Yakshagana Kalaranga

ಯಕ್ಷಗಾನ ಕಲಾರಂಗದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ

ಇನ್ಫೋಸಿಸ್ ಫೌಂಡೇಶನ್ ಉಡುಪಿಯ ಯಕ್ಷಗಾನ ಕಲಾರಂಗದ ಕಾರ್ಯಚಟುವಟಿಕೆಯನ್ನು ಗಮನಿಸಿ ಸಂಸ್ಥೆಗೆ ನಿರ್ಮಿಸಿ ಕೊಟ್ಟ ಇನ್ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪ್‍ಮೆಂಟ್, ಟ್ರೈನಿಂಗ್ & ರಿಸರ್ಚ್ ಸೆಂಟರ್‍ನ ಉದ್ಘಾಟನಾ ಸಮಾರಂಭ ಎಪ್ರಿಲ್ 20 ರಿಂದ 23, 2024ರ ವರೆಗೆ ಜರಗಿತು. ಧಾರ್ಮಿಕ ಕಾರ್ಯಕ್ರಮಗಳನ್ನು ವಿದ್ವಾನ್ ಗುಂಡಿಬೈಲು ಸುಬ್ರಹ್ಮಣ್ಯ ಭಟ್ ಹಾಗು ವೇ. ಮೂ. ಸೀತಾರಾಮ ಭಟ್ ತಂಡ ನಡೆಸಿ ಕೊಟ್ಟಿತು. ಎಪ್ರಿಲ್ 20ರ ಸಂಜೆ 6.00 ಗಂಟೆಗೆ ಪಲಿಮಾರು ಮಠಾಧೀಶರುಗಳಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಮತ್ತು ಶ್ರೀ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಜ್ಯೋತಿ ಬೆಳಗಿಸಿ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅನಂತರದಲ್ಲಿ ಪುಣ್ಯಾಹ, ರಾಷ್ಟ್ರೋಗ್ನ ಹೋಮ, ಬಲಿ ಇತ್ಯಾದಿ ಧಾರ್ಮಿಕ ವಿಧಿಗಳು ನಡೆದವು. ಎಪ್ರಿಲ್ 21ರ ಬೆಳಗ್ಗೆ 8.00 ಗಂಟೆಗೆ ಗಣಹವನ ಪೂರೈಸಿ ಅಧ್ಯಕ್ಷರ ನೇತೃತ್ವದಲ್ಲಿ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರಲ್ಲಿ ಶ್ರೀಕೃಷ್ಣ ಪ್ರಸಾದ ಅನುಗ್ರಹ ಮಂತ್ರಾಕ್ಷತೆ ಪಡೆದು ಯಕ್ಷಗಾನ ಕಲಾರಂಗದ ಕಚೇರಿಗೆ ಬಂದು ಯಕ್ಷಗಾನ ಪರಿಕರ, ಪುಸ್ತಕ ಇತ್ಯಾದಿಗಳೊಂದಿಗೆ ಮೆರವಣಿಗೆಯಲ್ಲಿ ರಥಬೀದಿಯಲ್ಲಿ ಅನಂತೇಶ್ವರ ಚಂದ್ರಮೌಳೇಶ್ವರಕ್ಕೆ ಪ್ರದಕ್ಷಿಣೆ ಮಾಡಿ ನೂತನ ಕಟ್ಟಡದತ್ತ ಬಂದೆವು. ಬೆಳಿಗ್ಗೆ 10.00 ಗಂಟೆಗೆ ಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಹಾಗು ಶೀರೂರು ಮಠಾಧೀಶರಾದ ಶ್ರೀ ಶ್ರೀ ವೇದವರ್ಧನ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ದ್ವಾರಪೂಜೆ ನಡೆಸಿ ತಂದ ಎಲ್ಲ ಪರಿಕರಗಳೊಂದಿಗೆ ಪ್ರವೇಶೋತ್ಸವ ಜರಗಿತು. ಮೊದಲೆ ಸಿದ್ಧಪಡಿಸಿದ ಗದ್ದುಗೆಯಲ್ಲಿ ಕೃಷ್ಣನ ವಿಗ್ರಹ ಮತ್ತು ಇತರ ಪರಿಕರಗಳನ್ನು ಇಟ್ಟು ಪೂಜಿಸಿದೆವು. ಸ್ವಾಮೀಜಿಯವರು ಮಂಗಳಾರತಿ ಬೆಳಗಿದರು.
