ಯಕ್ಷಗಾನ ಕಲಾರಂಗದ ವಾರ್ಷಿಕ ಸಂಚಿಕೆ ‘ಕಲಾಂತರಂಗ – 2022-23’ನ್ನು 16.09.2023 ರಂದು ಅದಮಾರು ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಅದಮಾರು ಮಠದಲ್ಲಿ ಬಿಡುಗಡೆಗೊಳಿಸಿದರು. ಸಂಸ್ಥೆ ಯಕ್ಷನಿಧಿ, ವಿದ್ಯಾಪೋಷಕ್ ಮತ್ತು ಯಕ್ಷಶಿಕ್ಷಣದ ಕುರಿತು ಮಾಡುತ್ತಿರುವ ಒಂದು ವರ್ಷದ ಮಾಹಿತಿಯನ್ನು ಒಳಗೊಂಡಿರುವ ಈ ಹೊತ್ತಗೆಯನ್ನು ಅನಾವರಣಗೊಳಿಸಿ, ಒಂದೇ ಮನಸ್ಸಿನಿಂದ ನೀವೆಲ್ಲಾ ಒಟ್ಟಾಗಿ ಮಾಡುವ ಕೆಲಸ ಸಮಾಜಕ್ಕೆ ತುಂಬಾ ಉಪಯುಕ್ತವಾಗಿದೆ. ಸಂಸ್ಥೆ ಇನ್ನಷ್ಟು ಉತ್ಕರ್ಷೆಯನ್ನು ಸಾಧಿಸಲಿ ಎಂದು ಆಶೀರ್ವದಿಸಿದರು. ಆರಂಭದಲ್ಲಿ ಅಧ್ಯಕ್ಷ ಎಂ. ಗಂಗಾಧರ ರಾವ್, ಉಪಾಧ್ಯಕ್ಷರಾದ ಎಸ್. ವಿ. ಭಟ್ ಹಾಗೂ ವಿ. ಜಿ. ಶೆಟ್ಟಿಯವರು ಸ್ವಾಮೀಜಿಯವರಿಗೆ ಫಲವಸ್ತು ಸಮರ್ಪಿಸಿದರು. ಸಂಸ್ಥೆಯ ಕೋಶಾಧಿಕಾರಿ ಕೆ. ಸದಾಶಿವ ರಾವ್ ಜತೆ ಕಾರ್ಯದರ್ಶಿಯವರಾದ ನಾರಾಯಣ ಎಂ. ಹೆಗಡೆ, ಎಚ್. ಎನ್. ಶೃಂಗೇಶ್ವರ ಹಾಗೂ ಕಲಾರಂಗದ ಕಾರ್ಯಕಾರೀ ಸಮಿತಿಯ ಸದಸ್ಯರಾದ ಭುವನ ಪ್ರಸಾದ್ ಹೆಗ್ಡೆ, ಅನಂತರಾಜ ಉಪಾಧ್ಯ, ವಿದ್ಯಾಪ್ರಸಾದ್, ಗಣೇಶ್ ರಾವ್ ಎಲ್ಲೂರು ಉಪಸ್ಥಿತರಿದ್ದರು. ಕಾರ್ಯದರ್ಶಿ ಮುರಲಿ ಕಡೆಕಾರ್ 2005ರಲ್ಲಿ ವಿಶ್ವಪ್ರಿಯತೀರ್ಥರು ವಿದ್ಯಾಪೋಷಕನ್ನು ಉದ್ಘಾಟಿಸಿದನ್ನೂ, ಸಂಸ್ಥೆಗೆ ಶ್ರೀಮಠ ನಿರಂತರ ನೀಡಿದ ಪ್ರೋತ್ಸಾಹವನ್ನೂ ಕೃತಜ್ಞತೆಯಿಂದ ಸ್ಮರಿಸಿಕೊಂಡು ಕಾರ್ಯಕ್ರಮ ನಿರೂಪಿಸಿದರು.