ಕುಂದಾಪುರದ ಸರಕಾರಿ ಪದವಿಪೂರ್ವ ಕಾಲೇಜು ವಠಾರದಲ್ಲಿ ಜರಗಿದ ಯಕ್ಷಶಿಕ್ಷಣ ಟ್ರಸ್ಟ್ ನ ಕುಂದಾಪುರ ಪರಿಸರದ ಐದು ಶಾಲೆಗಳ ಆರು ಪ್ರದರ್ಶನ 05.01.2024ರಂದು ಸಮಾಪನಗೊಂಡಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಶಾಸಕರಾದ ಶ್ರೀ ಕಿರಣ್ ಕುಮಾರ್ ಕೊಡ್ಗಿಯವರು ಈ ಮಹಾ ಅಭಿಯಾನ ಎಲ್ಲರ ಸಹಕಾರದಿಂದ ಸಾಧ್ಯವಾಗಿದೆ. ಮುಂದೆಯೂ ನಾವೆಲ್ಲ ಒಟ್ಟಾಗಿ ನಮ್ಮ ಮಣ್ಣಿನ ಈ ಶ್ರೀಮಂತ ಕಲೆಯನ್ನು ಉಳಿಸಿ ಬೆಳೆಸೋಣ ಎಂದು ಹೇಳಿದರು. ಕುಂದಾಪುರದ ಸಹಾಯಕ ಆಯುಕ್ತರಾದ ಶ್ರೀಮತಿ ರಶ್ಮಿ, ಬಿ. ಎಸ್. ಪ್ರಮಾಣಪತ್ರ ವಿತರಿಸಿ ಮಾತನಾಡುತ್ತಾ ಯಕ್ಷಗಾನ, ಭರತ ನಾಟ್ಯಶಾಸ್ತ್ರದಲ್ಲಿ ಹೇಳಿರುವ ಆಂಗಿಕ, ಆಹಾರ್ಯ, ವಾಚಿಕ, ಸಾತ್ವಿಕ ಈ ನಾಲ್ಕೂ ಅಂಶ ಒಳಗೊಂಡಿರುವ ಪರಿಪೂರ್ಣ ಕಲಾಪ್ರಕಾರ ಎಂದು ಅಭಿಪ್ರಾಯ ಪಟ್ಟರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಉಪ ಪ್ರಾಂಶುಪಾಲ ಕಿರಣ್ ಹೆಗ್ಡೆ, ಕುಂದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಯು, ಸಿ.ಎ. ಬ್ಯಾಂಕ್ ಅಧ್ಯಕ್ಷ ಸದಾನಂದ ಬಳ್ಕೂರು ಅಭ್ಯಾಗತರಾಗಿ ಭಾಗವಹಿಸಿದ್ದರು. ಪೆರ್ಡೂರು ಮೇಳದ ಸಂಚಾಲಕ ಕರುಣಾಕರ ಶೆಟ್ಟಿ, ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ಎಸ್. ವಿ. ಭಟ್ ಹಾಗು ಕೋಶಾಧಿಕಾರಿ ಪ್ರೊ. ಸದಾಶಿವ ರಾವ್ ಉಪಸ್ಥಿತರಿದ್ದರು. ಯಕ್ಷಗಾನದಲ್ಲಿ ಪಾತ್ರ ನಿರ್ವಹಿಸಿದ ಸುಪ್ರಿತಾ, ಪೂರ್ವಿ, ಸಾನ್ವಿಕಾ ಮತ್ತು ಪೃಥ್ವಿರಾಜ್ ತಮ್ಮ ಯಕ್ಷಶಿಕ್ಷಣದ ಅನುಭವಗಳನ್ನು ಹಂಚಿಕೊಂಡರು. ಹೆಸ್ಕುತ್ತೂರು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಅಬ್ದುಲ್ ರವೂಫ್ ಮಾತನಾಡಿ ಯಕ್ಷಶಿಕ್ಷಣವು ವಿದ್ಯಾರ್ಥಿಗಳ ಮೇಲೆ ಉಂಟುಮಾಡಿದ ಪರಿಣಾಮವನ್ನು ವಿವರಿಸಿದರು.