ಅಂದು ಅಪರಾಹ್ನ 3.30 ಗಂಟೆಗೆ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಸೋದೆ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಹಾಗು ಅದಮಾರು ಮಠಾಧೀಶರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಮಾಹೆ ವಿಶ್ವ ವಿದ್ಯಾಲಯದ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳರ ಅಧ್ಯಕ್ಷತೆಯಲ್ಲಿ, ನಾಡೋಜ ಡಾ. ಜಿ. ಶಂಕರ್, ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನೀ. ಬಿ. ವಿಜಯ ಬಲ್ಲಾಳ, ಉದ್ಯಮಿ ರಮೇಶ್ಚಂದ್ರ ಹೆಗ್ಡೆ ಇವರೆಲ್ಲರ ಸಮಕ್ಷ ಇನ್ಫೋಸಿಸ್ ವಿಶ್ವಸ್ಥ ಸುನಿಲ್ ಧಾರೇಶ್ವರ ಕಟ್ಟಡದ ಹೊರಾಂಗಣದಲ್ಲಿರುವ ನಾಮಫಲಕವನ್ನು ಅನಾವರಣ ಗೊಳಿಸಿದರು. ಎಲ್ಲರೂ ಒಳಗೆ ಬಂದು ಆಸೀನರಾಗುತ್ತಿದ್ದಂತೆ ವೇದಿಕೆಯಲ್ಲಿ ತೆಂಕುತಿಟ್ಟು ಕಲಾವಿದರಿಂದ ಬಾಲಗೋಪಾಲ, ಗಣಪತಿ ಪೂಜಾನೃತ್ಯ ಹಾಗು ಬಡಗುತಿಟ್ಟು ಕಲಾವಿದರಿಂದ ಪೀಠಿಕಾ ಸ್ತ್ರೀವೇಷ ನೃತ್ಯ ಜರಗಿತು. ಅನಂತರ ಸ್ವಾಮೀಜಿಗಳು ಇತರ ಗಣ್ಯರು ವೇದಿಕೆಯಲ್ಲಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಸ್ವಾಮಿಜಿಯವರಿಂದ ಅನುಗ್ರಹ ಸಂದೇಶ, ಸುನಿಲ್ ಧಾರೇಶ್ವರರ ಉದ್ಘಾಟನಾ ಮಾತು, ಅತಿಥಿ, ಅಧ್ಯಕ್ಷರ ಭಾಷಣಗಳು ಸಂಪನ್ನಗೊಂಡವು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು, ಕಾರ್ಯದರ್ಶಿ ಮುರಲಿ ಕಡೆಕಾರ್ ಸಂಸ್ಥೆಯ ಕಾರ್ಯಚಟುವಟಿಕೆ ತಿಳಿಸಿ ನಿರೂಪಿಸಿದರು, ಜತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ವಂದಿಸಿದರು. ಸಭಾ ಕಾರ್ಯಕ್ರಮದ ಅನಂತರ ಒರಿಸ್ಸಾದ ಹಿಮ್ಮೇಳ ಬಳಗದೊಂದಿಗೆ ನೃತ್ಯಾಂತರ್ ಡ್ಯಾನ್ಸ್ ಬಳಗದವರಿಂದ ಒಡಿಸ್ಸಿ ನೃತ್ಯ ‘ಕೃಷ್ಣಸ್ಯ ವರ್ಣಾನಿ’ ಪ್ರದರ್ಶನಗೋಡಿತು.
