





ನಾನು ಕರ್ತವ್ಯವನ್ನಷ್ಟೇ ಮಾಡಿದ್ದೇನೆ – ಎ. ಪಿ. ಕೊಡಂಚ

ನಾವೆಲ್ಲಾ ನಮ್ಮ ಕರ್ಮವನ್ನಷ್ಟೇ ಮಾಡುವುದಕ್ಕೆ ಹುಟ್ಟಿಬಂದವರು. ಸಮಾಜದಿಂದ ಸಾಕಷ್ಟು ಪಡೆದಿದ್ದೇವೆ. ಸಾಧ್ಯವಾಗುವವರೆಗೆ ಕರ್ಮವನ್ನು ಮಾಡುತ್ತಾ ಹೋಗಬೇಕು. ಫಲವನ್ನು ಅಪೇಕ್ಷಿಸಬಾರದು. ಯಕ್ಷಗಾನ ಕಲಾರಂಗದ ಐವೈಸಿ ಸಭಾಭವನದಲ್ಲಿ ಸೇವಾಭೂಷಣ ಪ್ರಶಸ್ತಿಯನ್ನು ಸ್ವೀಕರಿಸುತ್ತಾ ಎರಡೂವರೆ ದಶಕ ಯಾವ ಪ್ರತಿಫಲವನ್ನೂ ಅಪೇಕ್ಷಿಸದೆ, ಅನೇಕ ಗ್ರಾಹಕರಿಗೆ ನ್ಯಾಯವನ್ನು ಒದಗಿಸಿಕೊಟ್ಟ ಅಲೆವೂರು ಪದ್ಮನಾಭ ಕೊಡಂಚರ ವಿನಮ್ರ ನುಡಿಯಿದು. ಫೆಬ್ರವರಿ 28 ರಂದು ಎಸ್. ಗೋಪಾಲಕೃಷ್ಣರ ಸ್ಮರಣೆಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಎಂ. ಮೋಹನ್ ಆಳ್ವರು ಪ್ರಶಸ್ತಿ ಪ್ರದಾನ ಮಾಡಿ ಕೊಡಂಚರ ಸರಳತೆ ಮತ್ತು ಕರ್ತವ್ಯ ಶ್ರದ್ಧೆಯನ್ನು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಸನಿವಾಸ ಶಿಬಿರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಉಪಯುಕ್ತ ಸಲಹೆಯನ್ನು ನೀಡಿದರು. ಬಳಕೆದಾರರ ವೇದಿಕೆಯ ವಿಶ್ವಸ್ಥರಾದ ಎನ್. ರಾಮ ಭಟ್ಟರು ಕೊಡಂಚರನ್ನು ಪರಿಚಯಿಸಿ, ಅಭಿನಂದಿಸಿದರು. ಚಂದ್ರಾವತಿ ಪಿ. ಕೊಡಂಚ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಸ್. ಗೋಪಾಲಕೃಷ್ಣರ ಕುಟುಂಬಸ್ಥರು, ಬಳಕೆದಾರರ ವಿಶ್ವಸ್ಥರು, ಕಾರ್ಯಕರ್ತರು, ಸಂಸ್ಥೆಯ ದಾನಿಗಳು, ಈ ಹಿಂದೆ ಈ ಪ್ರಶಸ್ತಿಯನ್ನು ಪಡೆದ ಹಿರಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಎಚ್. ಎನ್. ಶೃಂಗೇಶ್ವರ ಸಹಕರಿಸಿದರು. 27 ವರ್ಷ ಸಂಸ್ಥೆಯ ಕೋಶಾಧಿಕಾರಿಯಾಗಿ ಸೇವೆಸಲ್ಲಿಸಿದ ಎಸ್. ಗೋಪಾಲಕೃಷ್ಣರ ಸರಳತೆ, ಕರ್ತವ್ಯ ನಿಷ್ಠೆ, ಆಸ್ತಿಕತೆ, ಸಮಾಜ ಪ್ರೀತಿಯನ್ನು ಹೇಳುತ್ತಾ ಅವರನ್ನು ಪರಿಚಯಿಸಿ ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮವನ್ನು ನಿರೂಪಿಸಿದರು.