ಯಕ್ಷಗಾನ ಕಲಾರಂಗವು ಪ್ರಥಮ ಪಿ.ಯು.ಸಿಯಲ್ಲಿ ವಿದ್ಯಾರ್ಜನೆಗೈಯುತ್ತಿರುವ, ವಿದ್ಯಾಪೋಷಕ್ ವಿದ್ಯಾರ್ಥಿ ಹಾಲಾಡಿ ಬೆಳಾರಮಕ್ಕಿಯ ಸಾತ್ವಿಕ್ ಇವನಿಗೆ ಪಿ. ರಬೀಂದ್ರ್ರ ನಾಯಕ್ ಇವರ ಸ್ಮರಣಾರ್ಥ ಯು. ಎಸ್. ನಾಯಕ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ನ ಪ್ರಾಯೋಜಕತ್ದಲ್ಲಿ ನಿರ್ಮಿಸಿದ ‘ರಬೀಂದ್ರ ನಿಲಯ’ ಮನೆಯನ್ನು, ಇಂದು (07.02.2024) ಉದ್ಘಾಟಿಸಲಾಯಿತು. ಜ್ಯೋತಿ ಬೆಳಗಿಸಿ ಶುಭಕೋರಿದ ಯು. ಎಸ್. ನಾಯಕ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ನ ವಿಶ್ವಸ್ಥರಾದ ಪಿ. ಸುರೇಶ್ ನಾಯಕ್ ತಮ್ಮ ಟ್ರಸ್ಟ್ ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ರಬೀಂದ್ರ ನಾಯಕ್‍ರ ಆಶಯದಂತೆ ದಾನ ನೀಡುತ್ತಾ ಬಂದಿದೆ ಎಂದರು. ಬಳಕೆದಾರರ ವೇದಿಕೆಯ ಮೂಲಕ ಸಾವಿರಾರು ಜನರ ಕಣ್ಣೀರೊರೆಸಿದ ಕೆ. ರವೀಂದ್ರನಾಥ ಶಾನುಭಾಗ್ ಪಿ. ರಬೀಂದ್ರ ನಾಯಕ್ ರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡು ಬಸ್ರೂರು ಬಳಕೆದಾರರ ವೇದಿಕೆ ಅವರ ಕನಸಿನ ಕೂಸು ಅದರಲ್ಲಿ ಕೆಲಸಮಾಡುವ ಅವಕಾಶ ನನಗೆ ದೊರೆತದ್ದು ನನ್ನ ಭಾಗ್ಯ ಎಂದು ಹೇಳಿದರು. ಇನ್ನೋರ್ವ ಅತಿಥಿ ಜಾನೆಟ್ ಲೂಯಿಸ್ ಮಾತನಾಡಿ ಕ್ಷೇತ್ರಕಾರ್ಯ ನಡೆಸಿ ಫಲಾನುಭವಿಗಳನ್ನು ಗುರುತಿಸಿದಾಗ ನಮ್ಮ ಹಣ ಅರ್ಹರಿಗೆ ಸಂದಾಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಶಾಸಕರಾದ ಶ್ರೀ ಕಿರಣ್ ಕುಮಾರ್ ಕೊಡ್ಗಿ ಉಡುಪಿಯ ಯಕ್ಷಗಾನ ಕಲಾರಂಗ ತನ್ನ ಪ್ರಾಮಾಣಿಕ ಪಾರದರ್ಶಕ ಸಮಾಜಮುಖೀ ಕಾರ್ಯಗಳಿಂದ ಎಲ್ಲರ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದರು. ಈ ಸಂದರ್ಭದಲ್ಲಿ ವಿನ್ಸೆಂಟ್ ಲೂಯಿಸ್, ಯು. ವಿಶ್ವನಾಥ ಶೆಣೈ ಸಂಸ್ಥೆಯ ಉಪಾಧ್ಯಕ್ಷ ಎಸ್. ವಿ. ಭಟ್, ಕಿಶೋರ್ ಕನ್ನರ್ಪಾಡಿ, ಭುವನಪ್ರಸಾದ್ ಹೆಗ್ಡೆ, ಅನಂತರಾಜ ಉಪಾಧ್ಯ, ಕೆ. ಅಜಿತ್ ಕುಮಾರ್, ಹಾಲಾಡಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ರೋಷನ್ ಬೇಬಿ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಎಲ್ಲರನ್ನು ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ನಾರಾಯಣ ಎಮ್. ಹೆಗಡೆ ವಂದಿಸಿದರು. ಎಚ್. ಎನ್. ಶೃಂಗೇಶ್ವರ ಸಹಕರಿಸಿದರು.