




ಯಕ್ಷಗಾನ, ಶಿಕ್ಷಣ ಮತ್ತು ಸಮಾಜಪರ ಕೆಲಸ ಮಾಡುವ ಅನನ್ಯ ಸಂಸ್ಥೆ ಯಕ್ಷಗಾನ ಕಲಾರಂಗ – ಡಾ. ನಿ. ಬೀ. ವಿಜಯ ಬಲ್ಲಾಳ
ಉಡುಪಿಯ ಯಕ್ಷಗಾನ ಕಲಾರಂಗವು ಯಕ್ಷಗಾನಕ್ಕಾಗಿ ಸ್ಥಾಪನೆಗೊಂಡು ಈಗ ಶಿಕ್ಷಣ, ಕಲಾವಿದರ ಕ್ಷೇಮಚಿಂತನೆ, ಯಕ್ಷಶಿಕ್ಷಣದೊಂದಿಗೆ ಸಾಮಾಜಿಕವಾಗಿ ಕೆಲಸ ಮಾಡುತ್ತಿರುವ ವಿಭಿನ್ನ ಸಂಸ್ಥೆ ಎಂದು ಧರ್ಮದರ್ಶಿ ಡಾ. ನಿ. ಬೀ. ವಿಜಯ ಬಲ್ಲಾಳರು ಹೇಳಿದರು. ಅವರು ಕಲಾರಂಗದ ಐವೈಸಿ ಸಭಾಭವನದಲ್ಲಿ ವಿದ್ಯಾಪೋಷಕ್ನ ವಿದ್ಯಾರ್ಥಿಗಳ ಐದು ದಿನಗಳ ‘ಜೀವನ ವಿದ್ಯಾ’ ಸನಿವಾಸ ಶಿಬಿರವನ್ನು 27.02.2025 ರಂದು ಉದ್ಘಾಟಿಸಿ ಮಾತನಾಡುತ್ತಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ನಗರಸಭಾ ಅಧ್ಯಕ್ಷರಾದ ಪ್ರಭಾಕರ ಪೂಜರಿಯವರು ವಹಿಸಿದ್ದರು. ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ವರಿಷ್ಠ ಡಾ. ಸುಧಾಕರ ಶೆಟ್ಟಿ, ನಿವೃತ್ತ ಪ್ರಾಂಶುಪಾಲ ಶ್ರೀನಿವಾಸ ಪ್ರಭು, ಶಿಬಿರದ ನಿರ್ದೇಶಕ ಗುರುದತ್ ಬಂಟ್ವಾಳಕರ ಅಭ್ಯಾಗತರಾಗಿ ಭಾಗವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಅವರ ನೇತೃತ್ವದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್ ಉಪಸ್ಥಿತರಿದ್ದರು. ಉಪಾಧ್ಯಕ್ಷ ವಿ. ಜಿ. ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಶೋಕ್ ಎಂ. ವಂದಿಸಿದರು. ನಾರಾಯಣ ಎಂ. ಹೆಗಡೆ ನಿರೂಪಿಸಿದ ಕಾರ್ಯಕ್ರಮದಲ್ಲಿ ಎಚ್. ಎನ್. ಶೃಂಗೇಶ್ವರ ಸಹಕರಿಸಿದರು. ಮಂಗಳೂರಿನ ಪ್ರೊಟೊ ಅಪ್ ಸ್ಕಿಲ್ ಇದರ ನಿರ್ದೇಶನದಲ್ಲಿ ನಡೆಯುವ ಐದು ದಿನಗಳ ಸನಿವಾಸ ಶಿಬಿರದ ಪ್ರಯೋಜನವನ್ನು ಪ್ರಥಮ ಪಿಯು ಮುಗಿಸಿದ ವಿದ್ಯಾಪೋಷಕ್ನ 230 ವಿದ್ಯಾರ್ಥಿಗಳು ಪಡೆಯಲಿದ್ದಾರೆ. ಶಿಬಿರಾರ್ಥಿಗಳಲ್ಲಿ ಆತ್ಮಸ್ಥೈರ್ಯ, ಜೀವನ ಕೌಶಲ, ಆಂಗ್ಲಭಾಷ ಪ್ರೌಢಿಮೆ ಬೆಳೆಸಿ, ಅವರಿಗೆ ಸಾಧಕ ವ್ಯಕ್ತಿಗಳ ಪರಿಚಯದೊಂದಿಗೆ ಜೀವನ ಮೌಲ್ಯಗಳನ್ನು ಕಲಿಸಲಾಗುವುದು.