

















ಅಕ್ಟೋಬರ್ 05, 2025ರಂದು ಭಾನುವಾರ ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜರಗಿದ 21ನೆಯ ವರ್ಷದ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ವಿನಮ್ರ ಸಹಾಯಧನ ವಿತರಣಾ ಸಮಾರಂಭವನ್ನು ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಉದ್ಘಾಟಿಸಿದರು. ಅಂಬಲಪಾಡಿ ದೇವಳದ ಧರ್ಮದರ್ಶಿಗಳಾದ ಡಾ. ನಿ. ಬೀ. ವಿಜಯ ಬಲ್ಲಾಳ್ ಶುಭಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ಮಾಹೆಯ ಸಹಕುಲಪತಿಗಳಾದ ಡಾ. ಎಚ್. ಎಸ್ ಬಲ್ಲಾಳ್ ಅªರು ಯಕ್ಷಗಾನ ಕಲಾರಂಗದ ನಿರಂತರ ಸಾಧನೆಯನ್ನು ಶ್ಲಾಘಿಸಿ, ಮಾಹೆ ಸದಾ ನಿಮ್ಮೊಂದಿಗಿದೆ. ನಿಮ್ಮ ಅಪೇಕ್ಷೆಯಂತೆ ನಮ್ಮ ವಿದ್ಯಾಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾಪೋಷಕ್ ವಿದ್ಯಾರ್ಥಿಗಳ ಶುಲ್ಕದಲ್ಲಿ ರಿಯಾಯತಿ ನೀಡುವುದಾಗಿಯೂ, ವಿದ್ಯಾಪೋಷಕ್ ವಿದ್ಯಾರ್ಥಿಗಳ ಕುಟುಂಬದವರಿಗೆ ಮಣಿಪಾಲ ಮತ್ತು ಮಣಿಪಾಲ ಸಮೂಹದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾದರೆ ತಲಾ ರೂ. 50000/-ದ ವರೆಗೆ ರಿಯಾಯತಿ ನೀಡುವುದಾಗಿ ಭರವಸೆ ನೀಡಿದರು. ಅಭ್ಯಾಗತರಾಗಿ ಭಾಗವಹಿಸಿದ್ದ ಶಾಸಕರುಗಳಾದ ಕಿರಣ್‍ಕುಮಾರ್ ಕೊಡ್ಗಿ, ಗುರುರಾಜ ಗಂಟಿಹೊಳೆ ಹಾಗೂ ಡಾ. ಜಿ. ಎಸ್. ಚಂದ್ರಶೇಖರ, ಡಾ. ಪಿ. ಎಸ್. ಗುರುಮೂರ್ತಿ, ಪಿ. ಸುರೇಶ್ ನಾಯಕ್, ಸಂತೋಷ್ ಎಂ. ಶೆಟ್ಟಿ, ಹರಿಯಪ್ಪ ಕೋಟ್ಯಾನ್, ಡಾ. ಎಂ. ಆರ್ ಹೆಗಡೆ, ಯೋಗೀಶ್‍ಚಂದ್ರಾಧರ್, ಯು. ವಿಶ್ವನಾಥ ಶೆಣೈ, ರಾಮ ಕೆ. ಶಿರೂರು, ಪಿ. ಸದಾನಂದ ಶೆಣೈ, ಲಕ್ಷ್ಮಣ ಬಿ. ಅಮೀನ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅಭಿಪ್ರೇರಕ ಮಾತುಗಳನ್ನಾಡಿದರು.
ಸಂಪನ್ಮೂಲ ವ್ಯಕ್ತಿಗಳಾದ ಡಾ. ಜೆ. ಎನ್. ಭಟ್, ಬನ್ನಾಡಿ ನಾರಾಯಣ ಅಚಾರ್, ಪ್ರವೀಣ್ ಗುಡಿ ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಮಾರ್ಗದರ್ಶನ ಮಾಡಿದರು. ಇದೇ ಸಂದರ್ಭದಲ್ಲಿ ಚೆನ್ನೈನ ಕೆ. ಅಣ್ಣಾಮಲೈಯವರು ಪ್ರತೀ ವರ್ಷ ನೀಡುತ್ತಿರುವ ರೂ. 25000/- ನೆರವನ್ನು ಬೈಂದೂರು ಸರಕಾರಿ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ.ಯಲ್ಲಿ ಅತ್ಯಧಿಕ ಅಂಕಗಳಿಸಿದ ನಾಲ್ವರು ವಿದ್ಯಾರ್ಥಿನಿಯರಿಗೆ ವಿತರಿಸಲಾಯಿತು. ಯು. ಉಪೇಂದ್ರ ಅವರ ನೆನಪಿನಲ್ಲಿ ಉತ್ತಮ ಕಡತ ನಿರ್ವಹಣೆಗೆ ನೀಡುವ ಹಾಗೂ ಅಕ್ಷತಾ ದೇವಾಡಿಗ ಇವಳ ಸ್ಮರಣಾರ್ಥ ಉತ್ತಮ ಪತ್ರ ಬರೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಯಿತು. ಸಂಸ್ಥೆಯ ಪೋಷಕರಾದ ಪಿ. ವಾಸುದೇವ ಕಾರಂತ, ಯುವರಾಜ್ ಸಾಲಿಯಾನ್ ಮತ್ತು ಸತ್ಯೇಂದ್ರ ಪೈ ಇವರನ್ನು ಶಾಲು, ಸ್ಮರಣಿಕೆಯೊಂದಿಗೆ ಗೌರವಿಸಲಾಯಿತು. ಕಾರ್ಯಕಾರಿ ಸಮಿತಿಯ ಹಿರಿಯ ಸದಸ್ಯ ಬಿ. ಭುವನಪ್ರಸಾದ್ ಹೆಗ್ಡೆ ಶ್ರೀಗಳಿಗೆ ಫಲಸಮರ್ಪಿಸಿದರು. ಉಪಾಧ್ಯಕ್ಷರಾದ ವಿ. ಜಿ. ಶೆಟ್ಟಿ ಸ್ವಾಗತಿಸಿದರು. ಗಣೇಶ್ ರಾವ್ ಎಲ್ಲೂರು ವಂದಿಸಿದರು. ಜೊತೆಕಾರ್ಯದರ್ಶಿ ನಾರಾಯಣ ಎಮ್. ಹೆಗಡೆ ನಿರೂಪಿಸಿದರು.