Yakshagana Kalaranga

ಯಕ್ಷಗಾನ ಕಲಾರಂಗ – ಕಲಾವಿದರ ಸಮಾವೇಶ 2025

ಪ್ರತಿವರ್ಷ ಕಲಾರಂಗ ಮೇ 31ರಂದು ನಡೆಸುವ ಕಲಾವಿದರ ಸಮಾವೇಶಕ್ಕೆ ಈವರ್ಷ ಸುವರ್ಣದ ಮೆರಗು. ಶ್ರೀಕೃಷ್ಣಮಠ ಪರ್ಯಾಯ ಶ್ರೀ ಪುತ್ತಿಗೆ ಮಠದ ಆಶ್ರಯದಲ್ಲಿ ದಿನಪೂರ್ತಿ ಕಾರ್ಯಕ್ರಮವಾಗಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸಂಪನ್ನ ಗೊಂಡಿತು. ಅಪರಾಹ್ನದವರೆಗಿನ ಕಲಾಪಗಳು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸಹಯೋಗದಲ್ಲಿ ಜರಗಿತು. ಬೆಳಿಗ್ಗೆ 10.00 ಗಂಟೆಗೆ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ಕಾರ್ಯಕ್ರಮ ಉದ್ಘಾಟಿಸಿದರು. ಉದ್ಯಮಿ ಗೋಪಾಲ. ಸಿ. ಬಂಗೇರ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅಕಾಡೆಮಿಯ ರಿಜಿಸ್ಟ್ರಾರ್ ನಮೃತ ಸ್ವಾಗತಿಸಿದರು. ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಅಕಾಡೆಮಿಯ ಸದಸ್ಯ ಸತೀಶ ಅಡಪ ಉಪಸ್ಥಿತರಿದ್ದರು. ಗಣೇಶ ಎಲ್ಲೂರು ಕಾರ್ಯಕ್ರಮ ನಿರೂಪಿಸಿದರು. ಪೂರ್ವಾಹ್ನ 10.30 ಗಂಟೆಗೆ ಮಾಧವ ಮಾತೃಗ್ರಾಮಂ ಕೂಡಿಯಾಟ್ಟಮ್ ಗುರುಕುಲಂ, ತ್ರಿಶೂರ್ ಇವರಿಂದ ಸೀತಾಪಾರಣಂ-ಜಟಾಯುವಧಂ ಕೂಡಿಯಾಟ್ಟಮ್ ಪ್ರದರ್ಶನಗೊಂಡಿತು. ಪ್ರೊ. ಕೆ ಸದಾಶಿವ ರಾವ್ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಬ್ರಹ್ಮಾವರ ವಂದಿಸಿದರು.

ಅಪರಾಹ್ನ 11.30 ಗಂಟೆಗೆ ‘ಕಲೆ ಪೂರ್ಣಾವಧಿ ಉದ್ಯೋಗವಾಗಿರಬೇಕೆ? ಉಪವೃತ್ತಿಯಾಗಿರಬೇಕೆ?’ ಎಂಬ ವಿಷಯದ ಕುರಿತು ಕಲಾವಿದರಿಂದ ಸಮಾಲೋಚನೆ ನಡೆಯಿತು. ಅರ್ಥಧಾರಿ ಪವನ್ ಕಿರಣ್ ಕೆರೆ ಸಮನ್ವಯಕಾರರಾಗಿದ್ದರು. ಕೊಂಡದಕುಳಿ ರಾಮಚಂದ್ರ ಹೆಗಡೆ, ವಾಸುದೇವ ರಂಗಾಭಟ್, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ವಿದ್ಯಾಧರ ಜಲವಳ್ಳಿ, ಡಾ. ಶ್ರುತಕೀರ್ತಿ, ರಾಮ್ ಪ್ರಕಾಶ್ ಕಲ್ಲೂರಾಯ, ಪ್ರಸನ್ನ ಶೆಟ್ಟಿಗಾರ್, ಮಹೇಶ್ ಮಂದಾರ್ತಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ನಾರಾಯಣ ಎಂ ಹೆಗಡೆ ನಿರೂಪಿಸಿದರು. ಬೆಳಿಗ್ಗೆ 9.00 ಗಂಟೆಯಿಂದ ಅಪರಾಹ್ನ 1.00 ಗಂಟೆಯವರೆಗೆ ಕಸ್ತೂರ್ಬಾ ಮೆಡಿಕಲ್ ಕಾಲೇಜು, ಮಣಿಪಾಲ ಇಲ್ಲಿನ ವೈದ್ಯರಿಂದ ಕಲಾವಿದರಿಗೆ ಉಚಿತ ವೈದ್ಯಕೀಯ ತಪಾಸಣೆ ನಡೆಸಲಾಯಿತು. ಡಾ. ರಾಜೇಶ್ ನಾವುಡ, ಡಾ. ಶೈಲಜಾ ಇದನ್ನು ಸಂಯೋಜಿಸಿದರು. ಅಪರಾಹ್ನ 2.30 ರಿಂದ ನಾಡೋಜ ಡಾ. ಜಿ ಶಂಕರ್ ಅಧ್ಯಕ್ಷತೆಯಲ್ಲಿ ಐವತ್ತು ಜನ ಹಿರಿಯ ಕಲಾವಿದರಿಗೆ ತಲಾ ಐವತ್ತು ಸಾವಿರ ಸುವರ್ಣ ನಿಧಿಯೊಂದಿಗೆ ಸುವರ್ಣ ಪ್ರಶಸ್ತಿ ಪ್ರದಾನ ಮಾಡಿ ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಆಶೀರ್ವಚಿಸಿದರು. ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು. ಮಾಹೆಯ ಸಹ ಕುಲಾಧಿಪತಿ ಡಾ. ಎಚ್ ಎಸ್ ಬಲ್ಲಾಳರು ಸುವರ್ಣ ಉಡುಗೊರೆ ವಿತರಿಸಿದರು. ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಡಾ. ಎಚ್.ಎಸ್.ಶೆಟ್ಟಿ ಸುವರ್ಣ ನುಡಿ ನುಡಿದರು. ಇದೇ ಸಂದರ್ಭದಲ್ಲಿ ಹನ್ನೆರಡು ಜನ ಕಲಾವಿದರಿಗೆ ತಲಾ 20,000 ರೂಪಾಯಿಯಂತೆ ಗೃಹ ನಿರ್ಮಾಣದ ಉಡುಗೊರೆ, ಓರ್ವ ಕಲಾವಿದರಾದ ನಾರಾಯಣ ಪೂಜಾರಿ ಪತ್ನಿಗೆ ರೂ.30,000 ಸಾಂತ್ವನ ನಿಧಿ ಹಾಗೂ ಮೂವರು ಕಲಾವಿದರಿಗೆ ವೈದ್ಯಕೀಯ ನೆರವು ವಿತರಿಸಲಾಯಿತು. ವಿದ್ಯಾ ಪೋಷಕ್ ಮೂಲಕ ಅಮೆರಿಕದ ಶಿವಳ್ಳಿ ಕುಟುಂಬದವರು ಕೊಡಮಾಡಿದ ರೂ. 2,10,438 ನ್ನು ಆದಿಉಡುಪಿಯ ಕನ್ನಡ ಮಾಧ್ಯಮ ಪ್ರೌಢ ಶಾಲೆಗೆ ಆಡಳಿತ ಮಂಡಳಿಗೆ ನೀಡಲಾಯಿತು.ಸಂಸದರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಶಾಸಕರುಗಳಾದ ಶ್ರೀ ಯಶಪಾಲ್ ಸುವರ್ಣ, ಶ್ರೀ ಗುರ್ಮೆ ಸುರೇಶ್ ಶೆಟ್ಟಿ, ಶ್ರೀ ಕಿರಣಕುಮಾರ್ ಕೊಡ್ಗಿ, ಮಾಜಿ ಸಚಿವರಾದ ಶ್ರೀ ಪ್ರಮೋದ್ ಮಧ್ವರಾಜ್, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ, ಉದ್ಯಮಿಗಳಾದ ಶ್ರೀ ಪಿ ಪುರುಷೋತ್ತಮ ಶೆಟ್ಟಿ, ಶ್ರೀ ಹರಿಯಪ್ಪ ಕೋಟ್ಯಾನ್ ಅಭ್ಯಾಗತರಾಗಿ ಭಾಗವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ್ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಎಂ ಹೆಗಡೆ ಮತ್ತು ವಿದ್ಯಾಪ್ರಸಾದ್ ಕಲಾವಿದರ ಪರಿಚಯವನ್ನು ಮಾಡಿದರು. ವಿವಿಧ ವೃತ್ತಿ ಮೇಳಗಳ 700ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಂಡಿದ್ದರು. ಎಲ್ಲರಿಗೂ ರೂ.750 ಮೊತ್ತದ ಜಮಖಾನೆಯನ್ನು ಉಡುಗೊರೆಯಾಗಿ ನೀಡಲಾಯಿತು. 70 ರಿಂದ 90 ವಯೋಮಾನದ 50 ಹಿರಿಯ ಕಲಾವಿದರಿಗೆ ತಲಾ ರೂ.50,000 ನೀಡಿ ಗೌರವಿಸಿದಾಗ ಆ ಹಿರಿಯ ಜೀವಿಗಳಿಗಾದ ಸಂಭ್ರಮವೇ ಕಾರ್ಯಕರ್ತರಿಗೆ ಧನ್ಯತೆಯ ಕ್ಷಣವಾಗಿತ್ತು.ಈ ಸಮಾರಂಭ ನಿಜಕ್ಕೂ ಸುವರ್ಣಾಕ್ಷರದಲ್ಲಿ ಬರೆಯಬೇಕಾದ ಸುವರ್ಣಸಡಗರ.

Leave a Comment

Your email address will not be published. Required fields are marked *

We're currently hard at work gathering information and crafting content to bring you the best experience. Stay tuned for exciting updates!