ಪ್ರಾಮಾಣಿತೆ, ಸನ್ನಡತೆ, ವಿನಯಶೀಲತೆಯುಳ್ಳ ವಿದ್ಯಾರ್ಥಿ ಸಮಾಜಕ್ಕೆ ಆಸ್ತಿಯಾಗುತ್ತಾನೆ. ವಿದ್ಯಾರ್ಥಿಗಳು ಅನುಕರಣೆಯನ್ನಲ್ಲ ಅನುಸರಣೆಯನ್ನು ರೂಢಿಸಿಕೊಳ್ಳಬೇಕು ಎಂದು ಅಕ್ಟೋಬರ್ 1, 2023 ಭಾನುವಾರ ಕುಂದಾಪುರದ ಆರ್.ಎನ್. ಶೆಟ್ಟಿ ಸಭಾಂಗಣದಲ್ಲಿ ಜರಗಿದ 18ನೆಯ ವರ್ಷದ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ವಿನಮ್ರ ಸಹಾಯಧನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಶ್ರೀ ಸೋದೆ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ನುಡಿದರು. ಅಂಬಲಪಾಡಿ ದೇವಳದ ಧರ್ಮದರ್ಶಿಗಳಾದ ಡಾ. ನಿ. ಬೀ. ವಿಜಯ ಬಲ್ಲಾಳ್, ಆನೆಗುಡ್ಡೆ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಶ್ರೀರಮಣ ಉಪಾಧ್ಯ, ಡಾ. ಶರತ್ ರಾವ್, ಶ್ರೀ ಕೃಷ್ಣಪ್ರಸಾದ್ ಅಡ್ಯಂತಾಯ, ಶ್ರೀ ರತ್ನಕುಮಾರ್, ಶ್ರೀ ಪುರುಷೋತ್ತಮ ಪಟೇಲ್ ಇವರ ಗೌರವ ಉಪಸ್ಥಿತಿಯಲ್ಲಿ ಖ್ಯಾತ ಮನೋವೈದ್ಯ ಡಾ. ಕೆ.ಎಸ್. ಕಾರಂತ್, ವೈದ್ಯ ಡಾ. ಜೆ.ಎನ್. ಭಟ್, ನರೇಂದ್ರ ನಾಯಕ್, ಹಾಗೂ ಪ್ರವೀಣ್ ಗುಡಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಇವರನ್ನು ಕೋಶಾಧಿಕಾರಿ ಕೆ. ಸದಾಶಿವರಾವ್ ಪರಿಚಯಿಸಿದರು.
ಚೆನ್ನೈನ ಕೆ. ಅಣ್ಣಾಮಲೈಯವರು ಕೊಡಮಾಡಿದ ರೂ. 25000/- ನೆರವನ್ನು ಬೈಂದೂರು ಸರಕಾರಿ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ.ಯಲ್ಲಿ ಅತ್ಯಧಿಕ ಅಂಕಗಳಿಸಿದ ನಾಲ್ಕು ವಿದ್ಯಾರ್ಥಿನಿಯರಿಗೆ ವಿತರಿಸಲಾಯಿತು. ಯು. ಉಪೇಂದ್ರ ಅವರ ನೆನಪಿನಲ್ಲಿ ಉತ್ತಮ ಕಡತ ನಿರ್ವಹಣೆಗೆ ನೀಡುವ ಹಾಗೂ ಅಕ್ಷತಾ ದೇವಾಡಿಗ ಇವಳ ಸ್ಮರಣಾರ್ಥ ನೀಡುವ ಉತ್ತಮ ಪತ್ರ ಬರೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಯಿತು. ಇದೇ ಸಂದರ್ಭದಲ್ಲಿ ಉದ್ಯೋಗ ದೊರೆತ ವಿದ್ಯಾಪೋಷಕ್ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಉಪಾಧ್ಯಕ್ಷ ವಿ. ಜಿ. ಶೆಟ್ಟಿ ಸ್ವಾಗತಿಸಿದರು. ಉಪಾಧ್ಯಕ್ಷ ಎಸ್. ವಿ. ಭಟ್ ಶ್ರೀಗಳಿಗೆ ಫಲಸಮರ್ಪಿಸಿದರು. ಅಶೋಕ್ ಎಂ. ವಂದಿಸಿದರು. ಜೊತೆಕಾರ್ಯದರ್ಶಿ ನಾರಾಯಣ ಎಮ್. ಹೆಗಡೆ ನಿರೂಪಿಸಿದರು.
