ಉಡುಪಿ : ನವೆಂಬರ್ 30 ರಿಂದ ಡಿಸೆಂಬರ್ 14, 2024ರ ವರೆಗೆ ಉಡುಪಿ ಆಸುಪಾಸಿನ 27 ಪ್ರೌಢಶಾಲೆಗಳ ವಿದ್ಯಾರ್ಥಿಗಳಿಂದ ಪ್ರದರ್ಶನಗೊಳ್ಳಲಿರುವ ಕಿಶೋರ ಯಕ್ಷಗಾನ ಸಂಭ್ರಮ – 2024, 30.11.2024 ರಂದು ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಜ್ಯೋತಿ ಬೆಳಗಿಸಿ, ಉದ್ಘಾಟಿಸಿ, ವಿಶ್ವದಾದ್ಯಂತ ಸಾವಿರಾರು ಮಂದಿ ನಲಿದ, ನರ್ತಿಸಿದ, ಹಾಡಿದ, ಕಲೆಯನ್ನು ಪ್ರದರ್ಶಿಸಿದ ಈ ವೇದಿಕೆಯಲ್ಲಿ ಮಕ್ಕಳು ಕುಣಿದಾಡುವುದು ಕೃಷ್ಣನಿಗೆ ಬಹಳ ಸಂತಸದ ವಿಚಾರ. ಯಕ್ಷಶಿಕ್ಷಣ ಒಂದು ದೇಶಕ್ಕೆ ಮಾದರಿಯಾದಂತಹ ಸಂಸ್ಥೆ. ಈ ಅಭಿಯಾನ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು. ಅಂಬಲಪಾಡಿ ಧರ್ಮದರ್ಶಿಗಳಾದ ಡಾ. ನಿ. ಬೀ. ವಿಜಯ ಬಲ್ಲಾಳ, ಉಡುಪಿ ಮಾಜಿ ಶಾಸಕ ಕೆ. ರಘುಪತಿ ಭಟ್, ಕರ್ನಾಟಕ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ಡಿ.ಡಿ.ಪಿ.ಐ ಕೆ. ಗಣಪತಿ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಯಲ್ಲಮ್ಮ, ಅಮೆರಿಕಾದ ಪಣಂಬೂರು ವಾಸುದೇವ ಐತಾಳ್, ಯು. ವಿಶ್ವನಾಥ ಶೆಣೈ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರ್ವಹಿಸಿದರು. ಯಕ್ಷಶಿಕ್ಷಣ ಟ್ರಸ್ಟ್‍ನ ವಿಶ್ವಸ್ಥರಾದ ನಾರಾಯಣ ಎಂ. ಹೆಗಡೆ ಧನ್ಯವಾದ ಸಮರ್ಪಿಸಿದರು. ಸಮಾರಂಭದ ಬಳಿಕ ವಿದ್ಯೋದಯ ಪಬ್ಲಿಕ್ ಸ್ಕೂಲ್‍ನ ವಿದ್ಯಾರ್ಥಿಗಳಿಂದ ನರಸಿಂಹ ತುಂಗರ ನಿರ್ದೇಶನದಲ್ಲಿ ಶಶಿಪ್ರಭಾ ಪರಿಣಯ ಸೊಗಸಾಗಿ ಪ್ರಸ್ತುತಗೊಂಡಿತು.
ಯಕ್ಷಗಾನ ಜೀವನ ಮೌಲ್ಯ ಕಲಿಸುತ್ತದೆ – ಸುಗುಣೇಂದ್ರತೀರ್ಥ ಶ್ರೀಪಾದರು.
