Yakshagana Kalaranga

ವಿದ್ಯಾಪೋಷಕ್ ವಿದ್ಯಾರ್ಥಿನಿಗೆ ಮನೆ ಹಸ್ತಾಂತರ

ಯಕ್ಷಗಾನ ಕಲಾರಂಗದ ಅಂಗಸಂಸ್ಥೆ ವಿದ್ಯಾಪೋಷಕ ವಿದ್ಯಾರ್ಥಿನಿ, ದ್ವಿತೀಯ ಪಿ.ಯು.ಸಿ.ಯಲ್ಲಿ ಓದುತ್ತಿರುವ ರಂಗನಕೆರೆಯ ಜಯಂತಿ ಕೃಷ್ಣ ಬಂಗೇರ ಸುಪುತ್ರಿ ನಿಶ್ಮಿತಾಳಿಗೆ ನಿರ್ಮಿಸಿದ ನೂತನ ಮನೆ ‘ಸಾವಿತ್ರಿ ರಾಮಚಂದ್ರ ಸದನ’ ಇದರ ಉದ್ಘಾಟನೆಯನ್ನು ಮನೆಯ ಪ್ರಾಯೋಜಕರಾದ ಡಾ. ಎಂ. ಆರ್ ಹೆಗಡೆ ಮತ್ತು ಕಮಲಾ ಹೆಗಡೆ ದಂಪತಿಗಳು ಇಂದು (28.08.2023) ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಅವರ ಮಾತಾಪಿತರಾದ ಸಾವಿತ್ರಿ ಆರ್ ಹೆಗಡೆ ಮತ್ತು ರಾಮಚಂದ್ರ ಹೆಗಡೆ ನೆನಪಿನಲ್ಲಿ ನಿರ್ಮಿಸಿದ ಮನೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಪೇಜಾವರ ಶ್ರೀಗಳ ಮಾತಿನಿಂದ ಪ್ರೇರಣೆಗೊಂಡು, ಸಮಾಜದ ಋಣವನ್ನು ನನ್ನ ಮಿತಿಯಲ್ಲಿ ತೀರಿಸುವ ಅವಕಾಶವನ್ನು ಕಲಾರಂಗ ನೀಡಿದೆ. ಕೇವಲ ಆರು ಲಕ್ಷ ರೂಪಾಯಿ ವೆಚ್ಚದಲ್ಲಿ ಸುಂದರವಾದ ಮನೆ ನಿರ್ಮಾಣಮಾಡಿರುವುದು ಕಲಾರಂಗದ ಪ್ರಾಮಾಣಿಕತೆಗೆ ದ್ಯೋತಕವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕಲಾರಂಗದ ಕಾರ್ಯತತ್ಪರತೆ ಉಳಿದ ಸಂಘಟನೆಗಳಿಗೆ ಮಾದರಿ ಎಂದು ಕುಂದಾಪುರ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿಯವರು ಮೆಚ್ಚುಗೆ ವ್ಯಕ್ತಪಡಿಸಿ, ಎಂ.ಆರ್.ಹೆಗಡೆಯವರನ್ನು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಎಂ.ಆರ್.ಹೆಗಡೆಯವರ ಪುತ್ರಿ ಡಾ.ಸ್ಮಿತಾ ಹಾಗೂ ಅಳಿಯ ಡಾ.ಪ್ರಶಾಂತ್ ಭಟ್ ಉಪಸ್ಥಿತರಿದ್ದರು. ಅಭ್ಯಾಗತರಾಗಿ ಶ್ರೀನಿವಾಸ ಶೆಟ್ಟಿಗಾರ್, ಗೋಪಿನಾಥ ಕಾಮತ್,ಯು. ವಿಶ್ವನಾಥ್ ಶೆಣೈ, ಯು.ಎಸ್. ರಾಜಗೋಪಾಲಾಚಾರ್ಯ, ರಾಮಚಂದ್ರ ಅಡಿಗ,ಮಲ್ಲಿಕಾರ್ಜುನ ಸ್ವಾಮಿ ಭಾಗವಹಿಸಿದ್ದರು. ನಿಶ್ಮಿತಾ ಮತ್ತು ತಾಯಿ ಜಯಂತಿ ಬಂಗೇರ ಆನಂದಭಾಷ್ಪದೊಂದಿಗೆ ಕೃತಜ್ಞತೆಯ ನುಡಿಗಳನ್ನಾಡಿದರು.
ಸಂಸ್ಥೆಯ ಉಪಾಧ್ಯಕ್ಷರಾದ ಎಸ್. ವಿ.ಭಟ್,ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್, ಸದಸ್ಯರಾದ ಬಿ.ಭುವನಪ್ರಸಾದ್ ಹೆಗ್ಡೆ,ಅನಂತರಾಜ ಉಪಾಧ್ಯ, ಡಾ.ರಾಜೇಶ್ ನಾವುಡ,ಗಣೇಶ್ ಬ್ರಹ್ಮಾವರ, ನಾಗರಾಜ ಹೆಗಡೆ ಉಪಸ್ಥಿತರಿದ್ದರು. ಕಟ್ಟಡ ಕಾಮಗಾರಿಯನ್ನು ಶ್ರದ್ಧೆಯಿಂದ ನಿರ್ವಹಿಸಿದ ಲೋಕೇಶ್ ನಾಯಕ್ ಇವರನ್ನು ಗೌರವಿಸಲಾಯಿತು.ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಹೆಚ್. ಎನ್. ಶೃಂಗೇಶ್ವರ ಸಹಕರಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಇದು ಸಂಸ್ಥೆ ದಾನಿಗಳ ನೆರವಿನಿಂದ ನಿರ್ಮಿಸಿದ 44ನೆಯ ಮನೆಯಾಗಿದೆ.

We're currently hard at work gathering information and crafting content to bring you the best experience. Stay tuned for exciting updates!