ಉಡುಪಿಯ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ವಿದ್ಯಾರ್ಥಿನಿ ಹಾಲಾಡಿ ಸಮೀಪದ ಗೋರಾಜೆಯ ಸಿಂಚನಾ (ಶ್ರೀಮತಿ ಲಲಿತಾ ಮತ್ತು ದಿ. ಸಂಜೀವ ಕುಲಾಲ ಇವರ ಪುತ್ರಿ) ಇವಳಿಗೆ ಪೂಜ್ಯ ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಅನುಗ್ರಹಪೂರ್ವಕ ಪ್ರಾಯೋಜಕತ್ವದಲ್ಲಿ 6.50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ನೂತನ ಮನೆ ‘ಕಸ್ತೂರಿ ನಿವಾಸ’ ವನ್ನು ಜೂನ್ 19, 2023ರಂದು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ತಮ್ಮ ಅನುಗ್ರಹ ಸಂದೇಶದಲ್ಲಿ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಸಮಾಜದಲ್ಲಿ ಉಳ್ಳವರು ಇಲ್ಲದವರಿಗೆ ನೀಡಿದರೆ ಎಲ್ಲರೂ ನೆಮ್ಮದಿಯಿಂದ ಬಾಳಲು ಸಾಧ್ಯ. ದುಂಬಿ ಬೇರೆ ಹೂವುಗಳ ಮಕರಂದವನ್ನು ಹೀರಿ ಸಿಹಿಯಾದ ಜೇನನ್ನು ಕೊಡುವ ಹಾಗೆ ಯಕ್ಷಗಾನ ಕಲಾರಂಗವು ದಾನಿಗಳಿಂದ ಸಂಗ್ರಹಿಸಿದ ಹಣವನ್ನು ಮನೆಯ ರೂಪದಲ್ಲಿ ಬಡವರಿಗೆ ನೀಡಿ ಸಮಾಜಕ್ಕೆ ಮಾದರಿಯಾಗಿದೆ ಎಂದು ನುಡಿದರು. ಪಲಿಮಾರು ಮಠದ ಕಿರಿಯ ಯತಿಗಳಾದ ಶ್ರೀ ಶ್ರೀ ವಿದ್ಯಾರಾಜೇಂದ್ರತೀರ್ಥ ಶ್ರೀಪಾದರು ಅನುಗ್ರಹ ಸಂದೇಶದಲ್ಲಿ ಅಗತ್ಯವರಿತು ನೀಡುವ ದಾನ ಶ್ರೇಷ್ಟತಮ ಎಂದು ಹೇಳಿದರು. ಕುಂದಾಪುರ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿಯವರ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭದಲ್ಲಿ ಮುಖ್ಯ ಅಭ್ಯಾಗತರಾಗಿ ನಿವೃತ್ತ ಬ್ಯಾಂಕ್ ಅಧಿಕಾರಿ ವೈಜಯಂತಿ ಕಾಮತ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಹಾಲಾಡಿ ಪಂಚಾಯತ್ ಉಪಾಧ್ಯಕ್ಷ ಜನಾರ್ದನ, ಯು.ವಿಶ್ವನಾಥ ಶೆಣೈ, ಕೆ. ಸದಾಶಿವ ಭಟ್, ಯು. ರಾಜಗೋಪಾಲ ಆಚಾರ್ಯ, ಸಂಸ್ಥೆಯ ಉಪಾಧ್ಯಕ್ಷ ವಿ.ಜಿ.ಶೆಟ್ಟಿ, ಕೆ. ಸದಾಶಿವ ರಾವ್, ಅನಂತರಾಜ ಉಪಾಧ್ಯ, ಬಿ. ಭುವನಪ್ರಸಾದ್ ಹೆಗ್ಡೆ, ವಿದ್ಯಾಪ್ರಸಾದ್, ಕೃಷ್ಣಮೂರ್ತಿ ಭಟ್, ನಟರಾಜ ಉಪಾಧ್ಯ, ಗಣೇಶ್ ಬ್ರಹ್ಮಾವರ, ಅಶೋಕ್ ಎಂ., ಕಿಶೋರ್ ಸಿ. ಉದ್ಯಾವರ, ಕೆ. ಅಜಿತ್ ಕುಮಾರ್ ಹಾಗೂ ನಾಗರಾಜ ಹೆಗಡೆ ಉಪಸ್ಥಿತರಿದ್ದರು. ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಸೂಚನೆಯಂತೆ ಪಂಚಾಯತ್ ಸದಸ್ಯ ಗುರುಪ್ರಸಾದ್ ಶೆಟ್ಟಿ ಹಾಗೂ ಭೋಜು ಕುಲಾಲ್ ಎಲ್ಲ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದ್ದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದರು. ಹೆಚ್. ಎನ್. ಶೃಂಗೇಶ್ವರ ಸಹಕರಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಇದು ಸಂಸ್ಥೆ ದಾನಿಗಳ ನೆರವಿನಿಂದ ನಿರ್ಮಿಸಿದ 39ನೆಯ ಮನೆಯಾಗಿದೆ. ಇನ್ನೂ 9 ಮನೆಗಳು ನಿರ್ಮಾಣದ ಹಂತದಲ್ಲಿವೆ.