Yakshagana Kalaranga

ವಿದ್ಯಾಪೋಷಕ್‌ ಯಕ್ಷಗಾನ ಕಲಾರಂಗದ 95ನೆಯ ಮನೆ ಹಸ್ತಾಂತರ

ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‌ನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಿಂಚನಾ ( ಶ್ಯಾಮಲಾ ಮತ್ತು ಚಂದ್ರ ನಾಯ್ಕ್ ಇವರ ಪುತ್ರಿ) ಇವಳಿಗೆ ಕುಂದಾಪುರ ತಾಲೂಕಿನ ಕೆರಾಡಿಯಲ್ಲಿ ಉಡುಪಿಯ ಸಾಮಾಜಿಕ ಕಳಕಳಿಯ ಐವರು ಮಿತ್ರರ ಪ್ರಾಯೋಜಕತ್ವದಲ್ಲಿ ನಿರ್ಮಿಸಿದ ನೂತನ ಮನೆ ‘ಪಂಚಮ್’ 09.05.2026 ರಂದು ಉದ್ಘಾಟನೆಗೊಂಡಿತು. ಜ್ಯೋತಿ ಬೆಳಗಿಸಿದ ಕೊಲ್ಲೂರು ಮೂಕಾಂಬಿಕಾ ದೇವಳದ ಮಾಜಿ ಧರ್ಮದರ್ಶಿ ಹಾಗೂ ಉದ್ಯಮಿ-ಶಿಕ್ಷಣ ಪ್ರೇಮಿ ಕೆರಾಡಿ ಚಂದ್ರಶೇಖರ ಶೆಟ್ಟಿಯವರು ಮಾತನಾಡಿ ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ ಗೆ ಆಯ್ಕೆ ಮಾಡಲು ವಿದ್ಯಾರ್ಥಿಗಳ ಮನೆ ಭೇಟಿ ಮಾಡುತ್ತದೆ ಎಂಬುದನ್ನು ಕೇಳಿ ಅವರ ಆಯ್ಕೆ ಪ್ರಕ್ರಿಯೆಯ ಪಾರದರ್ಶಕತೆ ವೇದ್ಯವಾಯಿತು. ಸಮಾಜದಲ್ಲಿ ನೊಂದವರಿಗೆ ಇವರು ಸ್ಪಂದಿಸುವ ರೀತಿ ಎಲ್ಲ ಸಂಸ್ಥೆಗಳಿಗೆ ಮಾದರಿಯಾಗಿದೆ. ನಿಮ್ಮೊಂದಿಗೆ ನಾನಿದ್ದೇನೆ ಎಂದರು.ಕತ್ತಲೆಯ ಹಾದಿಯಲ್ಲಿ ನಡೆಯ ಬಹುದು ಆದರೆ ಕನಸಿಲ್ಲದ ಹಾದಿಯಲ್ಲಿ ನಡೆಯಲಾಗದು. ಸಿಂಚನಾ ಚೆನ್ನಾಗಿ ಕಲಿತು ಮುಂದೆ ಬಡವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಹಂತಕ್ಕೆ ಏರ ಬೇಕೆಂದು ಹರಸಿದರು. ಪ್ರಾಯೋಜಕತ್ವ ವಹಿಸಿದ್ದ ಎ.ಜಿ. ಅಸೋಸಿಯೇಟ್ಸ್ ನವರಾದ ಆರ್ಕಿಟೆಕ್ಟ್ ಯೋಗಿಶ್ಚಂದ್ರಧರ್, ಇಂಜಿನಿಯರ್ ಎಂ. ಗೋಪಾಲ್ ಭಟ್, ಸ್ಪ್ಯಾನ್ ಅಸೋಸಿಯೇಟ್ಸ್ ನ ಇಂಜಿನಿಯರ್ ಪಾಂಡುರಂಗ ಆಚಾರ್, ಪದ್ಮಶ್ರೀ ಕನ್ಸ್ಟ್ರಕ್ಷನ್ಸ್ ನ ಇಂಜಿನಿಯರ್ ಹರಿಪ್ರಸಾದ್ ಶೆಟ್ಟಿ ಇವರುಗಳು