ಕುಂದಾಪುರ ಹೆಮ್ಮಾಡಿಯ ವಿದ್ಯಾಪೋಷಕ್ ವಿದ್ಯಾರ್ಥಿನಿ ಸಿಂಚನಾಳ (ಪ್ರಥಮ ಪಿಯುಸಿ) ಮನೆ ತೀರಾ ಜೀರ್ಣಾವಸ್ಥೆಯಲ್ಲಿದ್ದ ಹಿನ್ನಲೆಯಲ್ಲಿ ನೂತನ ಮನೆ ನಿರ್ಮಿಸಲಾಗುತ್ತಿದ್ದು, ಇಂದು (30.10.2023) ಬೈಂದೂರು ಶಾಸಕರಾದ ಗುರುರಾಜ ಶೆಟ್ಟಿ ಗಂಟಿಹೊಳೆ ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಯಕ್ಷಗಾನ ಕಲಾರಂಗ ನಂಬಿಕಸ್ಥ ಸಂಸ್ಥೆಯಾಗಿದ್ದು, ನನ್ನ ಕ್ಷೇತ್ರದಲ್ಲಿ ನಿರ್ಮಾಣಗೊಳ್ಳಲಿರುವ 4 ಮನೆಗಳ ವೆಚ್ಚವನ್ನು ದಾನಿಗಳ ನೆರವಿನಿಂದ ನೀಡಲು ಬದ್ಧನಾಗಿದ್ದೇನೆ. ತನ್ನ ಕ್ಷೇತ್ರದ ಒಟ್ಟು ಸಾಮಾಜಿಕ ಚಟುವಟಿಕೆಗಳ ಕೆಲಸಗಳಿಗೆ ಕಲಾರಂಗದ ತಂಡದ ನೆರವು ಅಗತ್ಯ. ಒಟ್ಟಾಗಿ ನೊಂದವರ ಬಾಳಿಗೆ ಬೆಳಕು ನೀಡಲು ಪ್ರಯತ್ನಿಸೋಣ ಎಂದು ನುಡಿದರು. ಹಿರಿಯ ಸಾಮಾಜಿಕ ಧುರೀಣರಾದ ಕೃಷ್ಣಪ್ರಸಾದ್ ಅಡ್ಯಂತಾಯರು ಹಾಗೂ ಶಿಕ್ಷಣ ತಜ್ಞರಾದ ಯು. ಎಸ್. ರಾಜಗೋಪಾಲ ಆಚಾರ್ಯ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರ್ವಹಿಸಿದರು. ಉಪಾಧ್ಯಕ್ಷರುಗಳಾದ ಎಸ್. ವಿ. ಭಟ್, ವಿ. ಜಿ. ಶೆಟ್ಟಿ, ಕೋಶಾಧಿಕಾರಿ ಕೆ. ಸದಾಶಿವ ರಾವ್, ಜತೆಕಾರ್ಯದರ್ಶಿ ಎಚ್. ಎನ್. ಶೃಂಗೇಶ್ವರ, ಸದಸ್ಯರಾದ ಅನಂತರಾಜ ಉಪಾಧ್ಯ, ಪ್ರಸಾದ್ ರಾವ್ ಉಪಸ್ಥಿತರಿದ್ದರು. ಈಗಾಗಲೇ ಸಂಸ್ಥೆ ಕಲಾವಿದರು ಮತ್ತು ವಿದ್ಯಾರ್ಥಿಗಳಿಗೆ 44 ಮನೆಗಳನ್ನು ನಿರ್ಮಿಸಿದ್ದು, 10 ಮನೆಗಳು ನಿರ್ಮಾಣದ ಹಂತದಲ್ಲಿವೆ.