯಕ್ಷಗಾನ ಕಲಾರಂಗವನ್ನು ಪರಿಚಯಿಸಿದವರು ಹಿರಿಯ ಬಂಧುಗಳಾದ ಯು. ಎಸ್. ರಾಜಗೋಪಾಲ ಆಚಾರ್ಯರು. ಕಳೆದ ಮೂರು ವರ್ಷಗಳಿಂದ ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ಹತ್ತಿರದಿಂದ ಗಮನಿಸುತ್ತಿದ್ದೇನೆ. ಸಮಾಜಕ್ಕೆ ಇವರು ಪ್ರಾಮಾಣಿಕವಾಗಿ ಮಾಡುವ ಸೇವೆಗೆ ಮಾರು ಹೋಗಿದ್ದೇನೆ. ಮನೆ ನಿರ್ಮಿಸಿಕೊಡುವ ಅವಕಾಶವನ್ನು ಕಲ್ಪಿಸಿ ನನ್ನನ್ನು ಧನ್ಯರಾಗಿಸಿದ್ದಾರೆ ಎಂದರು. ನಿವೃತ್ತ ಶಿಕ್ಷಕಿ ಶಕುಂತಲಾಬಾಯಿ ಮಾತನಾಡಿ ಸ್ವಾರ್ಥ ಮತ್ತು ಭ್ರಷ್ಟಾಚಾರವೇ ತುಂಬಿರುವ ಸಮಾಜದಲ್ಲಿ ಯಕ್ಷಗಾನ ಕಲಾರಂಗದ ಶಿಕ್ಷಣ-ಕಲೆ-ಸಮಾಜಮುಖಿ ಕಾರ್ಯಕ್ರಮಗಳ ಕುರಿತು ಕೇಳಿ ಆಶ್ಚರ್ಯವೂ ಆನಂದವೂ ಆಯಿತು. ಇವರ ಈ ನಿಸ್ಪೃಹ ಸೇವೆ ಹೀಗೇ ಮುಂದುವರಿಯಲಿ ಎಂದು ಶುಭ ಕೋರಿದರು. ವಿವೇಕ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಗದೀಶ್ ನಾವುಡರು ಯಕ್ಷಗಾನ ಕಲಾರಂಗ ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುವ ರೀತಿ ಅನ್ಯಾದೃಶ. ಈ ಮೂವರು ಸಹೋದರಿಯರು ಶಿಕ್ಷಣ ಮುಗಿಸಿ ಒಳ್ಳೆಯ ಉದ್ಯೋಗ ಪಡೆಯಲೆಂದು ಶುಭ ಹಾರೈಸಿ, ನಮ್ಮ ಸಂಸ್ಥೆಯಲ್ಲಿ ಕಲಿಯುವ ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿಗಳ ಶುಲ್ಕದಲ್ಲಿ ರಿಯಾಯಿತಿ ನೀಡಿ ಯಕ್ಷಗಾನ ಕಲಾರಂಗದ ಸತ್ಕಾರ್ಯದಲ್ಲಿ ನಮ್ಮ ಸಂಸ್ಥೆಯು ಕೈಜೋಡಿಸಲು ಪರಿಶೀಲಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಸಾವಿತ್ರಿ ವಿ ಭಟ್, ಕಿರಣ್ ಕಾಪು, ಹಯಗ್ರೀವ ಭಟ್, ಗೀತಾ ಎಚ್. ಭಟ್, ರವಿಪ್ರಕಾಶ್, ಸುಮಂಗಲಾ, ಡಾ. ಬದರೀಶ, ಗಣೇಶ ತುಂಗ, ನಾರಾಯಣ ತುಂಗ, ಹೇಮಾ ಎನ್. ತುಂಗ, ಸರೋಜ, ಅನುಷಾ, ಲಕ್ಷ್ಮೀನಾರಾಯಣ ಆಚಾರ್ಯ, ನಾಗರಾಜ ಭಟ್, ಚಂದ್ರಕಾಂತ್ ಕೆ. ಎನ್,ರಂಗನಾಥ ಸಾಮಗ ವೇದಿಕೆಯಲ್ಲಿ ಅಭ್ಯಾಗತರಾಗಿ ಪಾಲ್ಗೊಂಡಿದ್ದರು.ಕೆ. ಪಿ. ಎಸ್. ಬಿದ್ಕಲ್ಕಟ್ಟೆಯ ಮುಖ್ಯೋಪಾಧ್ಯಾಯ ಕರುಣಾಕರ ಶೆಟ್ಟಿ, ಪಂಚಾಯತ್ ಮಾಜಿ ಅಧ್ಯಕ್ಷೆ ದೀಪಾ ಶೆಟ್ಟಿ ಉಪಸ್ಥಿತರಿದ್ದರು. ಸಂಸ್ಥೆಯ ಕೋಶಾಧಿಕಾರಿ ಕೆ.ಸದಾಶಿವ ರಾವ್, ಸದಸ್ಯರುಗಳಾದ ಯು. ವಿಶ್ವನಾಥ ಶೆಣೈ, ಯು.ಎಸ್. ರಾಜಗೋಪಾಲ ಆಚಾರ್ಯ, ವಿಜಯಕುಮಾರ್ ಮುದ್ರಾಡಿ, ಯು. ಅನಂತರಾಜ ಉಪಾಧ್ಯ, ಭುವನಪ್ರಸಾದ ಹೆಗ್ಡೆ,ಡಾ.ರಾಜೇಶ್ ನಾವುಡ,ಅಶೋಕ್ ಎಂ.,ಮರ್ಣೆ ಉಮೇಶ ಭಟ್,ಡಾ. ಪ್ರತಿಮಾ ಜೆ. ಆಚಾರ್ಯ,ಜಯರಾಮ ಪಡಿಯಾರ್, ಆರ್. ವಸಂತ ಭಾಗವಹಿಸಿದ್ದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.