ಮಾತನಾಡಿ ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ಕೀಳರಿಮೆಗೆ ಒಳಗಾಗಬಾರದು. ಸಾಧನೆಯ ಮೂಲಕ ಸಮಾಜದಲ್ಲಿ ಪ್ರತಿಷ್ಠೆಯ ಸ್ಥಾನ ಗಳಿಸಿದ್ದಕ್ಕೆ ನಾವೆಲ್ಲಾ ಉದಾಹರಣೆಯಾಗಿದ್ದೇವೆ. ವಿದ್ಯಾಪೋಷಕ್ ನಂತಹ ಸಂಸ್ಥೆ ನಿನ್ನೊಟ್ಟಿಗಿರುವಾಗ ಅಳುಕಬೇಕಾದದ್ದಿಲ್ಲ. ಚೆನ್ನಾಗಿ ಓದಿ ನೀನು ಮುಂದೆ ದಾನಿಯಾಗು ಎಂದು ಸಿಂಚನಾಳಿಗೆ ಕಿವಿಮಾತು ಹೇಳಿದರು. ‘ದೀನ ದುರ್ಬಲರಿಗೆ ಬೆಲ್ಲ ಸಕ್ಕರೆಯಾಗು’ ಎಂಬ ಡಿ.ವಿ.ಜಿ ಯವರ ಕಗ್ಗದ ಮಾತನ್ನು ಉಲ್ಲೇಖಿಸಿ ಸಮಾಜದಲ್ಲಿ ಇದ್ದವರು ಇಲ್ಲದವರಿಗೆ ಕೊಡುವುದರ ಮೂಲಕ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂಬ ಸಂದೇಶ ನೀಡಿದರು. ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ವಿ.ಜಿ ಶೆಟ್ಟಿ, ಹಿರಿಯ ಸದಸ್ಯರಾದ ಯು. ವಿಶ್ವನಾಥ್ ಶೆಣೈ, ಇಂಜಿನಿಯರುಗಳಾದ ವಿನಯ ಕುಮಾರ್, ನಿರಂಜನ್ ಹಾಗೂ ಮಲ್ಲಿಕಾ ಯೋಗೀಶ್ ಧರ್,ಶ್ರೀಲಕ್ಷ್ಮೀ ಜಿ.ಭಟ್,ಸುರೇಖಾ ಪಿ.ಆಚಾರ್ಯ, ಪದ್ಮಿನಿ ಹರಿಪ್ರಸಾದ್ ಶೆಟ್ಟಿ, ಶಿಲ್ಪಾ ಶಶಿಧರ್, ಗಿರೀಶ್ ಚಂದ್ರ ಧರ್,ದಿವ್ಯಾ ಗಿರೀಶ್ ಧರ್, ರಕ್ಷಣ್ ಆಚಾರ್ಯ ಉಪಸ್ಥಿತರಿದ್ದರು. ಸಂಸ್ಥೆಯ ಸದಸ್ಯರುಗಳಾದ ಭುವನಪ್ರಸಾದ ಹೆಗ್ಡೆ, ಅನಂತರಾಜ ಉಪಾಧ್ಯ, ಕೃಷ್ಣಮೂರ್ತಿ ಭಟ್, ಜಯರಾಮ್ ಪಡಿಯಾರ್, ವಿನೋದಾ ಎಂ, ಡಾ. ಪ್ರತಿಮಾ ಆಚಾರ್ಯ, ಸುದರ್ಶನ ಬಾಯರಿ, ವಿಶ್ವನಾಥ್, ಮಾಲತಿ ಭಾಗವಹಿಸಿದ್ದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

We're currently hard at work gathering information and crafting content to bring you the best experience. Stay tuned for exciting updates!