ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿಗಳಾದ ಬಾರ್ಕೂರಿನ ಕೋಟೆಕೆರೆಯ ಶರತ್ ಕುಮಾರ್ (ಸಿ.ಎ ವಿದ್ಯಾರ್ಥಿ) ಮತ್ತು ಜ್ಞಾನೇಶ್ ಕುಮಾರ್ (ಅಂತಿಮ ಇಂಜೀನಿಯರಿಂಗ್) ಇವರಿಗೆ ಉಡುಪಿಯಲ್ಲಿ ಲೆಕ್ಕ ಪರಿಶೋಧಕರಾಗಿರುವ ಸಿಎ ಗಣೇಶ್ ಕಾಂಚನ್‍ರ ಪ್ರಾಯೋಜಕತ್ವದಲ್ಲಿ ನೂತನವಾಗಿ ನಿರ್ಮಿಸಿದ ಮನೆಯನ್ನು ಜೂನ್ 11, 2022ರಂದು ಶ್ರೀ ಗಣೇಶ್ ಕಾಂಚನ್ ಮತ್ತು ಶ್ರೀಮತಿ ಪ್ರಫುಲ್ಲಾ ಜಿ. ಕಾಂಚನ್ ದಂಪತಿಗಳು ಜ್ಯೋತಿಬೆಳಗಿಸಿ ಉದ್ಘಾಟಿಸಿದರು. ಕೃತಜ್ಞತಾಭಾವ ಬದುಕಿನಲ್ಲಿ ರೂಢಿಸಿಕೊಳ್ಳಲೇಬೇಕಾದ ಮಹತ್ವದ ಗುಣ. ಕಷ್ಟದಲ್ಲಿದ್ದಾಗ ಬೇರೆಯವರು ಸಹಾಯಮಾಡಿದ್ದನ್ನು ಮರೆಯದೆ ನಾವು ಒಳ್ಳೆಯ ಸ್ಥಿತಿಗೆ ಬಂದಾಗ ಸಮಾಜದಲ್ಲಿ ಇನ್ನೊಬ್ಬರಿಗೆ ಸಹಾಯ ಮಾಡುವ ಮೂಲಕ ಋಣಸಂದಾಯ ಮಾಡಬೇಕು. ಏರಿದ ಏಣಿ ದಾಟಿದ ದೋಣಿಯನ್ನು ಮರೆಯಬಾರದು ಎಂದು ಉದ್ಘಾಟಕರು ನುಡಿದರು. ಅಭ್ಯಾಗತರಾಗಿ ಭಾಗವಹಿಸಿದ ಶೆಟ್ಟಿಗಾರ್ ಇಂಡಸ್ಟ್ರೀಸ್‍ನ ಮಾಲಕರಾದ ಶ್ರೀ ಶ್ರೀನಿವಾಸ ಶೆಟ್ಟಿಗಾರ್ ಮಾತನಾಡಿ ಯಕ್ಷಗಾನ ಕಲಾರಂಗದ ಸಮಾಜಮುಖೀ ಕಾರ್ಯಕ್ಕೆ ತಾನು ಸಹಕರಿಸುವುದಾಗಿ ಭರವಸೆ ನೀಡಿದರು. ಯು. ವಿಶ್ವನಾಥ ಶೆಣೈ, ರಾಜಗೋಪಾಲ ಆಚಾರ್ಯ, ತುಳಸೀದಾಸ್ ಕಾಂಚನ್, ವಸಂತ ಕಾಂಚನ್, ಸಂಸ್ಥೆಯ ಉಪಾಧ್ಯಕ್ಷರಾದ ಎಸ್. ವಿ. ಭಟ್, ವಿ.ಜಿ. ಶೆಟ್ಟಿ, ಕೋಶಾಧಿಕಾರಿಗಳಾದ ಮನೋಹರ್ ಕೆ., ಪ್ರೊ. ಕೆ. ಸದಾಶಿವ ರಾವ್ ಹಾಗೂ ಸಂಸ್ಥೆಯ ಕಾರ್ಯಕರ್ತರು ಉಪಸ್ಥಿತರಿದ್ದರು. ಇದು ಸಂಸ್ಥೆಯು ದಾನಿಗಳ ನೆರವಿನಿಂದ ನಿರ್ಮಿಸಿಕೊಟ್ಟ 29ನೇ ಮನೆಯಾಗಿದ್ದು, ಈ ತಿಂಗಳಿನಲ್ಲಿ ಇನ್ನೂ 6 ಮನೆಗಳು ಉದ್ಘಾಟನೆಗೊಳ್ಳಲಿವೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸುತ್ತಾ ನುಡಿದರು. ಪ್ರೊ. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದೊಗೆ ಕಾರ್ಯಕ್ರಮ ನಿರೂಪಿಸಿದರು.