ಯಕ್ಷಗಾನ ಕಲಾರಂಗ (ರಿ.), ಉಡುಪಿ ಇದರ ಅಂಗ ಸಂಸ್ಥೆಯಾದ ವಿದ್ಯಾಪೋಷಕ್ ಉಡುಪಿ ಜಿಲ್ಲೆಯ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ 18 ವರ್ಷಗಳಿಂದ ಆರ್ಥಿಕ ನೆರವು ನೀಡುತ್ತಿದ್ದು, ಈ ವರ್ಷ 1115 ವಿದ್ಯಾರ್ಥಿಗಳಿಗೆ 95,58,500/- ರೂಪಾಯಿ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ನೂತನ ಶಾಸಕರುಗಳಾದ ಶ್ರೀ ಕಿರಣ್ ಕುಮಾರ್ ಕೊಡ್ಗಿ, ಶ್ರೀ ಗುರ್ಮೆ ಸುರೇಶ್ ಶೆಟ್ಟಿ, ಶ್ರೀ ಯಶಪಾಲ್ ಸುವರ್ಣ, ಶ್ರೀ ಗುರುರಾಜ ಶೆಟ್ಟಿ ಗಂಟಿಹೊಳೆ ಹಾಗೂ ಆರ್. ಎನ್. ಶೆಟ್ಟಿ ಸಭಾಂಗಣವನ್ನು ಒದಗಿಸಿಕೊಟ್ಟ ಬಂಟರ ಯಾನೆ ನಾಡವರ ಸಂಘ ಕುಂದಾಪುರ ಇದರ ಅಧ್ಯಕ್ಷ ಶ್ರೀ ಸುಧಾಕರ ಶೆಟ್ಟಿ ಆವರ್ಸೆ ಅವರನ್ನು ಅಭಿನಂದಿಸಲಾಯಿತು. ಸಮಾರಂಭದಲ್ಲಿ ಶ್ರೀ ಆನಂದ ಸಿ. ಕುಂದರ್, ಶ್ರೀ ಹರೀಶ್ ರಾಯಸ್, ಶ್ರೀ ರವಿರಾಜ್ ಬೆಳ್ಮ, ಶ್ರೀ ಯು. ವಿಶ್ವನಾಥ ಶೆಣೈ, ಶ್ರೀ ಪಿ. ಪುರುಷೋತ್ತಮ ಶೆಟ್ಟಿ, ಶ್ರೀ ಬಿಲ್ಲಾಡಿ ಸೀತಾರಾಮ್ ಶೆಟ್ಟಿ, ಶ್ರೀ ಸಜಿತ್ ಹೆಗ್ಡೆ, ಎ. ರಘುಪತಿ ಭಟ್, ಮರ್ಣೆ ಉಮೇಶ್ ಭಟ್, ಕೆ. ಗಣೇಶ್ ರಾವ್ ಅಭ್ಯಾಗತರಾಗಿ ಭಾಗವಹಿಸಿದ್ದರು. ಐವರು ವಿದ್ಯಾರ್ಥಿಗಳಿಗೆ ಬೆಂಗಳೂರಿನ ಶ್ರೀಮತಿ ಗೀತಾ ಎಲ್. ಎನ್. ಶೆಟ್ಟಿಯವರ ಪ್ರಾಯೋಜಕತ್ವದ ಲ್ಯಾಪ್‍ಟಾಪನ್ನು ವಿತರಿಸಲಾಯಿತು. ಭುವನಪ್ರಸಾದ್ ಹಗ್ಡೆ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿ, ಜೊತೆಕಾರ್ಯದರ್ಶಿ ಎಚ್. ಎನ್. ಶೃಂಗೇಶ್ವರ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯೊಂದಿಗೆ ನಿರೂಪಿಸಿದರು. ಶ್ರೀ ಕೃಷ್ಣಪ್ರಸಾದ್ ಅಡ್ಯಂತಾಯ ಹಾಗೂ ಶ್ರೀ ಬನ್ನಾಡಿ ಸಂತೋಷ್ ಕುಮಾರ್ ಶೆಟ್ಟಿಯವರ ಸಹಕಾರದಿಂದ ಸಂಯೋಜಿಸಿದ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.