


ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಘಟಕವು ಈ ವರ್ಷ ವಿದ್ಯಾಪೋಷಕ್ ಗೆ ಆಯ್ಕೆಗೊಂಡ ಪ್ರಥಮ ಪಿ. ಯು ವಿದ್ಯಾರ್ಥಿಗಳ ಮತ್ತು ಹೆತ್ತವರ ಒಂದು ದಿನದ ಸಮಾಲೋಚನಾ ಸಭೆಯನ್ನು ಯಕ್ಷಗಾನ ಕಲಾರಂಗದ ಐವೈಸಿ ಸಭಾಭವನದಲ್ಲಿ 17.08.25 ರಂದು ಆಯೋಜಿಸಿತ್ತು. ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಖ್ಯಾತ ಶಿಕ್ಷಣ ತಜ್ಞ ಡಾ. ಮಹಾಬಲೇಶ್ವರ ರಾವ್ ವಿದ್ಯೆಯ ಮಹತ್ತ್ವ ತಿಳಿಸಿ ವಿದ್ಯಾ ಪೋಷಕ್ ಮೂಲಕ ಯಕ್ಷಗಾನ ಕಲಾರಂಗ ಸಮಾಜದ ಸಂಕಷ್ಟಕ್ಕೆ ವಿಶಿಷ್ಟವಾಗಿ ಸ್ಪಂದಿಸುತ್ತಿದೆ ಎಂದರು. ಪ್ರಥಮ ದರ್ಜೆ ಗುತ್ತಿಗೆದಾರ ದಾನಿ ರಾಜೇಶ್ ಕಾರಂತ ಮಾತನಾಡಿ ಪ್ರಥಮ ಭೇಟಿಯಲ್ಲೆ ಈ ಸಂಸ್ಥೆಯ ಕಾರ್ಯಕ್ರಮಗಳ ಅಗಾಧತೆಯ ಪರಿಚಯವಾಯಿತು, ಸಂಸ್ಥೆಯೊಂದಿಗೆ ಸದಾ ನಾನಿದ್ದೇನೆ ಎಂದರು. ಸಾಮಾಜಿಕ ಧುರೀಣ ಮುನಿಯಾಲು ಉದಯ ಕುಮಾರ್ ಶೆಟ್ಟಿ ವಿದ್ಯಾರ್ಥಿಗಳು ಕೇವಲ ಇಂಜನೀಯರ್, ಡಾಕ್ಟರ್ ಆಗುವದಷ್ಟಕ್ಕೆ ಸೀಮಿತರಾಗದೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ ಸರಕಾರಿ ಅಧಿಕಾರಿಗಳಾಗಿ ನಾಡಿನ ಭವಿಷ್ಯ ರೂಪಿಸುವ ಉನ್ನತ ಸ್ಥಾನ ಅಲಂಕರಿಸುವ ಗುರಿ ಇಟ್ಟಕೊಳ್ಳ ಬೇಕೆಂದು ಕರೆ ಕೊಟ್ಟರು. ಉದ್ಯಮಿ ಕೃಷ್ಣಪ್ರಸಾದ್ ಅಡ್ಯಂತಾಯ ಎರಡು ದಶಕಗಳಿಂದ ಸಂಸ್ಥೆಯ ಒಡನಾಟದಲ್ಲಿದ್ದೇನೆ ಇದರ ಕಾರ್ಯವೈಖರಿಯನ್ನು ಸ್ನೇಹಿತರಿಗೆ ಪರಿಚಯಿಸುತ್ತಾ ಸಂಸ್ಥೆಯ ರಾಯಭಾರಿಯಂತೆ ಕೆಲಸ ಮಾಡುವಲ್ಲಿ ಸಂತೋಷ ಅನುಭವಿಸುತ್ತಿದ್ದೇನೆ ಎಂದು ಅಭಿಪ್ರಾಯ ಪಟ್ಟರು. ನಿಟ್ಟೆ ವಿಶ್ವ ವಿದ್ಯಾಲಯದ ನಿರ್ದೇಶಕರಾದ ಹರಿಕೃಷ್ಣ ಭಟ್ ಮಾತನಾಡಿ ಜಪಾನಿಯರಂತೆ ವಿದ್ಯಾರ್ಥಿಗಳು ಕಾಯಕ ಪ್ರೀತಿಯನ್ನು ಬೆಳೆಸಿಕೊಳ್ಳ ಬೇಕೆಂದು ಹೇಳಿದರು. ನಿವೃತ್ತ ಉಪನ್ಯಾಸಕ ಅಲೆವೂರು ರಘುಪತಿ ಭಟ್, ಜಪಾನಿನ ಶ್ರೀಮತಿ ಯುಸಾಕೊ, ಸಂಸ್ಥೆಯ ಉಪಾಧ್ಯಕ್ಷರಾದ ವಿ. ಜಿ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಶೇಷ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಎ.ವಿ. ಬಾಳಿಗ ಆಸ್ಪತ್ರೆಯ ಮನೋವೈದ್ಯರಾದ ಡಾ. ವಿರೂಪಾಕ್ಷ ದೇವರಮನೆ ವಿದ್ಯಾರ್ಥಿಗಳು ಒಳ್ಳೆಯ ಅಭ್ಯಾಸ ರೂಢಿಸಿಕೊಳ್ಳಬೇಕು ನಿರಂತರ ಪರಿಶ್ರಮ ಯಶಸ್ಸಿಗೆ ಕಾರಣವಾಗುತ್ತದೆ. ಕಲಿಕೆಗೆ ಮನೆಯ ವಾತಾವರಣ ಬಹಳ ಮುಖ್ಯ. ಪಾಲಕರು ದುಶ್ಚಟಗಳಿಗೆ ಬಲಿಯಾಗದೆ ಮಕ್ಕಳ ಕಲಿಕೆಗೆ ಪೂರಕರಾಗಿರ ಬೇಕೆಂಬ ಸಂದೇಶ ನೀಡಿದರು. ಹುಬ್ಬಳ್ಳಿಯ ಮೈ ಲೈಫ್ ಸಂಸ್ಥೆಯ ಸ್ಥಾಪಕರಾದ ಪ್ರವೀಣ್ ಗುಡಿ ಚಿಕ್ಕ ಚಿಕ್ಕ ಕೆಲಸಗಳನ್ನೂ ಶಿಸ್ತಿನಿಂದ ಮಾಡುತ್ತಾ ಸತತ ಕ್ರಿಯಾಶೀಲರಾದರೆ ದೊಡ್ಡ ಸಾಧಕರಾಗುವದು ಕಷ್ಟವಾಗದೆಂದು ವಿದ್ಯಾರ್ಥಿಗಳಿಗೆ ಅಭಿಪ್ರೇರಕ ಮಾತುಗಳನ್ನಾಡಿದರು.ನಾವುಂದ ಸ.ಪ್ರೌಢ ಶಾಲೆಯ,ಎಸ್.ಎಸ್.ಎಲ್.ಸಿ.ಯಲ್ಲಿ 88 ಶೇಕಡಾ ಅಂಕಗಳಿಸಿದ ವಿಶೇಷ ಚೇತನ ವಿದ್ಯಾರ್ಥಿನಿ ಶ್ರೀರಕ್ಷಾಳನ್ನು ಗೌರವಿಸಲಾಯಿತು.ದಾನಿಗಳಾದ ಸದಾನಂದ ಶೆಣೈ ದಂಪತಿಗಳು, ರಮೇಶ್ ಭಟ್ ದಂಪತಿಗಳು, ಜಯರಾಮ್ ಪಡಿಯಾರ್, ಸಂಸ್ಥೆಯ ಸದಸ್ಯರುಗಳಾದ ವಿಜಯ ಕುಮಾರ ಮುದ್ರಾಡಿ, ಭುವನಪ್ರಸಾದ್ ಹೆಗ್ಡೆ, ಅನಂತರಾಜ ಉಪಾಧ್ಯ, ಗಣೇಶ್ ಬ್ರಹ್ಮಾವರ,ವಿದ್ಯಾಪ್ರಸಾದ್, ಎಸ್. ಗಣರಾಜ ಭಟ್, ಗಣೇಶ್ ರಾವ್ ಎಲ್ಲೂರು, ಅಶೋಕ್ ಎಂ, ಡಾ.ರಾಜೇಶ ನಾವಡ, ಸಂತೋಷ ಕುಮಾರ್ ಶೆಟ್ಟಿ, ಎಚ್. ಎನ್. ವೆಂಕಟೇಶ್, ಗಣಪತಿ ಭಟ್, ಪ್ರಭಾಕರ ಭಂಡಿ, ನಾಗರಾಜ ಹೆಗಡೆ,ವಿಶ್ವನಾಥ ಉಪಸ್ಥಿತರಿದ್ದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಿದ್ಯಾರ್ಥಿಗಳಿಗೆ ಉಪಯುಕ್ತ ಸೂಚನೆ ನೀಡಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಈ ವರ್ಷ ವಿದ್ಯಾಪೋಷಕ್ ಗೆ ಕನ್ನಡ ಮಾಧ್ಯಮದಲ್ಲಿ ಓದಿ ಪ್ರತಿಶತ 80 ಕ್ಕಿಂತಲೂ ಅಧಿಕ ಅಂಕ ಪಡೆದ ಒಟ್ಟು 661 ಅರ್ಜಿಗಳು ಬಂದಿದ್ದು ಅದರಲ್ಲಿ ಆಯ್ಕೆಗೊಂಡ 285p ವಿದ್ಯಾರ್ಥಿಗಳು ಮತ್ತು ಅವರ ಹೆತ್ತವರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಸಂಸ್ಥೆಯ ಕಾರ್ಯಕ್ರಮಗಳನ್ನು ಪರಿಚಯಿಸುವ ದೃಶ್ಯಗಳ ತುಣುಕುಗಳನ್ನು ಎಲ್.ಇ.ಡಿ ಯ ಮೂಲಕ ಬಿತ್ತರಿಸಲಾಯಿತು. ಇದೇ ಸಂದರ್ಭದಲ್ಲಿ ಅಗಲಿದ ಪತ್ರಕರ್ತ,ಸಂಸ್ಥೆ ಪ್ರಕಟಿಸಿದ ಎರಡು ಪುಸ್ತಕಗಳ ಸಂಪಾದಕ, ಒಂದು ಮನೆಯ ಪ್ರಾಯೋಜಕತ್ವ ವಹಿಸಿ ಸಹಕರಿಸಿದ ದಾನಿ ಹಾರ್ಯಾಡಿ ಮಂಜುನಾಥ ಭಟ್ಟರಿಗೆ ಶ್ರದ್ಧಾಂಜಲಿ ಸಮರ್ಪಿಸಲಾಯಿತು.