Yakshagana Kalaranga

ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ಸ್ಮರಣಾರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿಗೆ ಕೆ. ಬಾಬು ರೈ ಆಯ್ಕೆ.

ಅಪ್ಪಟ ಕಲೋಪಾಸಕರಾಗಿರುವ ಮೃದಂಗ ವಿದ್ವಾನ್ ಕೋಟೆಕ್ಕಾರು ಬಾಬು ರೈ ಅವರಿಗೆ ಜನ್ಮಶತಮಾನೋತ್ಸವ. ಹರೆಯದಂತೆಯೇ ಇವರ ವಿದ್ವತ್ತಿನ ಘನತೆಗೂ ಶತ-ಮಾನ ! 1943ರಲ್ಲಿ ಯಕ್ಷಗಾನ ಮದ್ದಲೆವಾದಕನಾಗಿ ಯಕ್ಷಗಾನ ಕಲಾಕ್ಷೇತ್ರವನ್ನು ಪ್ರವೇಶಿಸಿ ಮಧೂರು ಮೇಳದಲ್ಲಿ ತಿರುಗಾಟ ನಡೆಸಿದ ಇವರಿಗೆ ಸಹೋದರ ಕೋಟೆಕ್ಕಾರ್ ದೇರಣ್ಣ ರೈಗಳೇ ಮೊದಲ ಗುರು. ಜೀವನೋಪಾಯಕ್ಕಾಗಿ ಊರು ತೊರೆದು ಬೆಂಗಳೂರು, ಮೈಸೂರು ಸೇರಿ ಮೈಸೂರು ಮಹಾರಾಜರ ಆಸ್ಥಾನ ವಿದ್ವಾನ್ ಟಿ. ಎಂ. ವೆಂಕಟೇಶ ದೇವರ್ ಅವರೊಂದಿಗೆ ಶಿಷ್ಯತ್ವವನ್ನು ಅಂಗೀಕರಿಸಿಕೊಂಡರು. ಏಳು ವರ್ಷ ಮೃದಂಗ ಕಲಿತು ಸಂಗೀತ ಕ್ಷೇತ್ರದ ವಿವಿಧ ಪ್ರಕಾರಗಳಲ್ಲಿ ಪರಿಣತಿ ಸಾಧಿಸಿದರು. ಚಲನಚಿತ್ರದಲ್ಲಿಯೂ ನಟಿಸಿದರು. ಆಕಾಶವಾಣಿಯ ಕಲಾವಿದರಾದರು. ಊರಿಗೆ ಮರಳಿದ ಮೇಲೆ ‘ಕಲಾಸದನ’ ಎಂಬ ಸಂಸ್ಥೆ ಆರಂಭಿಸಿ ಕಲಾಕಾರ್ಯಕ್ರಮಗಳಿಗೆ ಆಸರೆಯಾದರು. ಟಿ. ಆರ್. ಮಹಾಲಿಂಗಂ, ದೊರೆಸ್ವಾಮಿ ಅಯ್ಯಂಗಾರ್, ಬಾಲಮುರಲೀಕೃಷ್ಣ ರಂಥ ದಿಗ್ಗಜರಿಗೆ ಸಾಥಿ ನೀಡಿದರು. ಯಕ್ಷಗಾನ ಮದ್ದಲೆವಾದಕ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರಿಗೆ ಮೃದಂಗ ಹೇಳಿಕೊಟ್ಟರು. ಪುತ್ತಿಗೆ ರಾಮಕೃಷ್ಣ ಜೋಯಿಸ, ಮಾಂಬಾಡಿ ನಾರಾಯಣ ಭಾಗವತ, ಅಗರಿ ಶ್ರೀನಿವಾಸ ಭಾಗವತ, ದಾಮೋದರ ಮಂಡೆಚ್ಚರಂಥ ಭಾಗವತರಿಗೆ ಮದ್ದಲೆ ಸಾಥಿ ನೀಡಿದರು. ಕುರಿಯ ವಿಠಲ ಶಾಸ್ತ್ರಿ, ಮಲ್ಪೆ ಶಂಕರನಾರಾಯಣ ಸಾಮಗ, ಕರ್ಗಲ್ಲು ಸುಬ್ಬಣ್ಣ ಭಟ್ಟರಂಥ ಕಲಾವಿದರನ್ನು ರಂಗದ ಮೇಲೆ ಕುಣಿಸಿದರು. ಶೇಣಿ ಗೋಪಾಲಕೃಷ್ಣ ಭಟ್ಟರ ಪ್ರಿಯ ಮಿತ್ರರಾಗಿ ಅವರ ಹರಿಕಥೆಗೆ ತಬಲಾಸಾಥಿ ನೀಡಿದರು. ಕುದ್ರೆಕೂಡ್ಲು ರಾಮ ಭಟ್, ನಿಡ್ಲೆ ನರಸಿಂಹ ಭಟ್ಟರಂಥ ಕಲಾವಿದರ ಒಡನಾಡಿಯಾದರು. ಮೃದಂಗ-ಮದ್ದಲೆಗಳ ಸಮ್ಯಕ್ ಬಂಧದ ಕುರಿತು ಸದಾ ಚಿಂತನಶೀಲರಾಗಿರುವ ಬಾಬು ರೈಗಳು ‘ಪ್ರತಿಧ್ವನಿ’ ಎಂಬ ಮೃದಂಗ ಪಾಠದ ಕೃತಿಯನ್ನೂ ಬರೆದಿದ್ದಾರೆ. ಸಂಗೀತ ಕ್ಷೇತ್ರದಲ್ಲಿ 75 ವರ್ಷಗಳ ಸಾಂದ್ರ ಅನುಭವ. ತಾಳಬಂಧಗಳ ಕುರಿತು ಮಾತನಾಡಲಾಂಭಿಸಿದರೆ ಬತ್ತದ ವಿದ್ವತ್ ಗಂಗೋತ್ರಿ. ವಿದ್ವತ್ತಿನಷ್ಟೇ ವಿನಮ್ರತೆಯನ್ನೂ ಭೂಷಣವಾಗಿಸಿಕೊಂಡ ಬಾಬು ರೈಗಳಿಗೆ ಕಾಸರಗೋಡಿನ ಶ್ರೀ ಎಡನೀರು ಮಠದ ಸಭಾಂಗಣದಲ್ಲಿ ಆಗಸ್ಟ್ 15, ಮಂಗಳವಾರ 2023ರಂದು ಸಂಜೆ 5.00 ಗಂಟೆಗೆ ವಿದ್ವಾನ್ ಕೆ. ಬಾಬು ರೈ ಕಾಸರಗೋಡು ಜನ್ಮಶತಮಾನೋತ್ಸವ ಸಮಿತಿಯು ಆಚರಿಸುತ್ತಿರುವ ಜನ್ಮಶತಮಾನೋತ್ಸವ ಸಂಭ್ರಮ-ಅಭಿನಂದನೆ ಕಾರ್ಯಕ್ರಮದಲ್ಲಿ ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಸಾನಿಧ್ಯದಲ್ಲಿ ಉಡುಪಿಯ ಯಕ್ಷಗಾನ ಕಲಾರಂಗವು ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ಸ್ಥಾಪಿಸಿದ 40,000/- ಮೊತ್ತಗಳನ್ನೊಳಗೊಂಡ ‘ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ, ಸ್ಮರಣಾರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿ’ಯನ್ನು ನೀಡಿ ಗೌರವಿಸುವುದಾಗಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿರುತ್ತಾರೆ.

ವಿನಯವನ್ನು ಮರೆಯದ ವಿದ್ವಾಂಸ ಕೆ. ಬಾಬು ರೈಯವರಿಗೆ
ಯಕ್ಷಗಾನ ಕಲಾರಂಗ ಪ್ರಶಸ್ತಿ

ಸಂಗೀತಲೋಕದ ವಿಹಾರಿಗಳಲ್ಲಿ ‘ಮಾಲಿ’ ಯವರ ಬಗ್ಗೆ ಗೊತ್ತಿಲ್ಲದವರಿಲ್ಲ. ‘ಮಾಲಿ’ ಎಂದು ಜನಪ್ರಿಯರಾದ ಟಿ. ಆರ್‌. ಮಹಾಲಿಂಗಂ ಅಸಾಧಾರಣವೂ ವಿಲಕ್ಷಣವೂ ಆಗಿದ್ದ ಪ್ರತಿಭೆ. ಕೊಳಲನ್ನು ತುಟಿಗಾನಿಸಿದರೆಂದರೆ ದ್ವಾಪರಯುಗದ ಕೃಷ್ಣನ ಕೂಟದಲ್ಲಿದ್ದ ಉದ್ಧವನೋ ದಾರುಕನೋ ಭೂಲೋಕದಲ್ಲಿ ಮತ್ತೆ ಮೈವಡೆದು ಬಂದಂತೆ! ಅಂಥ ಮಾಲಿಯವರ ಸನಿಹ ಕುಳಿತು ಮೃದಂಗ ಬಾಬು ರೈ ಮೃದಂಗ ನುಡಿಸಿದ್ದರೆಂಬುದೇ ಒಂದು ರೋಮಾಂಚದ ಸಂಗತಿ. ಬಹುಶಃ ಬಾಬು ರೈಗಳು ತುಸು ಹೆದರಿರಬೇಕು! ಅವರೇನು, ಎನ್‌. ರಮಣಿಯವರಂಥ ಘಟಾನುಘಟಿಗಳೇ ಮಾಲಿಯವರ ಹಿಂದೆ ಭಯಭಕ್ತಿಯಿಂದ ಸುಮ್ಮನೆ ಕೂರುತ್ತಿದ್ದರು.
‘ಚೆನ್ನಾಗಿ ನುಡಿಸುತ್ತೀಯಲ್ಲಾ!’ ಎಂದರಂತೆ ಮಾಲಿ.
ಬಾಬು ರೈಗಳು ಮೆಲುದನಿಯಲ್ಲಿ ಹೇಳಿದರು, ‘ಎಂತೆಂಥ ಮಹಾರಥರು ನಿಮಗೆ ಮೃದಂಗಸಾಥಿಯಾಗಿದ್ದಾರೆ ಸ್ವಾಮಿ. ನನ್ನ ನುಡಿತಗಳು ನಿಮ್ಮ ಕಿವಿಯವರೆಗೂ ಮುಟ್ಟಲಾರದು’.
ಕಾಸರಗೋಡಿನಲ್ಲಿ ಆ ದಿನ ನಡೆದ ಕಛೇರಿ ಮುಗಿಸಿ ಮರುದಿನ ಮಂಗಳೂರಿನಲ್ಲಿ ನಡೆದ ಮತ್ತೊಂದು ಕಛೇರಿಗೆ ಮೃದಂಗವಾದಕರಾಗಿ ಮತ್ತೆ ಯಾರೋ ಬಂದಿದ್ದರು. ಮಾಲಿಯವರು ಆಗಲೂ ಹೇಳಿದರಂತೆ, ‘ನಿನ್ನೆ ನುಡಿಸಿದವನೇ ಅಡ್ಡಿಯಿಲ್ಲ. ಅವನೇ ಸಾಕಿತ್ತು’
ಟಿ. ಆರ್‌. ಮಹಾಲಿಂಗಂ ಮಾತ್ರವಲ್ಲ, ಚೆಂಬೈ ವೈದ್ಯನಾಥನ್‌ ಭಾಗವತರಿಗೂ ಬಾಬು ರೈಗಳೆಂದರೆ ತುಂಬ ವಾತ್ಸಲ್ಯವಂತೆ. ಒಮ್ಮೆ ಖಂಜೀರಾ ನುಡಿಸುತ್ತಿದ್ದ ಬಾಬು ರೈಗಳನ್ನು ಮೃದಂಗಕ್ಕೆಕೂರಲು ಸೂಚಿಸಿದ್ದರಂತೆ. ಬಾಲಮುರಲೀಕೃಷ್ಣ, ದೊರೆಸ್ವಾಮಿ ಅಯ್ಯಂಗಾರರಂಥ ಕಛೇರಿಗಳಲ್ಲಿಯೂ ಸಾಥಿ ಕೊಟ್ಟ ಸ್ಮೃತಿಗಳು ಬಾಬು ರೈ ಅವರಲ್ಲಿವೆ. ಆ ದಿನಗಳಲ್ಲಿ ಮೇರುಕಲಾವಿದರಿಗೆ ಜೊತೆಯಾಗುತ್ತಿದ್ದ ಕಾಸರಗೋಡಿನ ವಯಲಿನ್‌ವಿದ್ವಾನ್‌ ಪದ್ಮನಾಭ ಸರಳಾಯರನ್ನೂ ಬಾಬು ರೈಗಳು ಆರ್ದ್ರರಾಗಿ ನೆನೆಯುತ್ತಾರೆ.
ಅಂಥ ಬಾಬು ರೈಗಳಿಗೆ ಈಗ ನೂರು ತುಂಬಿದೆ. ಶತಮಾನಂ ಭವತಿ ಶತಾಯುಃ ಪುರುಷಃ… ಎಂದೆಲ್ಲ ಹಾರೈಸುವ ಪದ್ಧತಿ ಇದೆ. ಹಾಗೆಂದು, ಆಯುಷ್ಯ ಮಾತ್ರವಲ್ಲ, ಘನತೆಯಲ್ಲಿಯೂ ಶತ-ಮಾನ ಪಡೆದವರು ಬಹಳ ವಿರಳ. ಅಂಥ ವಿರಳ ಪಂಕ್ತಿಯವರ ಕಾಲದಲ್ಲಿ ನಾವಿದ್ದೇವೆ ಎಂಬುದು ನಮ್ಮ ಸೌಭಾಗ್ಯ.
ಬಾಬು ರೈಗಳು ಮೃದಂಗವಿದ್ವಾನ್‌ ಮಾತ್ರವಲ್ಲ, ಸಂಗೀತಶಾಸ್ತ್ರದ ಕುರಿತು ಸುಲಲಿತವಾಗಿ ಮಾತನಾಡಬಲ್ಲವರು. ‘ಪ್ರಾಕ್ಟೀಶನರ್‌’ಗಳು ‘ಥಿಯರಿಟೀಶಿಯನ್‌’ಗಳಾಗಿರುವುದು ಬಹಳ ಅಪೂರ್ವ. ಬಾಬು ರೈಗಳು ನುಡಿಸಬಲ್ಲವರು ಮತ್ತು ನುಡಿಯಲೂ ಬಲ್ಲವರು. ತ್ಯಾಗರಾಜ ಸ್ವಾಮಿಗಳ, ಮುತ್ತುಸ್ವಾಮಿ ದೀಕ್ಷಿತರ, ಶ್ಯಾಮಾಶಾಸ್ತ್ರಿಗಳ ರಚನೆಗಳ ಕುರಿತು ಮಾತನಾಡಬಲ್ಲರು. ಅವರ ಕೃತಿಗಳಿಗೂ ಪುರಂದರದಾಸ, ಕನಕದಾಸರ ಕೀರ್ತನೆಗಳಿಗೂ ಇರುವ ಸಾಮ್ಯ- ಭೇದಗಳನ್ನು ವಿವೇಚಿಸಬಲ್ಲರು. ಗಾಯನ ಪ್ರಸ್ತುತಿಯ ವಿಳಂಬ, ದ್ರುತ, ಮಧ್ಯಮಗತಿಗಳ ಬಗ್ಗೆ ಪ್ರಾಯೋಗಿಕವಾಗಿಯೂ ತಾತ್ತ್ವಿಕವಾಗಿಯೂ ಪ್ರಸ್ತುತಿಪಡಿಸಬಲ್ಲರು. ಸಪ್ತತಾಳಗಳ ವಿಕಸನವನ್ನು ವಿವರಿಸಬಲ್ಲರು.

ಸ್ವರದ ಬಗ್ಗೆ ಮಾತನಾಡುವಾಗ ಅವರು ಹೇಳುವ ಸಂಗತಿ ಬಹಳ ಚೆಂದ ಇದೆ. ನದೀಮೂಲಕ್ಕಿಂತ ಮೊದಲು ನದಿ ಎಲ್ಲಿತ್ತು? ಇರಲೇ ಇಲ್ಲವಲ್ಲ! ಹಾಗಿದ್ದರೆ ಮೂಲದಲ್ಲಿ ಉದಕ ಉದಿಸಿದ್ದಾದರೂ ಎಲ್ಲಿಂದ? ಸೂಕ್ಷ್ಮರೂಪವು ಸ್ಥೂಲವಾಗುತ್ತ ಹೇಗೆ ಹರಿಯಿತು? ಸ್ವರವೂ ಹಾಗೆಯೇ. ಜಗದ ಮೌನದ ಗರ್ಭದೊಳಗೆ ಅಡಗಿರುವ ಸ್ವರಗಳನ್ನೂ ವಿಸ್ತರಿಸುವ ಬಗೆಯೂ ನದಿಯ ಹರಿವಿನ ಹಾಗೆ.
ಹೀಗೆ ಮಾತನಾಡುತ್ತಿರುವ ಬಾಬು ರೈಗಳ ಬದುಕು ಕೂಡ ಒಂದು ಬಗೆಯಲ್ಲಿ ನದಿಯಂತೆ. ತಿಟ್ಟು-ತಿರುವುಗಳಲ್ಲಿ ಹಾದು ಮತ್ತೆ ಈಗ ‘ಜನ್ಮಶತಮಾನೋತ್ಸವ’ ಎಂಬ ಕಡಲಕಿನಾರೆಯನ್ನು ಮುಟ್ಟಿದೆ. ಜನಿಸಿದ್ದು ಕಾಸರಗೋಡಿನ ಕೋಟೆಕ್ಕಾರಿನಲ್ಲಿ 10 ಆಗಸ್ಟ್‌ 1923ರಂದು. ಆ ಕಾಲದಲ್ಲಿ ಓದಲು ಎಲ್ಲಿದೆ ಅವಕಾಶ? ಬದುಕೇ ಪಾಠಶಾಲೆ. ಸಹೋದರ ಕೋಟೆಕ್ಕಾರ್‌ ದೇರಣ್ಣ ರೈಗಳಲ್ಲಿಯೇ ತಬಲಾ, ಮದ್ದಲೆಯಾದಿ ವಾದ್ಯಗಳ ನುಡಿತದ ಪ್ರಾಥಮಿಕ ಪಾಠ ಕಲಿತಿರಬೇಕು.
ಕೋಟೆಕ್ಕಾರು ದೇರಣ್ಣ ರೈಗಳನ್ನು ಇಲ್ಲಿ ನೆನಪಿಸಿಕೊಳ್ಳುವುದು ಕೂಡ ಸೂಕ್ತ. ಹಿರಿಯ ಬಲಿಪ ನಾರಾಯಣ ಭಾಗವತರ ಕಾಲದವರು ಅವರು. ಕಟೀಲು, ಧರ್ಮಸ್ಥಳ, ಮುಲ್ಕಿಯೇ ಮೊದಲಾದ ಮೇಳಗಳಲ್ಲಿ ಅವರಿಗೆ ತಿರುಗಾಟವಿತ್ತು. ಕೆಮ್ಮಣ್ಣು ನಾರ್ಣಪ್ಪಯ್ಯ, ಕುದ್ರೆಕೂಡ್ಲು ರಾಮ ಭಟ್ಟ, ನಿಡ್ಲೆ ನರಸಿಂಹ ಭಟ್ಟರಂಥವರಿಗೆ ಸಹಾಯಕರಾಗಿ ಮುಂದೆ ಮುಖ್ಯಮದ್ಲೆಗಾರರಾದವರು. 1973ರ ಸುಮಾರಿಗೆ ಅಮೆರಿಕದ ಸಂಶೋಧಕಿ ಮಾರ್ಥಾ ಆಶ್ಚನ್‌ ಕೂಡ್ಲುವಿನಲ್ಲಿ ಒಂದು ಯಕ್ಷಗಾನ ಪ್ರದರ್ಶನದ ವೀಡಿಯೋ ದಾಖಲಾತಿ ನಡೆಸಿದಾಗ ಅದರಲ್ಲಿ ಚೆಂಡೆವಾದಕರಾಗಿ ದೇರಣ್ಣ ರೈಗಳಿರಬೇಕು. ಪುತ್ತಿಗೆ ರಾಮಕೃಷ್ಣ ಜೋಯಿಸರು ಆಗ ಭಾಗವತರಿರಬೇಕು. ಎಡನೀರು ಶ್ರೀಮಠದ ಯಕ್ಷಗಾನ ಕಾರ್ಯಕ್ರಮವೊಂದರಲ್ಲಿ ದೇರಣ್ಣ ರೆಗಳು ಚೆಂಡೆ ನುಡಿಸುತ್ತಿರುವ ಫೊಟೊ ಕುಬಣೂರು ಬಾಲಕೃಷ್ಣ ರಾಯರ ‘ಯಕ್ಷಗಾನ’ ಕೃತಿಯಲ್ಲಿದೆ. ಆಗಲೂ ಪುತ್ತಿಗೆ ಜೋಯಿಸ ಭಾಗವತರಿದ್ದರು.

ಕಾಲು ಸಾಗಿದತ್ತ ಬದುಕು ಸಾಗಿತು!
ಬಾಬು ರೈಗಳು ಮಧೂರು ಮೇಳದಲ್ಲಿ ತಿರುಗಾಟ ನಡೆಸಿದ್ದರು. ಇದು ಬಹುಶಃ 1930-40ರ ಆಸುಪಾಸಿನ ದಿನಗಳಿರಬೇಕು. ಕಲೆ ಆನಂದಕ್ಕಾದೀತು, ಉದರನಿಮಿತ್ತಕ್ಕಲ್ಲ ಎಂಬುದು ಅರಿವಾಗಿ ಹೊಟ್ಟೆಪಾಡಿಗಾಗಿ ಬೆಂಗಳೂರು ಸೇರಿ ಹೊಟೇಲಿನಲ್ಲಿ ದುಡಿದರು. ಅಲ್ಲಿ ಸಂಗೀತಪ್ರಿಯರ ಸ್ನೇಹವಾಯಿತು. ಮೈಸೂರಿಗೆ ಹೋದರು. ರಾಮಚಂದ್ರ ಬಲ್ಲಾಳರೆಂಬ ಸಹೃದಯರು ಮೈಸೂರು ಸಂಸ್ಥಾನದ ಆಸ್ಥಾನ ವಿದ್ವಾಂಸರಾಗಿದ್ದ ಟಿ. ಎಂ. ವೆಂಕಟೇಶ ದೇವರ್‌ ಅವರ ಗುರುಕುಲಕ್ಕೆ ಕರೆದೊಯ್ದರು. ಹಾಗೆ, ಅಲ್ಲಿ ಏಳು ವರ್ಷ ಮೃದಂಗ ಅಭ್ಯಾಸವಾಯಿತು. ಪಿಟೀಲು ಚೌಡಯ್ಯರಂಥ ಘನ ಸಂಗೀತ ವಿದ್ವಾಂಸರನ್ನು ಸನಿಹದಿಂದ ನೋಡುವ ಅವಕಾಶ ದೊರೆಯಿತು. ಜಯಚಾಮರಾಜೇಂದ್ರ ಒಡೆಯರ ಕಾಲದಲ್ಲಿ ದಸರೆಯಲ್ಲಿ ನಡೆಯುವ ಸಂಗೀತ ಉತ್ಸವದಲ್ಲಿ ಭಾಗವಹಿಸುವ ಭಾಗ್ಯ ಲಭಿಸಿತು. ಊರಿಗೆ ಮರಳಿದರು. ನೆಲೆ ನಿಂತರು. ಮಡಿಕೇರಿಯೇ ಮೊದಲಾದ ಆಸುಪಾಸಿನ ಊರುಗಳಲ್ಲಿ ಸಂಗೀತ ತರಗತಿಗಳನ್ನು ನಡೆಸಿದರು. ಕಲ್ಲಿಕೋಟೆ, ಮಂಗಳೂರು ಆಕಾಶವಾಣಿ ಕೇಂದ್ರಗಳಲ್ಲಿ ಮಾನಿತ ಸಂಗೀತ ಕಲಾವಿದರಾದರು. ಹಲವು ತಾಳವಾದ್ಯಗಳನ್ನು ನುಡಿಸಬಲ್ಲವರಾದುದರಿಂದ ಪ್ರಯೋಗಗಳನ್ನು ನಡೆಸಿದರು. ಸಂಗೀತ ಕಾರ್ಯಕ್ರಮಗಳನ್ನು ಕರ್ನಾಟಕದ ಹಲವೆಡೆ ಓಡಾಡಿದರು. ಕೇರಳ- ಕರ್ನಾಟಕಗಳ ನಡುವಿನ ಸಂಗೀತ ರಾಯಭಾರಿತ್ವವನ್ನು ಸಮರ್ಥವಾಗಿ ನಿಭಾಯಿಸಿದರು, ಗುರುವಾಯೂರಿನ ಸಂಗೀತೋತ್ಸವಗಳಲ್ಲಿ ಭಾಗವಹಿಸಿದರು. ಸರಕಾರದ ಅಕಾಡೆಮಿಗಳ ಪರೀಕ್ಷಕರಾಗಿ ಹೊಣೆವಹಿಸಿದರು.
ಗಂಧರ್ವಲೋಕದಲ್ಲಿ ಓಡಾಡಿದರೂ ಯಕ್ಷಲೋಕವನ್ನು ಮರೆಯಲಿಲ್ಲ!
ಸಂಗೀತ ಕ್ಷೇತ್ರದಲ್ಲಿ ಇಷ್ಟು ಸಾಧನೆ ಮಾಡಿದರೂ ಯಕ್ಷಗಾನವನ್ನು ಮರೆಯಲಿಲ್ಲ. ಪುತ್ತಿಗೆ ರಾಮಕೃಷ್ಣ ಜೋಯಿಸರು, ಅಗರಿ ಶ್ರೀನಿವಾಸ ಭಾಗವತರು, ಮೈಂದಪ್ಪ ರೈಗಳು, ದಾಮೋದರ ಮಂಡೆಚ್ಚರು ಇವರೆಲ್ಲ ಬಾಬು ರೈಗಳನ್ನು ಕಂಡರೆ, ‘ಬನ್ನಿ’ ಎಂದು ಕರೆದು ಮದ್ದಲೆಗೆ ಕೂರಿಸುತ್ತಿದ್ದರು. ಕುರಿಯ ವಿಠಲ ಶಾಸ್ತ್ರಿಗಳು ತಮ್ಮ ನಾಟ್ಯಕ್ಕೆ ಬಾಬು ರೈಗಳ ನುಡಿತವನ್ನು ಬಯಸಿದ್ದುಂಟು. ಒಮ್ಮೆ ಭರತ ಪಾತ್ರಧಾರಿ ಕುರಿಯ ವಿಠಲ ಶಾಸ್ತ್ರಿಗಳು ರಾಮಪಾದುಕೆಯನ್ನು ಹೊತ್ತು ತರುವಂತೆ ಹರಿವಾಣದಲ್ಲಿ ಚಕ್ರತಾಳಗಳನ್ನು ಸಾಂಕೇತಿಕವಾಗಿ ಇರಿಸಿಕೊಂಡು ರಂಗಸ್ಥಳದಲ್ಲಿ ಲಯಬದ್ಧವಾಗಿ ಪಯಣಿಸುವಾಗ ಬಾಬು ರೈಗಳು ಆ ನಡೆಯನ್ನು ಅನುಸರಿಸಿ ನುಡಿಸಿದ್ದರಂತೆ. ಅದನ್ನು ಸ್ವತಃ ಶಾಸ್ತ್ರಿಗಳು ಮೆಚ್ಚಿಕೊಂಡಿದ್ದನ್ನು ಬಾಬು ರೈಗಳು ಈಗಲೂ ನೆನಪಿಸಿಕೊಳ್ಳುತ್ತಾರೆ. ಶಂಕರನಾರಾಯಣ ಸಾಮಗರಿಗೆ, ಕೋಳ್ಯೂರು ರಾಮಚಂದ್ರರಾಯರಿಗೆ ಕೂಡ ಬಾಬು ರೈಗಳ ಮೃದಂಗ ನುಡಿತದ ಬಗ್ಗೆ ಒಲವಿತ್ತು. ಮಹಾಮದ್ಲೆಗಾರ ನೆಡ್ಲೆ ನರಸಿಂಹ ಭಟ್ಟರು ಬಾಬು ರೈಗಳಲ್ಲಿ ‘ಆ ನುಡಿತ ಹೇಗೆ ಸ್ವಾಮಿ?’ ಎಂದು ಕೇಳುವುದಿತ್ತು. ‘ನಿಮಗೆ ಅವೆಲ್ಲ ಗೊತ್ತಿದೆ. ಸುಮ್ಮನೆ ಕೇಳುವುದು ನೀವು!’ ಎಂದು ಬಾಬು ರೈಗಳು ನಕ್ಕು ಅವರಿಗೆ ವಿವರಿಸುತ್ತಿದ್ದರು. ಕುದ್ರೆಕೂಡ್ಲು ರಾಮ ಭಟ್ಟರ ಶಿಷ್ಯ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು ಮೃದಂಗದ ನುಡಿತಗಳನ್ನು ಎರಡು ವರ್ಷ ಬಾಬು ರೈಗಳಲ್ಲಿ ಕಲಿತಿದ್ದರು. ಯಕ್ಷಗಾನದ ಹಿಮ್ಮೇಳವು ಪಾರಂಪರಿಕ ಗತಿಯಲ್ಲಿ ಸಾಗುತ್ತಿದ್ದಾಗ ಅದರ ಸಾಧ್ಯತೆಗಳನ್ನು ವಿಸ್ತರಿಸುವಂತೆ ಪ್ರಯೋಗಶೀಲರಾಗಿದ್ದವರು ಬಲ್ಲಾಳರು. ಅವರ ಚೆಂಡೆ-ಮದ್ದಲೆಯ ವಿಶಿಷ್ಟ ನುಡಿ ಕೌಶಲ ