ಯಕ್ಷಗಾನ ಕಲಾರಂಗವು ಪ್ರತೀವರ್ಷ ಯಕ್ಷನಿಧಿ ಸದಸ್ಯ ಕಲಾವಿದರ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನೊಳಗೊಂಡ ಡೈರಿ ಪ್ರಕಟಿಸುತ್ತಿದ್ದು, 2025ರ ಯಕ್ಷನಿಧಿ ಡೈರಿಯನ್ನು ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು 30-12-2024 ರಂದು ಬಿಡುಗಡೆಗೊಳಿಸಿದರು. ಧರ್ಮಸ್ಥಳ ಮೇಳದ ಕಲಾವಿದ ಧರ್ಮಸ್ಥಳ ಚಂದ್ರಶೇಖರ ಮತ್ತು ಕಮಲಶಿಲೆ ಮೇಳದ ಕಲಾವಿದ ನಾರಾಯಣ ಉಳ್ಳೂರರಿಗೆ ಸಾಂಕೇತಿಕವಾಗಿ ವಿತರಿಸಿದರು.ಇದೇ ಸಂದರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡುವ ವಿದ್ಯಾಪೋಷಕ್‍ಗೆ ಪರ್ಯಾಯ ಮಠದ ವತಿಯಿಂದ 10 ಲಕ್ಷ ರೂಪಾಯಿಯ ಕೊಡುಗೆಯನ್ನು ನೀಡಿ ಹರಸಿದರು. ಪರ್ಯಾಯ ಮಠದ ಅಪೂರ್ವ ಯೋಜನೆಯಾದ ಕೋಟಿಗೀತಾ ಲೇಖನ ಯಜ್ಞದಲ್ಲಿ ವಿದ್ಯಾಪೋಷಕ್ ನ 500 ವಿದ್ಯಾರ್ಥಿಗಳು ಭಾಗವಹಿಸಿದ್ದನ್ನು ಕಾರ್ಯದರ್ಶಿ ಮುರಲಿ ಕಡೆಕಾರ್ ಕೃತಜ್ಞತೆಯಿಂದ ಸ್ಮರಿಸಿಕೊಂಡರು.ಶ್ರೀಮಠದ ಅಂತರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ,ಕಲಾರಂಗದ ಉಪಾಧ್ಯಕ್ಷರಾದ ಎಸ್. ವಿ. ಭಟ್, ವಿ. ಜಿ. ಶೆಟ್ಟಿ ಸದಸ್ಯರಾದ ಯು.ವಿಶ್ವನಾಥ ಶೆಣೈ, ಭುವನಪ್ರಸಾದ ಹೆಗ್ಡೆ, ನಾರಾಯಣ ಎಂ. ಹೆಗಡೆ ದಾನಿಗಳಾದ ವಿಲಾಸಿನಿ ಬಿ. ಶೆಣೈ ಉಪಸ್ಥಿತರಿದ್ದರು.