Yakshagana Kalaranga

ಯಕ್ಷಶಿಕ್ಷಣ ಗುರುಗಳ ಸಮಾವೇಶ.

2007ರಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಪ್ರೌಢಶಾಲೆಗಳಲ್ಲಿ ಯಕ್ಷಗಾನವನ್ನು ಕಲಿಸುವ ಉದ್ದೇಶದಿಂದ ಹುಟ್ಟಿಕೊಂಡ ಯಕ್ಷಶಿಕ್ಷಣ ಟ್ರಸ್ಟ್ ಪ್ರತೀ ವರ್ಷ 40ಕ್ಕೂ ಮೇಲ್ಪಟ್ಟು ಶಾಲೆಗಳಲ್ಲಿ ಯಕ್ಷಗಾನವನ್ನು ಕಲಿಸಿ ಪ್ರದರ್ಶನದ ವ್ಯವಸ್ಥೆಯನ್ನು ಮಾಡುತ್ತಾ ಬಂದಿದೆ. ಈ ಬಾರಿ ಸನಿಹದ ಕಾಪು ಮತ್ತು ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೂ ಯಕ್ಷಶಿಕ್ಷಣ ಅಭಿಯಾನ ವಿಸ್ತರಣೆಗೊಂಡಿದೆ. ಉಡುಪಿ, ಕಾಪು ಮತ್ತು ಕುಂದಾಪುರ ಕ್ಷೇತ್ರಗಳಲ್ಲಿ ಕ್ರಮವಾಗಿ 43, 15 ಮತ್ತು 11 ಹೀಗೆ ಒಟ್ಟೂ 69 ಪ್ರೌಢಶಾಲೆಗಳಲ್ಲಿ 31 ಗುರುಗಳು ಯಕ್ಷಶಿಕ್ಷಣವನ್ನು ನೀಡುತ್ತಿದ್ದಾರೆ. ಆಗಸ್ಟ್ 16, 2023ರಂದು ಈ ಎಲ್ಲಾ ಗುರುಗಳ ಸಮಾವೇಶ ಪೇಜಾವರ ಮಠದ ಶ್ರೀ ರಾಮ ವಿಠಲ ಸಭಾಭವನದಲ್ಲಿ ಜರಗಿತು. ಇದರ ಸ್ಥಾಪಕ ಅಧ್ಯಕ್ಷರೂ, ಮಾಜಿ ಶಾಸಕರೂ ಆದ ಕೆ. ರಘುಪತಿ ಭಟ್ ಈ ಸಂದರ್ಭದಲ್ಲಿ ಮಾತನಾಡಿ ನನಗೆ ಇದು ಧನ್ಯತೆಯ ಕ್ಷಣ. ಈ ಒಂದು ಕಲಾ-ಶೈಕ್ಷಣಿಕ ಅಭಿಯಾನಕ್ಕೆ ಉಡುಪಿಯ ಸನಿಹದ ಶಾಸಕರು ಆಸಕ್ತಿ ವಹಿಸಿದ್ದು, ಮೆಚ್ಚುವಂತಹ ವಿಚಾರ. ಇದು ಯಶಸ್ವಿಯಾಗಲು ಯಕ್ಷಗಾನ ಕಲಾರಂಗ ಮತ್ತು ಯಕ್ಷ ಗುರುಗಳ ನಿಸ್ಪೃಹ ಸೇವೆಯೆ ಕಾರಣವೆಂದು ಸಂತಸ ವ್ಯಕ್ತಪಡಿಸಿದರು. ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮತ್ತು ಕುಂದಾಪುರ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿಯವರು ತಮ್ಮ ಕ್ಷೇತ್ರಕ್ಕೂ ಈ ಒಂದು ಅಭಿಯಾನವನ್ನು ವಿಸ್ತರಿಸಿದಕ್ಕೆ ಟ್ರಸ್ಟ್‍ಗೆ ಅಭಿನಂದನೆ ಸಲ್ಲಿಸಿದರು. ಶಾಸಕರುಗಳಿಗೆ ಗುರುಗಳನ್ನ ಪರಿಚಯಿಸುತ್ತಾ ಟ್ರಸ್ಟ್‍ನ ಕಾರ್ಯದರ್ಶಿ ಮುರಲಿ ಕಡೆಕಾರ್ ಮಾತನಾಡಿ ಕಾಪು ಮತ್ತು ಕುಂದಾಪುರದಲ್ಲಿ ಇನ್ನಷ್ಟು ಶಾಲೆಗಳು ಬೇಡಿಕೆಯನ್ನಿಟ್ಟಿದ್ದು ಗುರುಗಳ ಕೊರತೆಯಿಂದ ಈ ವರ್ಷ ಅಸಾಧ್ಯವಾಗಿದೆ, ಬೈಂದೂರು ಶಾಸಕರು ತಮ್ಮ ಕ್ಷೇತ್ರದಲ್ಲೂ ಮುಂದಿನ ವರ್ಷ ಯಕ್ಷಶಿಕ್ಷಣ ಆರಂಭಿಸಬೇಕೆಂದು ಕೇಳಿಕೊಂಡಿರುತ್ತಾರೆ. ಅಂತೆಯೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಭಾಗವತ ಪಟ್ಲ ಸತೀಶ ಶೆಟ್ಟಿಯವರ ನೇತೃತ್ವದಲ್ಲಿ ಸುಮಾರು 30 ಶಾಲೆಗಳಲ್ಲಿ “ಯಕ್ಷಧ್ರುವ ಯಕ್ಷಶಿಕ್ಷಣ”ಆರಂಭಗೊಂಡಿರುವುದು ಇದರ ಯಶಸ್ಸಿನ ದ್ಯೋತಕವಾಗಿದೆ ಎಂದು ನುಡಿದರು. ಈ ಸಂದರ್ಭದಲ್ಲಿ ಗುರುಗಳಿಗೆ ಯಕ್ಷಗಾನ ತರಗತಿಯ ಮತ್ತು ಪ್ರದರ್ಶನದ ಬಗ್ಗೆ ಮಹತ್ತ್ವದ ಸೂಚನೆಗಳನ್ನು ನೀಡಲಾಯಿತು. ಎಲ್ಲಾ ಗುರುಗಳ ಪರವಾಗಿ ಹಿರಿಯರಾದ ಸದಾನಂದ ಐತಾಳರು ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ಧನ್ಯವಾದ ಸಮರ್ಪಿಸಿದರು. ಯಕ್ಷಗಾನ ಕಲಾರಂಗದ ಉಪಾಧ್ಯಕ್ಷರುಗಳಾದ ಎಸ್. ವಿ. ಭಟ್, ವಿ. ಜಿ. ಶೆಟ್ಟಿ ಹಾಗೂ ಟ್ರಸ್ಟ್ ನ ಸದಸ್ಯರು ಮತ್ತು ಯಕ್ಷಗಾನ ಕಲಾರಂಗದ ಸದಸ್ಯರು ಉಪಸ್ಥಿತರಿದ್ದರು.

We're currently hard at work gathering information and crafting content to bring you the best experience. Stay tuned for exciting updates!