ಇಂದು (06.11.2023) ಕಾರ್ಕಳ ತಾ. ಹೊಸ್ಮಾರ್ ನೂರಳ್‍ಬೆಟ್ಟುವಿನಲ್ಲಿ ಯಕ್ಷಗಾನ ಕಲಾರಂಗ ನಿರ್ಮಿಸುವ 50ನೇ ಮನೆಗೆ ಶಿಲಾನ್ಯಾಸ ನೆರವೇರಿಸಲಾಯಿತು. ಉಡುಪಿ ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ದಕ್ಷಿಣ ತುದಿಯಲ್ಲಿರುವ, ಅತ್ಯಂತ ಶಿಥಿಲವಾಗಿರುವ ಮನೆಯಲ್ಲಿ ವಾಸಿಸುತ್ತಿರುವ, ಪ್ರಥಮ ಪಿಯುಸಿಯ ಪ್ರತಿಭಾವಂತ ವಿದ್ಯಾಪೋಷಕ್ ವಿದ್ಯಾರ್ಥಿನಿ ಚೈತ್ರಾ (ಎಸ್.ಎಸ್.ಎಲ್.ಸಿ 95%) ಇವಳಿಗೆ ತಮ್ಮ ವೈವಾಹಿಕ ಜೀವನದ 50ನೇ ವರ್ಷದ ಶುಭಾವಸರದಲ್ಲಿ ಮನೆಯನ್ನು ಕಟ್ಟಿಕೊಡುವ ಮೂಲಕ ಸಮಾಜಮುಖಿಯಾಗಿ ಆಚರಿಸಲು ಸಂಕಲ್ಪಿಸಿದ ನಿವೃತ್ತ ಶಿಕ್ಷಕ, ಈ ಬಾರಿ ಸಂಸ್ಥೆಯಿಂದ ಸೇವಾಭೂಷಣ ಪ್ರಶಸ್ತಿ ಪುರಸ್ಕೃತರಾದ ಶ್ರೀ ಯು. ಎಸ್. ರಾಜಗೋಪಾಲ ಆಚಾರ್ಯ ಇವರು ಶಿಲಾನ್ಯಾಸಗೈದರು. ಪ್ರತಿಭಾವಂತ ವಿದ್ಯಾರ್ಥಿನಿಯ ಮನೆ ನಿರ್ಮಾಣದ ಪ್ರಯೋಜಕತ್ವಕ್ಕೆ ಅವಕಾಶ ಕಲ್ಪಿಸಿದ ಸಂಸ್ಥೆಗೆ ನಾವು ಕೃತಜ್ಞರಾಗಿದ್ದೇವೆ. ಮನೆ ಶೀಘ್ರ ನಿರ್ಮಾಣವಾಗಲೆಂದು ಆಚಾರ್ಯರು ಶುಭ ಹಾರೈಸಿದರು. ಸುಮಾರು 7 ಲಕ್ಷ ರೂಪಾಯಿ ವೆಚ್ಚದ ಮನೆಯ ಮುಹೂರ್ತದ ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಪ್ರಾಸ್ತಾವಿಕ ನುಡಿಗಳೊಂದಿಗೆ ಆಚಾರ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್, ಉಪಾಧ್ಯಕ್ಷರುಗಳಾದ ಪಿ. ಕಿಶನ್ ಹೆಗ್ಡೆ, ವಿ. ಜಿ. ಶೆಟ್ಟಿ, ಜತೆ ಕಾರ್ಯದಶಿಗಳಾದ ನಾರಾಯಣ ಎಂ. ಹೆಗಡೆ, ಎಚ್. ಎನ್. ಶೃಂಗೇಶ್ವರ, ಸದಸ್ಯರಾದ ವಿಜಯ ಕುಮಾರ್ ಮುದ್ರಾಡಿ,ಅನಂತರಾಜ ಉಪಾಧ್ಯ, ವಿದ್ಯಾಪ್ರಸಾದ್ ಉಪಸ್ಥಿತರಿದ್ದರು.