ಪಾರಂಪರಿಕ ಯಕ್ಷಗಾನವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ, ಪ್ರೌಢಶಾಲೆಗಳಲ್ಲಿ ಯಕ್ಷಗಾನ ಕಲಿಸುತ್ತಿರುವ ಯಕ್ಷಶಿಕ್ಷಣ ಟೆಸ್ಟ್ ಗೆ ಅಭಿನಂದನೆಗಳು.ಓರ್ವ ವೃತ್ತಿ ಕಲಾವಿದನಾಗಿ ನನಗೆ ತುಂಬಾ ಸಂತೋಷವನ್ನು ಕೊಟ್ಟ ಯೋಜನೆಯಿದು.ಯಶಸ್ವಿಯಾಗಲೆಂದು ಖ್ಯಾತ ಯಕ್ಷಗಾನ ಕಲಾವಿದ ಕೋಟ ಸುರೇಶ್ ರವರು ಜುಲೈ 27 ರಂದು ವಿವೇಕ ವಿದ್ಯಾ ಸಂಸ್ಥೆಗಳ ಯಕ್ಷಶಿಕ್ಷಣವನ್ನು ಉದ್ಘಾಟಿಸಿ ನುಡಿದರು.ಈ ಬಾರಿ ಕುಂದಾಪುರ ವಿಧಾನಸಭಾ ವ್ಯಾಪ್ತಿಯ 24 ಪ್ರೌಢಶಾಲೆಗಳಲ್ಲಿ ಯಕ್ಷಶಿಕ್ಷಣ ಆರಂಭಗೊಂಡಿದ್ದು,ಇದಕ್ಕೆ ಕಾರಣೀಕರ್ತರಾದ ಶಾಸಕ ಕಿರಣ್ ಕುಮಾರ್ ಕೊಡ್ಗಿಯವರು ಅಭಿನಂದನೀಯರು. ರಾಜ್ಯಕ್ಕೆ ಮಾದರಿಯಾದ ವಿವೇಕ ವಿದ್ಯಾಸಂಸ್ಥೆಯ ಆವರಣದಲ್ಲಿ ಹುಡುಗರ ಮತ್ತು ಹುಡುಗಿಯರ ಎರಡು ತಂಡಗಳಿಗೆ ಯಕ್ಷಶಿಕ್ಷಣ ನೀಡುತ್ತಿರುವುದು ಟ್ರಸ್ಟಿಗೆ ಅಭಿಮಾನದ ವಿಚಾರವಾಗಿದೆ,ಎಂಬುದಾಗಿ ಯಕ್ಷಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಮುರಲಿ ಕಡೆಕಾರ್ ಈ ಸಂದರ್ಭದಲ್ಲಿ ಸಂತಸ ವ್ಯಕ್ತಪಡಿಸಿದರು.ಈ ಎರಡೂ ಪ್ರೌಢಶಾಲೆಗಳಿಗೆ ಗುರುಗಳಾಗಿ ಕಾರ್ಯ ನಿರ್ವಹಿಸುವ ನರಸಿಂಹ ತುಂಗರು ಮಾತನಾಡುತ್ತಾ,ತಾನು ವಿದ್ಯಾರ್ಜನೆಗೈದ ಶಾಲೆಯಲ್ಲಿ ಯಕ್ಷಗಾನ ಕಲಿಸಲು ಅವಕಾಶ ದೊರೆತಿರುವುದು ತನಗೆ ಸಂತಸದ ವಿಚಾರವೆಂದು ನುಡಿದರು. ವಿವೇಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಗದೀಶ ನಾವುಡರು ಸ್ವಾಗತಿಸಿದರು.ಬಾಲಕಿಯರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಗದೀಶ ಹೊಳ್ಳರು ಧನ್ಯವಾದ ಸಲ್ಲಿಸಿದರು.ಉಪಪ್ರಾಂಶುಪಾಲರಾದ ವೆಂಕಟೇಶ ಉಡುಪ, ಯಕ್ಷಗಾನ ಉಸ್ತುವಾರಿ ಶಿಕ್ಷಕರಾದ ಮಹಾಲಕ್ಷ್ಮಿ ಸೋಮಯಾಜಿ ಹಾಗೂ ಬಾಲಕೃಷ್ಣ ನಕ್ಷತ್ರಿ ಉಪಸ್ಥಿತರಿದ್ದರು. ಶಿಕ್ಷಕರಾದ ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮ ನಿರ್ವಹಿಸಿದರು.