ಸಂಸ್ಥೆ 2012ರಿಂದ ವಿದ್ಯಾಪೋಷಕ್ ವಿದ್ಯಾರ್ಥಿಗಳು ಮತ್ತು ಯಕ್ಷಗಾನ ಕಲಾವಿದರಿಗೆ ಮನೆ ನಿರ್ಮಿಸಿ ಕೊಡುತ್ತಾ ಬಂದಿದ್ದು, ಕಾರ್ಕಳದ ಕೆರ್ವಾಶೆಯಲ್ಲಿ ವಿದ್ಯಾಪೋಷಕ್ ವಿದ್ಯಾರ್ಥಿನಿ ಸಾಕ್ಷಿ ಶೆಟ್ಟಿ ಇವಳಿಗೆ ಉಡುಪಿಯ ರಾಮಚಂದ್ರ ವಿ. ನಾಯಕ್ ಪ್ರಾಯೋಜಕತ್ವದಲ್ಲಿ ನಿರ್ಮಿಸಿದ ‘ಶ್ರೀರಾಮಚಂದ್ರ ನಿಲಯ’ ಮನೆಯನ್ನು, 22.01.2024 ರಂದು ಉದ್ಘಾಟಿಸಲಾಯಿತು. ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಪ್ರಾಣಪ್ರತಿಷ್ಠೆ ನಡೆಯುತ್ತಿರುವ ಪವಿತ್ರ ದಿನದಂದು ಸಂಸ್ಥೆ ನಿರ್ಮಿಸಿದ ಈ ಮನೆಯನ್ನು ಕಾರ್ಕಳದ ಶಾಸಕ ಸುನಿಲ್ ಕುಮಾರ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿ, ಈ ಪರ್ವ ಕಾಲದಲ್ಲಿ ಮನೆ ಹಸ್ತಾಂತರಿಸಿದ ಮನೆಯ ಪ್ರಾಯೋಜಕರು, ಯಕ್ಷಗಾನ ಕಲಾರಂಗದ ಅಧ್ಯಕ್ಷರು ಮತ್ತು ಎಲ್ಲಾ ಪದಾಧಿಕಾರಿಗಳು ಅಭಿನಂದನಾರ್ಹರು. ದೇಶದ ಎಲ್ಲಾ ಕಡೆ ಇಂತಹ ಪ್ರಯತ್ನ ನಡೆದಾಗ ರಾಮರಾಜ್ಯದ ಕನಸು ನನಸಾಗುತ್ತದೆ ಎಂದು ಅಭಿಪ್ರಾಯಪಟ್ಟರು. ನಿವೃತ್ತ ಬ್ಯಾಂಕ್ ಅಧಿಕಾರಿ ಶ್ರೀಮತಿ ವೈಜಯಂತಿ ಕಾಮತ್ ಅಭ್ಯಾಗತರಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಹಿರಿಯರಾದ ಯು. ವಿಶ್ವನಾಥ ಶೆಣೈ, ಸಂಸ್ಥೆಯ ಉಪಾಧ್ಯಕ್ಷರುಗಳಾದ ಎಸ್. ವಿ. ಭಟ್, ಪಿ. ಕಿಶನ್ ಹೆಗ್ಡೆ, ವಿ. ಜಿ. ಶೆಟ್ಟಿ, ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುನೀತಾ, ಉಪಾಧ್ಯಕ್ಷರಾದ ಸುನಿಲ್ ಶೆಟ್ಟಿ, ಸಂಸ್ಥೆಯ ಸದಸ್ಯರಾದ ಅನಂತರಾಜ ಉಪಾಧ್ಯ, ಕೆ. ಅಜಿತ್ ಕುಮಾರ್, ಕಿಶೋರ್ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಎಚ್. ಎನ್. ಶೃಂಗೇಶ್ವರ ಸಹಕರಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಇನ್ನೂ 10 ಮನೆಗಳು ನಿರ್ಮಾಣಹಂತದಲ್ಲಿದ್ದು ಇನ್ನೆರಡು ತಿಂಗಳಲ್ಲಿ ಹಸ್ತಾಂತರಗೊಳ್ಳಲಿವೆ.