ಮಹಾನ್ ಕಲಾಸಾಧಕರ ಒಡನಾಟ ನನ್ನ ಕಲಾ ಬದುಕನ್ನು ರೂಪಿಸಿತು.
ಮಾರ್ಪಳ್ಳಿ.
ನನ್ನ ಮನೆಯ ಪರಿಸ್ಥಿತಿ ಮತ್ತು ಕಲಾಸಕ್ತಿ ನಾನು ಸದಾ ಕಲೆಯಲ್ಲಿ ಕ್ರಿಯಾಶೀಲನಾಗಲು ಕಾರಣವಾಯಿತು. ನಾನು ಒಂದು ಕಡೆ ನೆಲೆ ನಿಲ್ಲದೆ ಕಲೆಗಾಗಿ ಅಲೆದಾಡಿದೆ. ಇದರಿಂದ ಹಲವು ಶ್ರೇಷ್ಠ ಕಲಾ ಸಾಧಕರ ಒಡನಾಟದ ಭಾಗ್ಯ ಲಭಿಸಿತು. ಹೊಸತನ್ನು ಅನ್ವೇಷಿಸುವ ನನ್ನ ಸ್ವಭಾವಕ್ಕೆ ಅವರೆಲ್ಲ ತಮ್ಮ ಅನುಭವ ಧಾರೆ ಎರೆದರು. ಕಲಾ ಕ್ಷೇತ್ರದ ಅನ್ಯಾನ್ಯ ಪ್ರಕಾರಗಳಲ್ಲಿ ಪ್ರಯೋಗ ನಡೆಸುತ್ತಾ ಸಾಗಿದೆ ಎಂದು ಗುರುರಾಜ ಮಾರ್ಪಳ್ಳಿ ಹೇಳಿದರು. ಅವರು ಉಡುಪಿಯ ಯಕ್ಷಗಾನ ಕಲಾರಂಗ ಮೇ 19 ರಂದು ಐವೈಸಿ ಸಭಾಂಗಣದಲ್ಲಿ ಏರ್ಪಡಿಸಿದ್ದ ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ಸ್ಮರಣಾರ್ಥ ‘ಯಕ್ಷಗಾನ ಕಲಾರಂಗ’ ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಿದ್ದರು. ಪ್ರಶಸ್ತಿಯ ಪ್ರಾಯೋಜಕರೂ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರೂ ಆದ ಡಾ. ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಪ್ರೊ. ಎಂ. ಎಲ್. ಸಾಮಗರು ಅಭಿನಂದನಾ ಭಾಷಣ ಮಾಡಿದರು. ಪ್ರಧಾನ ಅಭ್ಯಾಗತರಾಗಿದ್ದ ಶ್ರೀ ಶ್ರೀಧರ ಡಿ. ಎಸ್. ಮಾರ್ಪಳ್ಳಿಯವರೊಂದಿಗಿನ ಕಲಾ ಸಂಬಂಧಿ ಒಡನಾಟವನ್ನು ಸ್ಮರಿಸಿಕೊಂಡರು. ವೇದಿಕೆಯಲ್ಲಿ ಗಿರಿಜಾ ಶಿವರಾಮ ಶೆಟ್ಟಿ, ಉಪಸ್ಥಿತರಿದ್ದರು. ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಮಾರ್ಪಳ್ಳಿಯವರು ರಾಗ ಸಂಯೋಜಿಸಿದ ರಂಗ ಗೀತೆಗಳನ್ನು ಹಾಡಿದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ನಿರೂಪಿಸಿದರು. ಗಣೇಶ್ ರಾವ್ ಎಲ್ಲೂರು ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ಸಂಯೋಜಿಸಿದರು. ಪ್ರಶಸ್ತಿ ಪ್ರಧಾನದ ಅನಂತರ ಗುರುರಾಜ ಮಾರ್ಪಳ್ಳಿಯವರ ನಿರೂಪಣೆಯಲ್ಲಿ ಯಕ್ಷಗಾನ ಭಾಗವತಿಕೆ ಗಮಕಗಳ ಒಂದು ಸಂಶೋಧನಾತ್ಮಕ ಅಧ್ಯಯನದ ಪ್ರಸ್ತುತಿ ನಡೆಯಿತು.