ಎಪ್ರಿಲ್ 22 ರಂದು ಸಂಜೆ 5ರಿಂದ 6ರ ವರೆಗೆ ಬಬ್ಬುಮಾಯಗಾರ ಕಥನ ಶ್ರವಣ ಹಾಗೂ 6ರಿಂದ 8 ಗಂಟೆಯವರೆಗೆ ಕೇರಳ ಕಲಾಮಂಡಲಂ ಬಳಗದವರಿಂದ ಕಥಕಳಿ ‘ಶ್ರೀರಾಮ ಪಟ್ಟಾಭಿಷೇಕಂ’ ಸೊಗಸಾಗಿ ಮೂಡಿಬಂದಿತು.
ಎಪ್ರಿಲ್ 23ರಂದು ಸಂಜೆ 5 ರಿಂದ 6 ಗಂಟೆಯವರೆಗೆ ಮಾತಿನ ಮಂಟಪದಲ್ಲಿ ‘ನೃಸಿಂಹಾವತಾರ’ ತಾಳಮದ್ದಲೆ, 6 ರಿಂದ 7 ಗಂಟೆಯವರೆಗೆ ಯಕ್ಷಶಿಕ್ಷಣದ ಕಿಶೋರರಿಂದ ಬಡಗುತಿಟ್ಟಿನ ಯಕ್ಷಗಾನ ‘ಮೈಂದ ದ್ವಿವಿದ ಕಾಳಗ’ ಹಾಗೂ 7 ರಿಂದ 8 ಗಂಟೆಯವರೆಗೆ ತೆಂಕಿನ ಯುವ ಕಲಾವಿದರಿಂದ ತೆಂಕುತಿಟ್ಟಿನ ಯಕ್ಷಗಾನ ‘ಚಕ್ರವ್ಯೂಹ’ ಸೊಗಸಾಗಿ ಪ್ರಸ್ತುತಗೊಂಡಿತು. ಮೂರನೇ ಅಂತಸ್ತಿನಲ್ಲಿ ತೆಂಕು ಮತ್ತು ಬಡಗು ತಿಟ್ಟಿನ ವೇಷಭೂಷಣ, ಯಕ್ಷಗಾನ ಪರಿಕರ, ಗತಿಸಿದ ಕಲಾವಿದರ ಭಾವಚಿತ್ರಗಳನ್ನು ಕಿರು ಪರಿಚಯದೊಂದಿಗೆ ವ್ಯವಸ್ಥೆ ಮಾಡಲಾಗಿತ್ತು. ಮೂರು ದಿನವೂ ದೊಡ್ಡ ಸಂಖ್ಯೆಯಲ್ಲಿ ಸಂಸ್ಥೆಯ ಸದಸ್ಯರು, ಹಿತೈಷಿಗಳು, ದಾನಿಗಳು, ಅಭಿಮಾನಿಗಳು ಕಟ್ಟಡ, ಉದ್ಘಾಟನೆ, ಕಲಾಕಾರ್ಯಕ್ರಮ, ವಸ್ತು ಪ್ರದರ್ಶನ ವೀಕ್ಷಿಸಿ ಸಂತಸ ಪಟ್ಟರು. ಮೆಚ್ಚುಗೆ ವ್ಯಕ್ತಪಡಿಸಿದರು. ಬಂದವರಿಗೆಲ್ಲ ಮೂರು ದಿನವೂ ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು. ಸಂಸ್ಥೆಯ ಸುವರ್ಣವರ್ಷದ ಆರಂಭದಲ್ಲಿ ಮೂಡಿಬಂದ ಈ ಕಾರ್ಯಕ್ರಮ ಸಂಸ್ಥೆಯ ಚರಿತ್ರೆಯಲ್ಲಿ ಮಹತ್ತ್ವದ ಮೈಲುಗಲ್ಲಾಯಿತು.

Leave a Comment

Your email address will not be published. Required fields are marked *

We're currently hard at work gathering information and crafting content to bring you the best experience. Stay tuned for exciting updates!