ನಮ್ಮ ಮೂರನೇ ಪರ್ಯಾಯದಲ್ಲಿ ಆರಂಭಗೊಂಡ ಯಕ್ಷಶಿಕ್ಷಣ ಅಭಿಯಾನ, ಕಳೆದ 16 ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಯುತ್ತಾ, ಪ್ರಕೃತ ನಾಲ್ಕು ವಿಧಾನಸಭಾ ಕ್ಷೇತ್ರಗಳ 92 ಪ್ರೌಢಶಾಲೆಗಳಿಗೆ ವಿಸ್ತರಣೆಗೊಂಡಿರುವುದು ಅತ್ಯಂತ ಸ್ತುತ್ಯರ್ಹ. ಯಕ್ಷಗಾನದಿಂದ ವ್ಯಕ್ತಿಯ ಪರಿಪೂರ್ಣ ವಿಕಸನ ಸಾಧ್ಯ. ಅಂತಹ ಅಪೂರ್ವ ಕಲೆಯನ್ನು ಪ್ರೌಢ ವಿದ್ಯಾರ್ಥಿಗಳಿಗೆ ಕಲಿಸುವುದು ಅತ್ಯಂತ ಪ್ರಶಂಸನೀಯ ಕಾರ್ಯ ಎಂದು ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಯಕ್ಷಶಿಕ್ಷಣ-2024ರ ಅಭಿಯಾನವನ್ನು 11.07.2024ರಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಉದ್ಘಾಟಿಸುತ್ತಾ ನುಡಿದರು. ಉಡುಪಿ ಶಾಸಕರೂ, ಯಕ್ಷಶಿಕ್ಷಣ ಅಧ್ಯಕ್ಷರೂ ಆದ ಯಶ್‍ಪಾಲ್ ಎ. ಸುವರ್ಣರ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭದಲ್ಲಿ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಕುಂದಾಪುರ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಮಾಜಿ ಶಾಸಕರೂ, ಟ್ರಸ್ಟ್ ನ ಸ್ಥಾಪಕಾಧ್ಯಕ್ಷರೂ ಆದ ಕೆ. ರಘುಪತಿ ಭಟ್, ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ. ಬೀ. ವಿಜಯ ಬಲ್ಲಾಳ್, ಉಡುಪಿ ಬಿಇಒ ಡಾ. ಯಲ್ಲಮ್ಮ, ಬ್ರಹ್ಮಾವರ ಬಿಇಒ ಶಬನಾ ಅಂಜುಮ್, ಕುಂದಾಪುರ ಬಿಇಒ ಶೋಭಾ ಶೆಟ್ಟಿ ಅಭ್ಯಾಗತರಾಗಿ ಪಾಲ್ಗೊಂಡಿದ್ದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ತನ್ನ ಪ್ರಸ್ತಾವನೆಯಲ್ಲಿ, ವರದಿ ವರ್ಷದಲ್ಲಿ 92 ಶಾಲೆಗಳಲ್ಲಿ 39 ಗುರುಗಳು ಶಿಕ್ಷಣ ನೀಡುತ್ತಿದ್ದು, ಡಿಸೆಂಬರ್ ಅಂತ್ಯದ ಒಳಗೆ ಪ್ರದರ್ಶನಗಳು ನಡೆಯಲಿವೆ . ಕಳೆದ ವರ್ಷ ಯಕ್ಷಶಿಕ್ಷಣದಲ್ಲಿ ಹತ್ತನೇ ತರಗತಿಯ 332 ವಿದ್ಯಾರ್ಥಿಗಳು ಭಾಗವಹಿಸಿದ್ದು, ಹೆಚ್ಚಿನ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವುದು, ಯಕ್ಷಗಾನವು ಕಲಿಕೆಗೆ ಮಾರಕವಲ್ಲ, ಪೂರಕವೆಂದು ನುಡಿದರು. ಆರಂಭದಲ್ಲಿ ವಿದ್ಯೋದಯ ಪಬ್ಲಿಕ್ ಸ್ಕೂಲ್‍ನ ವಿದ್ಯಾರ್ಥಿಗಳಿಂದ ನರಸಿಂಹ ತುಂಗರ ನಿರ್ದೇಶನದಲ್ಲಿ, ವಿವಿಧ ತಾಳಗಳ ನೃತ್ಯ ಪ್ರದರ್ಶನಗೊಂಡಿತು. ಯಕ್ಷಗಾನ ಕಲಿಸುವ ಶಾಲೆಗಳ ಮುಖ್ಯಶಿಕ್ಷಕರು ಹಾಗೂ ಗುರುಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಕೋಶಾಧಿಕಾರಿ ಎಚ್.ಎನ್. ಶೃಂಗೇಶ್ವರ ಧನ್ಯವಾದ ಸಲ್ಲಿಸಿದರು.