ಶಿರ್ವದ ಮಹಿಳಾ ಸೌಧದಲ್ಲಿ ಜರಗಿದ ಯಕ್ಷಶಿಕ್ಷಣ ಟ್ರಸ್ಟ್ ನ ಶಿರ್ವ ಪರಿಸರದ ಎಂಟು ಶಾಲೆಗಳ ಪ್ರದರ್ಶನ 29.12.2023ರಂದು ಸಮಾಪನಗೊಂಡಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರು ಮಾತನಾಡಿ ತನ್ನ ಆಶಯದಂತೆ ಕಾಪು ಕ್ಷೇತ್ರದ 15 ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಸಿ, ಪ್ರದರ್ಶನದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಯಕ್ಷಶಿಕ್ಷಣ ಟ್ರಸ್ಟ್ ನ ಎಲ್ಲಾ ಪದಾಧಿಕಾರಿಗಳಿಗೆ ನನ್ನ ಹೃದಯಪೂರ್ವಕ ವಂದನೆಗಳು ಎಂದು ಹರ್ಷ ವ್ಯಕ್ತಪಡಿಸಿದರು. ಸಮಾರೋಪ ಸಮಾರಂಭದಲ್ಲಿ ಎಂ. ಗಂಗಾಧರ ರಾವ್, ಮಟ್ಟಾರು ರತ್ನಾಕರ ಹೆಗ್ಡೆ, ರಮಾನಾಥ ಪಾಟ್ಕರ್, ಮನೋಹರ ಶೆಟ್ಟಿ, ರತ್ನಾಕರ ರಾವ್ ಹಾಗೂ ಬಬಿತಾ ಜೆ. ಅರಸ ಅಭ್ಯಾಗತರಾಗಿ ಭಾಗವಹಿಸಿದ್ದರು. ಆಗಮಿಸಿದ ಶಾಲೆಗಳ ಮುಖ್ಯಸ್ಥರಿಗೆ, ವಿದ್ಯಾರ್ಥಿಗಳಿಗೆ ನೀಡುವ ಪ್ರಮಾಣಪತ್ರವನ್ನು ನೀಡಲಾಯಿತು. ಯಕ್ಷಗಾನದಲ್ಲಿ ಪಾತ್ರ ನಿರ್ವಹಿಸಿದ ವಿದ್ಯಾರ್ಥಿಗಳಾದ ಅಸ್ಮಿತಾ, ಗಂಗೋತ್ರಿ, ಸ್ವಾತಿ ಹಾಗೂ ವೈಷ್ಣವಿ ತಮ್ಮ ಯಕ್ಷಶಿಕ್ಷಣದ ಅನುಭವಗಳನ್ನು ಹಂಚಿಕೊಂಡರು. ಪ್ರದರ್ಶನ ಸಂಘಟನಾ ಪದಾಧಿಕಾರಿಗಳಾದ ರವೀಂದ್ರ ಶೆಟ್ಟಿ ಕೊಲ್ಲಬೆಟ್ಟು, ಕೆ. ಶ್ರೀಪತಿ ಕಾಮತ್, ಅನಂತ ಮೂಡಿತ್ತಾಯ ಹಾಗೂ ಸಂಯೋಜಕರಾದ ವಿ. ಜಿ. ಶೆಟ್ಟರನ್ನು ಶಾಸಕರು ಶಾಲು ಹೊದೆಸಿ ಗೌರವಿಸಿದರು. ವಿ. ಜಿ. ಶೆಟ್ಟಿ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಎಚ್. ಎನ್. ಶೃಂಗೇಶ್ವರ ಸಹಕರಿಸಿದರು. ಟ್ರಸ್ಟ್ ನ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಸಮಾರೋಪ ಸಮಾರಂಭದ ನಂತರ ಪಟ್ಲ ಮೊರಾರ್ಜಿ ದೇಸಾಯಿ ವಸತಿಶಾಲಾ ವಿದ್ಯಾರ್ಥಿಗಳಿಂದ ಮೈಂದ ದ್ವಿವಿದ ಕಾಳಗ ಪ್ರಸಂಗ ಪ್ರಸ್ತುತಗೊಂಡಿತು. ಶಿರ್ವದಲ್ಲಿ ಒಟ್ಟು ಎಂಟು ಶಾಲೆಯ 250 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ತಲಾ 3 ಮಂದಿ ಮುಸ್ಲಿಂ ಹಾಗೂ ಕ್ರಿಶ್ಚಿಯನ್, 85 ಮಂದಿ ಹೊರ ಜಿಲ್ಲೆ ಮತ್ತು ಇಬ್ಬರು ಹೊರ ರಾಜ್ಯದ ವಿದ್ಯಾರ್ಥಿಗಳು ಪಾಲ್ಗೊಂಡಿರುವುದು ವಿಶೇಷವಾಗಿದೆ.