









ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಚೈತ್ರಾ (ಶ್ರೀಮತಿ ಲಕ್ಷ್ಮಿ ಮತ್ತು ಶ್ರೀ ಜಯಂತ ಇವರ ಪುತ್ರಿ) ಇವಳಿಗೆ ಬೈಂದೂರು ತಾಲೂಕಿನ ತೆಗ್ಗರ್ಸೆಯಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ನಿರ್ದೇಶಕರಾದ ಜಪಾನ್‍ನ ಹರಿಕೃಷ್ಣ ಭಟ್ ಅವರು ತಮ್ಮ ತಂದೆ-ತಾಯಂದಿರಾದ ವಾಸುದೇವ ಭಟ್ ಮತ್ತು ರುಕ್ಮಿಣಿ ಭಟ್ ಇವರ ಸವಿನೆನಪಿನಲ್ಲಿ, 6 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ‘ರುಕ್ಮಿಣೀವಾಸುದೇವ’ ವನ್ನು 16.07.2025 ರಂದು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ತನ್ನ ಬಾಲ್ಯದ ಕಷ್ಟದ ದಿನಗಳನ್ನು ನೆನಪು ಮಾಡಿಕೊಂಡರು. ಯಕ್ಷಗಾನ ಕಲಾರಂಗ ಮನೆಯಿಲ್ಲದ ವಿದ್ಯಾಪೋಷಕ್ ವಿದ್ಯಾರ್ಥಿಗಳಿಗೆ ಮನೆಕಟ್ಟಿಸಿ ಕೊಡುತ್ತಿರುವ ವಿಷಯ ಪತ್ನಿಯಲ್ಲಿ ಪ್ರಸ್ತಾಪಿಸಿದಾಗ ನಾವೂ ಒಂದು ಮನೆಕಟ್ಟಿಸಿ ಕೊಡೋಣ ಎಂದು ಸೂಚಿಸಿದಳು. ಇದಕ್ಕೆ ಅವಳೇ ಪ್ರೇರಣೆ. ಇದು ಒಂದೇ ಮನೆಗೆ ಮುಕ್ತಾಯವಾಗದು ಇನ್ನೂ ಮುಂದುವರಿಯುವದೆಂಬ ಸೂಚನೆ ನೀಡಿದರು. ಶ್ರೀಮತಿ ಯುಸಾಕೊ ಕನ್ನಡದಲ್ಲೇ ಶುಭ ಕೋರಿದರು. ಅಭ್ಯಾಗತರಾದ ಎ. ರಘುಪತಿ ಭಟ್ ತನ್ನ ತಮ್ಮನ ಸಾಧನೆ ಶ್ಲಾಘಿಸಿದರಲ್ಲದೆ, ಯಕ್ಷಗಾನ ಕಲಾರಂಗದ ಸಮರ್ಥ ನಾಯಕತ್ವ ಮತ್ತು ಸಮಾನ ಮನಸ್ಕ ಕಾರ್ಯಕರ್ತರ ದುಡಿಮೆ ಎಲ್ಲ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಅಭಿಪ್ರಾಯ ಪಟ್ಟರು. ಸಂದೀಪಿನಿ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕರಾದ ವಿಶ್ವೇಶ್ವರ ಅಡಿಗ, ಉಡುಪಿ ಭಾರತೀಶ ಜ್ಯುವೆಲರ್ಸನ ಮಾಲಿಕ ಶಶಿಧರ ಭಟ್ ಅತಿಥಿಗಳಾಗಿ ಭಾಗವಹಿಸಿದ್ದರು. ಉಪಾಧ್ಯಕ್ಷರಾದ ಎಸ್. ವಿ. ಭಟ್, ಪಿ. ಕಿಷನ್ ಹೆಗ್ಡೆ, ಕೋಶಾಧಿಕಾರಿ ಕೆ. ಸದಾಶಿವ ರಾವ್, ಸದಸ್ಯರುಗಳಾದ ಯು. ವಿಶ್ವನಾಥ ಶೆಣೈ, ಯು. ಎಸ್. ರಾಜಗೋಪಾಲ ಆಚಾರ್ಯ, ಅನಂತರಾಜ ಉಪಾಧ್ಯ, ಜಯರಾಮ ಪಡಿಯಾರ್, ಬೈಂದೂರು ಶಾಸಕರ ಆಪ್ತಕಾರ್ಯದರ್ಶಿ ಶೋಧನ ಕುಮಾರ್ ಉಪಸ್ಥಿತರಿದ್ದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.