ಉಡುಪಿ : ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‍ನ ಇಬ್ಬರು ಫಲಾನುಭವಿ ವಿದ್ಯಾರ್ಥಿಗಳಿಗೆ ತೆಂಕುತಿಟ್ಟಿನ ಖ್ಯಾತ ಸ್ತ್ರೀವೇಷಧಾರಿಯಾಗಿದ್ದ ಕಡಂದೇಲು ಪುರುಷೋತ್ತಮ ಭಟ್ ಇವರ ಮಗನಾದ ಬೆಂಗಳೂರಿನ ಕೆ. ಸದಾಶಿವ ಭಟ್ ಪ್ರಾಯೋಜಕತ್ವದ ಎರಡು ಮನೆಗಳ ಉದ್ಘಾಟನೆ 30.01.2024 ರಂದು ನೆರವೇರಿತು.
ದ್ವಿತೀಯ ಪಿ.ಯು.ಸಿಯಲ್ಲಿ ವಿದ್ಯಾರ್ಜನೆಗೈಯುತ್ತಿರುವ, ಗುಜ್ಜಾಡಿಯ ಅಂಕಿತಾ ಹಾಗೂ ಪ್ರಥಮ ಪಿ.ಯು.ಸಿಯಲ್ಲಿ ವಿದ್ಯಾರ್ಜನೆಗೈಯುತ್ತಿರುವ, ಕೊಡೇರಿಯ ಶಿವರಾಜ್ ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿಗಳಾಗಿದ್ದು, ಇವರಿಗೆ ಸಂಸ್ಥೆ ನಿರ್ಮಿಸಿ ಕೊಟ್ಟ ಮನೆಗಳಾಗಿವೆ. ಮನೆಗಳ ಪ್ರಾಯೋಜಕರಾದ ಕೆ. ಸದಾಶಿವ ಭಟ್ ಅವರು ಎರಡೂ ಮನೆಗಳ ಉದ್ಘಾಟನೆಯನ್ನು ಮಾಡಿ ಇದು ನಮಗೆ ಧನ್ಯತೆಯ ಕ್ಷಣ. ಯಾವ ಶ್ರಮವಿಲ್ಲದೆ ದೊಡ್ಡ ಪುಣ್ಯಕ್ಕೆ ಭಾಜನರಾದೆವು. ಫಲಾನುಭವಿ ಮಕ್ಕಳ ಮಾತುಗಳನ್ನು ಕೇಳಿದಾಗ ಕಲಾರಂಗ ಕಷ್ಟಕ್ಕೆ ಸ್ಪಂದಿಸುವ ವಿರಾಟ ದರ್ಶನವಾಯಿತು ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬೈಂದೂರಿನ ಶಾಸಕರಾದ ಶ್ರೀ ಗುರುರಾಜ ಗಂಟಿಹೊಳೆ ಮಾತನಾಡಿ ಯಕ್ಷಗಾನ ಕಲಾರಂಗ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಾ ಜನರ ವಿಶ್ವಾಸಗಳಿಸಿದೆ. ನಮ್ಮಂಥ ಜನ ಪ್ರತಿನಿಧಿಗಳಿಗೂ ಈ ಸಂಸ್ಥೆ ಮಾದರಿಯಾಗಿದೆ. ಸಂಸ್ಥೆಯೊಂದಿಗೆ ಸದಾ ನಾನಿದ್ದೇನೆ. ನಾವೆಲ್ಲ ಸೇರಿ ಕಷ್ಟದಲ್ಲಿರುವವರ ಕಣ್ಣೀರೊರೆಸಲು ಕ್ರಿಯಾಶೀಲರಾಗೋಣ ಎಂದರು.ಶ್ರೀಮತಿ ಶ್ಯಾಮಲಾ ಎಸ್. ಭಟ್ ಮಾತನಾಡಿ ಇಂದು ನಮ್ಮ ಮನೆ ಒಕ್ಕಲು ಆದ ದಿನಕ್ಕಿಂತಲೂ ಹೆಚ್ಚು ಸಂತಸ, ಧನ್ಯತೆ ತಾನಗಾಗಿದೆ.ಅವಕಾಶ ಕಲ್ಪಿಸಿದ ಕಲಾರಂಗಕ್ಕೆ ನಾವು ಋಣಿಗಳೆಂದು ಹರ್ಷ ವ್ಯಕ್ತಪಡಿಸಿದರು.ಈ ಸಂದರ್ಭಗಳಲ್ಲಿ ದಾನಿಗಳಾದ ಯು. ವಿಶ್ವನಾಥ ಶೆಣೈ, ಯು. ಎಸ್. ರಾಜಗೋಪಾಲ ಆಚಾರ್ಯ, ಕಿಶೋರ್ ಕನ್ನರ್ಪಾಡಿ, ಸಂಸ್ಥೆಯ ಉಪಾಧ್ಯಕ್ಷರುಗಳಾದ ಎಸ್. ವಿ. ಭಟ್, ವಿ. ಜಿ. ಶೆಟ್ಟಿ, ಕೋಶಾಧಿಕಾರಿ ಕೆ. ಸದಾಶಿವ ರಾವ್, ಸದಸ್ಯರುಗಳಾದ ವಿಜಯ ಕುಮಾರ್ ಮುದ್ರಾಡಿ, ಭುವನ ಪ್ರಸಾದ್ ಹೆಗ್ಡೆ, ವಿದ್ಯಾಪ್ರಸಾದ್, ಅನಂತರಾಜ ಉಪಾಧ್ಯ, ಕೆ. ಅಜಿತ್ ಕುಮಾರ್, ಅಶೋಕ ಎಂ., ಮರವಂತೆ ಶಾಲೆಯ ಮುಖ್ಯೋಪಾಧ್ಯಾಯ ಸರ್ವೋತ್ತಮ ಭಟ್, ಗ್ರಾಮ ಪಂಚಾಯತ್ ಸದಸ್ಯರಾದ ಕೃಷ್ಣ, ಶೋಧನ್, ನಾರಾಯಣ ಗುಜ್ಜಾಡಿ, ಹರೀಶ್ ಮೆಸ್ತ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಎಮ್. ಗಂಗಾಧರ ರಾವ್ ಎಲ್ಲರನ್ನು ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ನಾರಾಯಣ ಎಮ್. ಹೆಗಡೆ ವಂದಿಸಿದರು. ಎಚ್. ಎನ್. ಶೃಂಗೇಶ್ವರ ಸಹಕರಿಸಿದರು. ಇವು ಸಂಸ್ಥೆಯ ವತಿಯಿಂದ ನಿರ್ಮಾಣಗೊಂಡ 47 ಮತ್ತು 48ನೆಯ ಮನೆಗಳಾಗಿವೆ.