ಪ್ರದರ್ಶನ ಸಂಘಟನಾ ಸಮಿತಿಯ ಕಾರ್ಯದರ್ಶಿ ಶಂಕರ್ ಅಂಕದಕಟ್ಟೆ ಸ್ವಾಗತಿಸಿದರು. ನವೆಂಬರ್ 29, 2023ರಿಂದ ಆರಂಭಗೊಂಡ ಕಿಶೋರ ಯಕ್ಷಗಾನ ಸಂಭ್ರಮದ ಈ ಮಹಾಭಿಯಾನವು ಉಡುಪಿ, ಕಾಪು ಹಾಗೂ ಕುಂದಾಪುರದ 69 ಶಾಲೆಗಳ 70 ಪ್ರದರ್ಶನಗಳೊಂದಿಗೆ ಮುಕ್ತಾಯಗೊಂಡಿತು. ಇದರಲ್ಲಿ ಒಟ್ಟು 2154 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, 2/3 ಭಾಗ ಹುಡುಗಿಯರಾಗಿದ್ದು,13 ಮುಸ್ಲಿಂ,12 ಕ್ರಿಶ್ಚಿಯನ್,409 ಹೊರಜಿಲ್ಲೆ 3 ಹೊರರಾಜ್ಯದ ಹಾಗೂ ಓರ್ವ ಹೊರ ದೇಶದ ವಿದ್ಯಾರ್ಥಿ ಭಾಗವಹಿಸಿದ್ದು ವಿಶೇಷವಾಗಿದೆ. ಎಚ್. ಎನ್. ಶೃಂಗೇಶ್ವರ ಮತ್ತು ನಾಗರಾಜ ಹೆಗಡೆ, ಗಣೇಶ್ ಬ್ರಹ್ಮಾವರ ಸಹಕರಿಸಿದರು. ಈ ಅಭಿಯಾನ ಯಶಸ್ವಿಯಾಗುವಲ್ಲಿ ವಿಶೇಷ ಆಸ್ಥೆ ತೋರಿದ ಉಡುಪಿ, ಕಾಪು, ಕುಂದಾಪುರ ಕ್ಷೇತ್ರದ ಶಾಸಕತ್ರಯರಿಗೆ ಹೃದಯಪೂರ್ವಕವಾದ ಧನ್ಯತೆಯನ್ನು ಟ್ರಸ್ಟ್ ನ ಕಾರ್ಯದರ್ಶಿ ಮುರಲಿ ಕಡೆಕಾರ್ ಸಮರ್ಪಿಸಿ, ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದ ಪೂರ್ವದಲ್ಲಿ ಸರಕಾರಿ ಪ್ರೌಢಶಾಲೆ, ಹೆಸ್ಕುತ್ತೂರಿನ ವಿದ್ಯಾರ್ಥಿಗಳಿಂದ, ಮಂಜುನಾಥ ಕುಲಾಲ್ ಇವರ ನಿರ್ದೇಶನದಲ್ಲಿ ಮೇಧಾವಿ ಕಾಳಗ ಹಾಗೂ ಸಭೆಯ ಬಳಿಕ ಕೋಟೇಶ್ವರ ಮೊರಾರ್ಜಿ ದೇಸಾಯಿ ವಸತಿಶಾಲೆಯ ವಿದ್ಯಾರ್ಥಿಗಳಿಂದ, ನರಸಿಂಹ ತುಂಗ ಇವರ ನಿರ್ದೇಶನದಲ್ಲಿ ದ್ರೌಪದಿ ಪ್ರತಾಪ ಯಕ್ಷಗಾನ ಪ್ರದರ್ಶನಗೊಂಡವು.