







ಸೂರು ನೂರರ ಸಡಗರ
ಯಕ್ಷಗಾನ ಕಲಾರಂಗ 2012ರಲ್ಲಿ ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿನಿ ಪಲ್ಲವಿ ಮತ್ತು ಅವಳ ತಂದೆ ಯಕ್ಷಗಾನದ ಹಾಸ್ಯ ಕಲಾವಿದ ಭೋಜ ಮರಕಾಲರರ ಕುಟುಂಬಕ್ಕೆ ಮನೆಯನ್ನು ನಿರ್ಮಿಸಿಕೊಟ್ಟಿತು. ಅದು ಇಂದಿಗೆ ನೂರನ್ನು ತಲುಪಿ ಸಂಸ್ಥೆ ‘ಸೂರು ನೂರರ ಸಡಗರ’ ಎಂಬ ಶೀರ್ಷಿಕೆಯಲ್ಲಿ ಜೂನ್ 28, 2026 ಭಾನುವಾರದಂದು ಐವೈಸಿ ಸಭಾಭವನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಉಡುಪಿ ಸೋದೆ ವಾದಿರಾಜ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಜ್ಯೋತಿ ಬೆಳಗಿಸಿ, ಅನುಗ್ರಹ ಸಂದೇಶ ನೀಡುತ್ತಾ ಯಕ್ಷಗಾನ ಕಲಾರಂಗ ಸಮರ್ಪಣಾ ಭಾವದಿಂದ ಮಾಡಿದ ಕೆಲಸ ಲೋಕಕ್ಕೆ ಮಾದರಿಯಾಗಿದೆ. ಉಡುಪಿಯ ಹಾಗೂ ಹೊರಗಿನ ದಾನಿಗಳು ಈ ಮಾನವೀಯ ಕಾರ್ಯಕ್ರಮಕ್ಕೆ ಹೃದಯ ತುಂಬಿ ಸ್ಪಂದಿಸಿದ್ದಾರೆ.ಇದಕ್ಕೆ ಕಲಾರಂಗದ ನಾಯಕತ್ವ ಮತ್ತು ಕಾರ್ಯಕರ್ತರ ಶ್ರದ್ಧೆಯ ದುಡಿಮೆಗೆ ಸಂದ ಉಡುಗೊರೆಯಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಮಾಹೆಯ ಸಹಕುಲಾಧಿಪತಿಗಳಾದ ಡಾ. ಎಚ್.ಎಸ್. ಬಲ್ಲಾಳರು ಡಾ. ರಂಜನ್ ಪೈ ಅವರ ನೇತೃತ್ವದ ಮಾಹೆ ಈ ಹಿಂದಿನಂತೆ ಮುಂದೆಯೂ ಕಲಾರಂಗದ ಕಾರ್ಯಕ್ರಮಗಳಿಗೆ ಕೈಜೋಡಿಸುತ್ತದೆ ಎಂದರು. ಕರ್ಣಾಟಕ ಬ್ಯಾಂಕ್ನ ಎಂ.ಡಿ & ಸಿಇಓ ಶ್ರೀ ಎಮ್. ರಾಘವೇಂದ್ರ ಭಟ್ ಸೂರು ನೂರರ ಸಂಚಿಕೆಯನ್ನು ಬಿಡುಗಡೆ ಮಾಡಿ ಸರಕಾರೇತರ ಸಂಸ್ಥೆಗಳು ದಾನಿಗಳ ಸಹಕಾರದಿಂದ ಏನೆಲ್ಲಾ ಒಳ್ಳೆಯ ಕೆಲಸ ಮಾಡಬಹುದು ಎಂಬುವುದಕ್ಕೆ ಯಕ್ಷಗಾನ ಕಲಾರಂಗ ಉತ್ಕೃಷ್ಟ ಉದಾಹರಣೆಯಾಗಿದೆ.ತಮ್ಮ ಬ್ಯಾಂಕ್ ಎರಡು ಮನೆಗಳ ಪ್ರಾಯೋಜಕತ್ವ ವಹಿಸಿಕೊಳ್ಳಲಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.ಗೀತಾನಂದ ಫೌಂಡೇಶನ್ ಕೋಟ ಇದರ ವರಿಷ್ಠರಾದ ಆನಂದ ಸಿ. ಕುಂದರ್ ಶುಭಾಶಂಸನೆಗೈದರು. ಉಡುಪಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದ ಶಾಸಕರುಗಳಾದ ಶ್ರೀ ಯಶ್ಪಾಲ್ ಎ. ಸುವರ್ಣ, ಶ್ರೀ ಗುರ್ಮೆ ಸುರೇಶ್ ಶೆಟ್ಟಿ, ಶ್ರೀ ಕಿರಣ್ ಕುಮಾರ್ ಕೊಡ್ಗಿ ಹಾಗೂ ಶ್ರೀ ಗುರುರಾಜ ಗಂಟಿಹೊಳೆಯವರು ಈ ಶುಭಾವಸರದಲ್ಲಿ ಸಂಸ್ಥೆಯನ್ನು ಅಭಿನಂದಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಹಿಂದಿನ ಅಧ್ಯಕ್ಷರುಗಳಾದ ಡಾ. ತಲ್ಲೂರು ಶಿವರಾಮ ಶೆಟ್ಟಿ, ಶ್ರೀ ಕೆ. ಗಣೇಶ್ ರಾವ್ ಉಪಸ್ಥಿತರಿದ್ದರು. ದಾನಿಗಳ ಪರವಾಗಿ ವಿದ್ವಾನ್ ಗುಂಡಿಬೈಲು ಸುಬ್ರಹ್ಮಣ್ಯ ಭಟ್, ಡಾ. ಮಹಾಬಲೇಶ್ವರ ರಾವ್ ಮಾತನಾಡಿದರು. ಫಲಾನುಭವಿಗಳ ಪರವಾಗಿ ರಮ್ಯಾ ಎಚ್. ಆರ್ ಕೃತಜ್ಞತೆ ವ್ಯಕ್ತಪಡಿಸಿದಳು. ಮನೆಗಳ ಪ್ರಾಯೋಜಕತ್ವ ವಹಿಸಿದ ಎಲ್ಲಾ ದಾನಿಗಳನ್ನು ಶಾಲು, ಸ್ಮರಣಿಕೆ, ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ಹಾಗೆಯೇ ಮನೆ ನಿರ್ಮಾಣದಲ್ಲಿ ಭಾಗಿಯಾದ ಎಲ್ಲಾ ಕಾರ್ಮಿಕ ಬಂಧುಗಳನ್ನು ಸಹಕರಿಸಿದ ಎಲ್ಲಾ ಮಾನ್ಯರನ್ನು ಅಭಿನಂದಿಸಲಾಯಿತು. ಸಭಾ ಕಾರ್ಯಕ್ರಮಕ್ಕೂ ಮೊದಲು ಡಾ. ರಾಘವೇಂದ್ರ ರಾವ್ ರಚಿಸಿ, ಡಾ. ಅರವಿಂದ ಹೆಬ್ಬಾರ್ ಸಂಯೋಜಿಸಿ, ಸಮನ್ವಿ ಅವರು ಹಾಡಿದ ಗೀತೆಯೊಂದಿಗೆ ಮನೆ ನಿರ್ಮಾಣದ ಕುರಿತ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ನಿವೃತ್ತ ಪ್ರಾಂಶುಪಾಲ ಶ್ರೀ ಎ. ರಘುಪತಿ ಭಟ್ ಪ್ರದರ್ಶನಕ್ಕೆ ವ್ಯವಸ್ಥೆಗೊಳಿಸಿದ ಸೂರು ನೂರರ ಚಿತ್ರ ಸಂಪುಟವನ್ನು ಅನಾವರಣಗೊಳಿಸಿದರು. ತತ್ಪೂರ್ವದಲ್ಲಿ ದಾನಿಗಳಿಗೆ, ಫಲಾನುಭವಿ ಕುಟುಂಬಕ್ಕೆ ಸಹಭೋಜನದ ವ್ಯವಸ್ಥೆ ಮಾಡಲಾಗಿತ್ತು. ಕೊನೆಯಲ್ಲಿ ಎಲ್ಲರಿಗೂ ಕಸಿ ಮಾವಿನ ಗಿಡ, ಸಿಹಿತನಿಸನ್ನು ವಿತರಿಸಲಾಯಿತು. ಸಂಸ್ಥೆಯ ಉಪಾಧ್ಯಕ್ಷರುಗಳಾದ ಎಸ್. ವಿ. ಭಟ್, ಪಿ. ಕಿಶನ್ ಹೆಗ್ಡೆ, ವಿ. ಜಿ. ಶೆಟ್ಟಿ, ಕೋಶಾಧಿಕಾರಿ ಕೆ. ಸದಾಶಿವ ರಾವ್ ಹಾಗೂ ಸಂಸ್ಥೆಯ ಕಾರ್ಯಕರ್ತರು ಭಾಗವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಪ್ರಸ್ತಾವನೆಯ ಮಾತುಗಳೊಂದಿಗೆ ಸ್ವಾಗತಿಸಿದರು. ನಾರಾಯಣ ಎಂ.ಹೆಗಡೆ ವಂದಿಸಿದರು. ಹೃದಯಸ್ಪರ್ಶಿ, ಸ್ಮರಣೀಯ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಮುರಲಿ ಕಡೆಕಾರ್ ಸೂರು ನೂರು ಸಾಗಿ ಬಂದ ವಿವರಗಳೊಂದಿಗೆ ನಿರೂಪಿಸಿದರು. ವಿದ್ಯಾಪ್ರಸಾದ್ ಸಹಕರಿಸಿದರು.