ತೆಂಕುತಿಟ್ಟಿನ ಅಗ್ರಮಾನ್ಯ ಭಾಗವತರೂ ಪ್ರಸಂಗಕರ್ತರೂ ಆಗಿದ್ದ ಅಗರಿ ಶ್ರೀನಿವಾಸ ಭಾಗವತರ ನೆನಪಿನಲ್ಲಿ ನೀಡುವ ಅಗರಿಪ್ರಶಸ್ತಿ ಹಾಗು ಅವರ ಸುಪುತ್ರರೂ ಶ್ರೇಷ್ಠ ಭಾಗವತರೂ ಆಗಿದ್ದ ಅಗರಿ ರಘುರಾಮ ಭಾಗವತರ ನೆನಪಿನಲ್ಲಿ ನೀಡುವ ಅಗರಿಸಮ್ಮಾನ ಪ್ರದಾನ ಕಾರ್ಯಕ್ರಮ ಹೊಸಬೆಟ್ಟಿನ ನವಗಿರಿ ಕಲ್ಯಾಣ ಮಂಟಪದಲ್ಲಿ ಜುಲೈ 28ರಂದು ಜರಗಿತು. ಅಗರಿ ಪ್ರಶಸ್ತಿಯನ್ನು ಹಿರಿಯ ಭಾಗವತ ಪುತ್ತಿಗೆ ರಘುರಾಮ ಹೊಳ್ಳರು ಸ್ವೀಕರಿಸಿದರು. ಉಡುಪಿಯ ಯಕ್ಷಗಾನ ಕಲಾರಂಗದ ಸಾಂಸ್ಕೃತಿಕ,ಸಾಮಾಜಿಕ ಚಟುವಟಿಕೆಯನ್ನು ಗುರುತಿಸಿ ನೀಡಲಾದ ಅಗರಿ ಸಮ್ಮಾನವನ್ನು ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವೀಕರಿಸಿದರು.ಕಟೀಲು ಕ್ಷೇತ್ರದ ಹರಿನಾರಾಯಣ ದಾಸ ಅಸ್ರಣ್ಣರು, ಶ್ರೀಪತಿ ಭಟ್,ಅಗರಿ ರಾಘವೇಂದ್ರ ರಾವ್,ಸುಮಂಗಲ ರತ್ನಾಕರ್, ವಾದಿರಾಜ ಕಲ್ಲುರಾಯ,ಕೃಷ್ಣಪ್ರಕಾಶ್ ಉಳಿತ್ತಾಯ ಮುಂತಾದ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ನೆರವೇರಿತು.ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್, ಜತೆ ಕಾರ್ಯದರ್ಶಿಗಳಾದ ನಾರಾಯಣ.ಎಂ.ಹೆಗಡೆ,ಎಚ್.ಎನ್. ಶೃಂಗೇಶ್ವರ ಉಪಸ್ಥಿತರಿದ್ದರು.