Yakshagana Kalaranga

ಕಲಾವಿದರ ಸಮಾವೇಶ – 2024

ಯಕ್ಷಗಾನ ಸರ್ವಾಂಗ ಸುಂದರ ಕಲೆ – ಪುತ್ತಿಗೆ ಶ್ರೀ

ಯಕ್ಷಗಾನ ಕಲೆಯ ಎಲ್ಲಾ ಅಂಗಗಳನ್ನು ಹೊಂದಿರುವ ಪರಿಪೂರ್ಣ ಕಲಾ ಪ್ರಕಾರ. ಅದನ್ನು ಪ್ರಸ್ತುತ ಪಡಿಸುವ ಕಲಾವಿದರು ಸಮಾಜಕ್ಕೆ ಪುರಾಣದ ಸಂದೇಶವನ್ನು ತಿಳಿಸುವ ಶ್ರೇಷ್ಠ ವಿದ್ವಾಂಸರು, ಯಕ್ಷಗಾನ ಕಲಾರಂಗ ಮಾಡುತ್ತಿರುವ ಸಮಾಜಮುಖಿ ಕೆಲಸ ಅನನ್ಯ ಮತ್ತು ಅಗಾಧ ಎಂಬುದಾಗಿ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮೇ 31ರಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಯಕ್ಷಗಾನ ಕಲಾರಂಗ ಆಯೋಜಿಸಿದ 25ನೇ ವರ್ಷದ ಕಲಾವಿದರ ಸಮಾರಂಭದಲ್ಲಿ ಅನುಗ್ರಹ ಸಂದೇಶ ನೀಡುತ್ತಾ ನುಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷರೂ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ನಿಯುಕ್ತಿಗೊಂಡ ಡಾ. ತಲ್ಲೂರು ಶಿವರಾಮ ಶೆಟ್ಟಿಯವರನ್ನು ಸ್ವಾಮೀಜಿಯವರು ಸ್ಮರಣಿಕೆ, ಶಾಲು, ಅಭಿನಂದನಾ ಪತ್ರ ನೀಡಿ ಹರಸಿದರು. ಸುಬ್ರಹ್ಮಣ್ಯ ಬೈಪಡಿತ್ತಾಯರು ಬರೆದ ಆಗಸದ ಬೆಳಕು ಪುಸ್ತಕವನ್ನು ಶ್ರೀಪಾದರು ಲೋಕಾರ್ಪಣೆಗೊಳಿಸಿದರು. ಇತ್ತೀಚೆಗೆ ನಿಧನರಾದ ಪುತ್ತೂರು ಗಂಗಾಧರ ಜೋಗಿಯವರ ಧರ್ಮಪತ್ನಿಗೆ ಸಾಂತ್ವನ ನಿಧಿಯನ್ನು ನೀಡಲಾಯಿತು. 21 ಜನ ಕಲಾವಿದರಿಗೆ ತಲಾ ಹತ್ತು ಸಾವಿರದಂತೆ ಗೃಹ ನಿರ್ಮಾಣದ ಉಡುಗೊರೆ ಹಾಗೂ 7 ಮಂದಿ ಕಲಾವಿದರಿಗೆ ವೈದ್ಯಕೀಯ ನೆರವು ವಿತರಿಸಲಾಯಿ. ಇದೇ ಸಂದರ್ಭದಲ್ಲಿ ವೃತ್ತಿಮೇಳದ ಕಲಾವಿದರಿಗೆ ತಮ್ಮ ಹೋಟೆಲ್‍ನಲ್ಲಿ ಉಚಿತವಾಗಿ ಉಪಹಾರ ನೀಡಿ ಪ್ರೋತ್ಸಾಹಿಸುತ್ತಾ ಬಂದ ಆಗುಂಬೆಯ ಗುರುರಾಜ ಅಡಿಗ ಮತ್ತು ಕೊಕ್ಕರ್ಣೆಯ ಕೆ. ಎಸ್. ಶ್ರೀನಿವಾಸ ನಾಯಕ್ ಇವರನ್ನು ಶ್ರೀಪಾದರು ಗೌರವಿಸಿದರು. ವೇದಿಕೆಯಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಡಾ. ಎಂ. ಪ್ರಭಾಕರ ಜೋಶಿ, ಆನಂದ ಸಿ. ಕುಂದರ್, ಪಿ. ಪುರುಷೋತ್ತಮ ಶೆಟ್ಟಿ, ಬೆಳ್ವೆ ಗಣೇಶ್ ಕಿಣಿ, ಸುರೇಶ್ ನಾಯಕ್ ಕುಯಿಲಾಡಿ, ಸಿಎ ಗಣೇಶ್ ಕಾಂಚನ್, ಹರಿಯಪ್ಪ ಕೋಟ್ಯಾನ್ ಅಭ್ಯಾಗತರಾಗಿ ಭಾಗವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಎಚ್. ಎನ್. ಶೃಂಗೇಶ್ವರ ಸಹಕರಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ಪೂರ್ವಾಹ್ನ 10.00 ಗಂಟೆಗೆ ಶ್ರೀ ಮಠದ ದಿವಾನರಾದ ಶ್ರೀ ನಾಗರಾಜ ಅಚಾರ್ಯ ಸಮಾವೇಶವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. 9.00ರಿಂದ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ತಜ್ಞ ವೈದ್ಯರಿಂದ ಉಚಿತ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆ ನಡೆಯಿತು. 10.30ರಿಂದ ಕಲ್ಲೇಶ್ವರ ಸ್ವಾಮಿ ಯಕ್ಷಗಾನ ಮಂಡಳಿ ತಿಪಟೂರು ಇವರಿಂದ ಮೂಡಲಪಾಯ ಯಕ್ಷಗಾನ ದಕ್ಷಯಜ್ಞ ಪ್ರದರ್ಶನಗೊಂಡಿತು. ಮಧ್ಯಾಹ್ನ 12.00ರಿಂದ ಯೂಟ್ಯೂಬ್ ದಾಖಲೀಕರಣ / ನೇರ ಪ್ರಸಾರ ಪೂರಕವೇ? ಮಾರಕವೇ? ಎಂಬ ವಿಷಯದ ಕುರಿತು 12 ಜನ ಕಲಾವಿದರು ತಮ್ಮ ಅನುಭವವನ್ನು ಹಂಚಿಕೊಂಡರು. ಡಾ. ಪ್ರದೀಪ್ ವಿ. ಸಾಮಗ ಈ ಗೋಷ್ಠಿಯ ಸಮನ್ವಯಕಾರರಾಗಿದ್ದರು. ಸಮಾವೇಶದಲ್ಲಿ ಭಾಗವಹಿಸಿದ ವೃತ್ತಿ ಮೇಳದ ಸುಮಾರು 700 ಕಲಾವಿರಿಗೆ ಉಡುಗೊರೆ, ಸಂಸ್ಥೆಯ ಸುವರ್ಣ ವರ್ಷ ಹಾಗೂ ಯಕ್ಷನಿಧಿಯ ರಜತ ವರ್ಷದ ಸವಿ ನೆನಪಿಗೆ ವಿಶೇಷವಾಗಿ ತಯಾರಿಸಿದ ಸಿಹಿ ಪೊಟ್ಟಣ ವಿತರಿಸಲಾಯಿತು.

Leave a Comment

Your email address will not be published. Required fields are marked *