ಉಡುಪಿ : ಕಲೆ ಸಾಹಿತ್ಯದಿಂದ ಜೀವನದಲ್ಲಿ ಲವಲವಿಕೆ ಇರುತ್ತದೆ. ಯಕ್ಷಗಾನ ಪರಿಪೂರ್ಣ ಕಲಾಪ್ರಕಾರ. ಇದು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುತ್ತದೆಯೆಂದು ಪರ್ಯಾಯ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಮ್ಮ ಅನುಗ್ರಹ ಸಂದೇಶದಲ್ಲಿ ನುಡಿದರು. ಅವರು ಯಕ್ಷಶಿಕ್ಷಣ ಟ್ರಸ್ಟ್ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಿದ್ದ 15 ದಿನಗಳ ಕಿಶೋರ ಯಕ್ಷಗಾನ ಸಂಭ್ರಮ ಸಮಾರೋಪದಲ್ಲಿ ಸಾನಿಧ್ಯವಹಿಸಿದ್ದರು. ಕಿರಿಯ ಶ್ರೀಪಾದರಾದ ಶ್ರೀ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಮಕ್ಕಳಿಗೆ ಪುರಾಣ ಕಥೆಗಳನ್ನು ತಿಳಿಯುವುದಕ್ಕೆ ಇದು ಅತ್ಯುತ್ತಮ ಮಾರ್ಗವಾಗಿದೆ ಎಂದರು. ಯಕ್ಷಶಿಕ್ಷಣ ಟ್ರಸ್ಟ್‍ನ ಅಧ್ಯಕ್ಷರೂ, ಉಡುಪಿಯ ಶಾಸಕರೂ ಆದ ಯಶ್‍ಪಾಲ್ ಸುವರ್ಣರು ಅಧ್ಯಕ್ಷತೆವಹಿಸಿದ್ದರು. ಸಮಾರಂಭದಲ್ಲಿ ಶಿಕ್ಷಣ ತಜ್ಞರಾದ ಡಾ. ಅಶೋಕ್ ಕಾಮತ್, ಯಕ್ಷಗಾನದ ಪೋಷಕರಾದ ಶ್ರೀ ಎಂ. ಸಿ. ಕಲ್ಕೂರ, ತೆಂಕುತಿಟ್ಟು ಯಕ್ಷಗಾನವನ್ನು ಮಕ್ಕಳಲ್ಲಿ ಬೆಳೆಸುತ್ತಿರುವ ಶ್ರೀಮತಿ ಗೋಪಿಕಾ ಮಯ್ಯ ಇವರೆಲ್ಲಾ ಔಚಿತ್ಯಪೂರ್ಣ ಮಾತುಗಳನ್ನಾಡಿ ಕಾರ್ಯಕ್ರಮದ ಶೋಭೆ ಹೆಚ್ಚಿಸಿದರು. ವೇದಿಕೆಯಲ್ಲಿ ಯಕ್ಷಶಿಕ್ಷಣದ ಟ್ರಸ್ಟಿಗಳಾದ ಎಸ್. ವಿ. ಭಟ್, ವಿ. ಜಿ. ಶೆಟ್ಟಿ ಉಪಸ್ಥಿತರಿದ್ದರು. ನವೆಂಬರ್ 30 ರಿಂದ ಡಿಸೆಂಬರ್ 14ರ ವರೆಗೆ ನಡೆದ ಈ ಅಭಿಯಾನದಲ್ಲಿ 27 ಪ್ರೌಢಶಾಲೆಗಳ 293 ಹುಡುಗರು, 507 ಹುಡುಗಿಯರು ಒಟ್ಟು 800 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇದರಲ್ಲಿ 228 ಹೊರ ಜಿಲ್ಲೆ, 7 ಹೊರ ರಾಜ್ಯ, 2 ಕ್ರಿಶ್ಚಿಯನ್ ಹಾಗೂ 5 ಮುಸ್ಲಿಂ ವಿದ್ಯಾರ್ಥಿಗಳಿದ್ದರು. ಈ ಸಂದರ್ಭದಲ್ಲಿ ಪಾಲುಗೊಂಡ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳ ಪ್ರಮಾಣ ಪತ್ರ ಹಾಗೂ ಗುಂಪು ಫೋಟೊಗಳನ್ನು ಶಾಲಾ ಮುಖ್ಯೋಪಾಧ್ಯಾಯರಿಗೆ ನೀಡಲಾಯಿತು. ಯಕ್ಷಗಾನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ಜಾಹ್ನವಿ ಶ್ರೀಧರ್ ಪೂಜಾರಿ, ಯಶಸ್ವಿ ನಾಯಕ್ ಹಾಗೂ ಮೇಧಾ ಭಟ್ ತಮ್ಮ ಅನುಭವಗಳನ್ನು ಹಂಚಿಕೊಂಡರು. ಆರಂಭದಲ್ಲಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಯಕ್ಷಶಿಕ್ಷಣ ಟ್ರಸ್ಟ್‍ನ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಎಂ. ಹೆಗಡೆ ಧನ್ಯವಾದ ಸಮರ್ಪಿಸಿದರು. ಕೋಶಾಧಿಕಾರಿ ಎಚ್. ಎನ್. ಶೃಂಗೇಶ್ವರ ಸಹಕರಿಸಿದರು. ಡಿಸೆಂಬರ್ 15 (ನಾಳೆಯಿಂದ) ರಿಂದ ಶಿರ್ವ ಮತ್ತು ಸಾಲಿಗ್ರಾಮದಲ್ಲಿ ಕಿಶೋರ ಯಕ್ಷಗಾನ ಸಂಭ್ರಮ ಆರಂಭಗೊಳ್ಳಲಿದೆ.