Yakshagana Kalaranga

ವಿದ್ಯಾಪೋಷಕ್ ವಿದ್ಯಾರ್ಥಿ ಮತ್ತು ಪೋಷಕರ ಸಮಾವೇಶ

ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಗೆ ಈ ವರ್ಷ ಆಯ್ಕೆಗೊಂಡ ಪ್ರಥಮ ಪಿ.ಯು ವಿದ್ಯಾರ್ಥಿಗಳ ಮತ್ತು ಹೆತ್ತವರ ಒಂದು ದಿನದ ಸಮಾಲೋಚನಾ ಸಭೆಯನ್ನು ಯಕ್ಷಗಾನ ಕಲಾರಂಗದ ಐವೈಸಿ ಸಭಾಭವನದಲ್ಲಿ 25.08.2026 ರಂದು ಆಯೋಜಿಸಿತ್ತು. ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಮಣಿಪಾಲ ಡಾ. ಟಿ. ಎಂ. ಎ. ಪೈ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷರಾದ ಶ್ರೀ ಟಿ. ಅಶೋಕ್ ಪೈ ಅವರು ಮಾತನಾಡಿ ಐವತ್ತು ವರ್ಷಗಳ ಹಿಂದೆ ಹೆಣ್ಣುಮಕ್ಕಳು ಶಾಲೆಗೆ ಹೋಗಲು ಹಿಂಜರಿಯುತ್ತಿದ್ದ ಕಾಲದಲ್ಲಿ ಡಾ. ಟಿ. ಎಂ. ಎ. ಪೈ ಅವರು ಸ್ಥಾಪಿಸಿದ ವಿದ್ಯಾ ಸಂಸ್ಥೆಗಳಲ್ಲಿ ಹುಡುಗಿಯರ ಶಿಕ್ಷಣಕ್ಕೆ ಮಹತ್ತ್ವ ಕೊಟ್ಟಿದ್ದರು. ಇವತ್ತು ಈ ಸಭಾಂಗಣದಲ್ಲಿ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರೆ ಸಮಾಹಿತರಾಗಿರುವುದನ್ನು ಕಂಡು ಸಂತೋಷವಾಯಿತು. ಯಕ್ಷಗಾನ ಕಲಾರಂಗ ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ಮನೆ ಭೇಟಿ ಮಾಡಿ ಆಯ್ಕೆ ಮಾಡುವ ಕ್ರಮ, ಮನೆ ನಿರ್ಮಾಣವು ಸೇರಿದಂತೆ ಆ ಕುಟುಂಬದ ಎಲ್ಲಾ ಸಂಕಷ್ಟಗಳಿಗೆ ಸ್ಪಂಧಿಸುವ ರೀತಿಯನ್ನು ಕಂಡು ಬೆರಗಾಗಿದ್ದೇನೆ. ಈ ಸಂಸ್ಥೆಯೊಂದಿಗೆ ನಮ್ಮ ಟ್ರಸ್ಟ್ ಸದಾ ಇರುತ್ತದೆ ಎಂದು ಹೇಳಿದರು. ಕೃಷ್ಣಪ್ರಸಾದ್ ಕ್ಯಾಶ್ಯೂ ಇಂಡಸ್ಟ್ರೀಸ್‍ನ ಮಾಲಕರಾದ ಸಂಪತ್ ಕುಮಾರ್ ಶೆಟ್ಟಿಯವರು ತಾನು ಕಂಡ ಕನಸನ್ನು ನನಸಾಗಿಸುವಲ್ಲಿ ವಹಿಸಿದ ಶ್ರಮ ಹಾಗೂ ಇಂದು ಅದನ್ನು ನನಸಾಗಿಸಿ ಹಲವರಿಗೆ ಉದ್ಯೋಗವಕಾಶವನ್ನು ಕಲ್ಪಿಸಿದನ್ನು ಉದಾಹರಿಸಿ ಕೇವಲ ಕನಸು ಕಾಣುತ್ತಾ ಕುಳಿತರೆ ನಮ್ಮ ಉದ್ದೇಶಿತ ಗುರಿಯನ್ನು ಸಾಧಿಸಲು ಸಾಧ್ಯವಾಗದು. ಅದಕ್ಕೆ ನಿರಂತರ ಪರಿಶ್ರಮ ಬೇಕು ಎಂಬ ಸಂದೇಶವನ್ನು ಮಕ್ಕಳಿಗೆ ನೀಡಿ ಯಕ್ಷಗಾನ ಕಲಾರಂಗದೊಂದಿಗೆ ನಾನು ಕೈಜೋಡಿಸುತ್ತೇನೆ ಎಂಬ ಭರವಸೆ ನೀಡಿದರು. ವೇದಿಕೆಯಲ್ಲಿ ಉಜ್ವಲ ಡೆವಲಪರ್ಸ್‍ನ ಪುರುಷೋತ್ತಮ ಪಿ. ಶೆಟ್ಟಿ, ಯು. ಎಸ್. ನಾಯಕ್ ಚಾರಿಟೇಬಲ್ ಟ್ರಸ್ಟ್‍ನ ಸಿಎ ಸುರೇಶ ನಾಯಕ್, ಮಲ್ನಾಡ್ ಕ್ಯಾಶ್ಯೂವಿನ ಎಚ್. ನಾಗರಾಜ ಶೆಟ್ಟಿ ಅಭ್ಯಾಗತರಾಗಿ ಭಾಗವಹಿಸಿದ್ದರು. ಸಂಸ್ಥೆಯ ಉಪಾಧ್ಯಕ್ಷರುಗಳಾದ ಪಿ. ಕಿಶನ್ ಹೆಗ್ಡೆ, ವಿ. ಜಿ. ಶೆಟ್ಟಿ ಹಾಗೂ ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ. ಸುದರ್ಶನ ಮೂರ್ತಿ ಮತ್ತು ಡಾ. ಲಕ್ಷ್ಮೀ ಎಸ್. ಮೂರ್ತಿ ಮಾರ್ಗದರ್ಶಿ ಮಾತುಗಳನ್ನಾಡಿದರು. ಹುಬ್ಬಳ್ಳಿಯ ಮೈ ಲೈಫ್ ಸಂಸ್ಥೆಯ ಸ್ಥಾಪಕರಾದ ಪ್ರವೀಣ್ ಗುಡಿ ಚಿಕ್ಕ ಚಿಕ್ಕ ಕೆಲಸಗಳನ್ನೂ ಶಿಸ್ತಿನಿಂದ ಮಾಡುತ್ತಾ ಸತತ ಕ್ರಿಯಾಶೀಲರಾದರೆ ದೊಡ್ಡ ಸಾಧಕರಾಗುವುದು ಕಷ್ಟವಾಗದೆಂದು ವಿದ್ಯಾರ್ಥಿಗಳಿಗೆ ಅಭಿಪ್ರೇರಕ ಮಾತುಗಳನ್ನಾಡಿದರು. ಸಂಸ್ಥೆಯ ಸದಸ್ಯರುಗಳಾದ ಯು.ವಿಶ್ವನಾಥ ಶೆಣೈ, ಯು. ಎಸ್. ರಾಜಗೋಪಾಲ ಆಚಾರ್ಯ, ವಿಜಯ ಕುಮಾರ ಮುದ್ರಾಡಿ, ಭುವನಪ್ರಸಾದ್ ಹೆಗ್ಡೆ, ಅನಂತರಾಜ ಉಪಾಧ್ಯ, ನಿರಂಜನ ಭಟ್, ಮರ್ಣೆ ಉಮೇಶ ಭಟ್, ಗಣೇಶ್ ರಾವ್ ಎಲ್ಲೂರು, ಅಶೋಕ್ ಎಂ.,ನಟರಾಜ ಉಪಾಧ್ಯಾಯ, ಸಂತೋಷ ಕುಮಾರ್ ಶೆಟ್ಟಿ, ಪ್ರಭಾಕರ ಭಂಡಿ, ಡಾ.ಪ್ರತಿಮಾ ಜೆ. ಆಚಾರ್ಯ, ಡಾ. ರಾಘವೇಂದ್ರ ರಾವ್ , ಆರ್. ವಸಂತ, ರಂಜಿನಿ ವಸಂತ, ತಾರಾದೇವಿ, ನಾಗರಾಜ ಹೆಗಡೆ ಉಪಸ್ಥಿತರಿದ್ದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದನಾರ್ಪಣೆಗೈದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿ, ವಿದ್ಯಾಪೋಷಕ್ ಕಾರ್ಯನಿರ್ವಹಿಸುವ ರೀತಿಯನ್ನು ವಿವರಿಸಿ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು. ಈ ವರ್ಷ ವಿದ್ಯಾಪೋಷಕ್‍ಗೆ ಕನ್ನಡ ಮಾಧ್ಯಮದಲ್ಲಿ ಓದಿ ಪ್ರತಿಶತ 80% ಕ್ಕಿಂತಲೂ ಅಧಿಕ ಅಂಕ ಪಡೆದ ಒಟ್ಟು 652 ಅರ್ಜಿಗಳು ಬಂದಿದ್ದು ಅದರಲ್ಲಿ ಆಯ್ಕೆಗೊಂಡ 291 ವಿದ್ಯಾರ್ಥಿಗಳು ಮತ್ತು ಅವರ ಹೆತ್ತವರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಸಂಸ್ಥೆಯ ಕಾರ್ಯಕ್ರಮಗಳನ್ನು ಪರಿಚಯಿಸುವ ದೃಶ್ಯಗಳ ತುಣುಕುಗಳನ್ನು ಎಲ್.ಇ.ಡಿ ಯ ಮೂಲಕ ಬಿತ್ತರಿಸಲಾಯಿತು. ಇದೇ ಸಂದರ್ಭದಲ್ಲಿ ಅಗಲಿದ ವಿದ್ಯಾಪೋಷಕ್ ವಿದ್ಯಾರ್ಥಿನಿ ಪ್ರಮಿತಾಳಿಗೆ ಶ್ರದ್ಧಾಂಜಲಿ ಸಮರ್ಪಿಸಲಾಯಿತು.

Leave a Comment

Your email address will not be published. Required fields are marked *

We're currently hard at work gathering information and crafting content to bring you the best experience. Stay tuned for exciting updates!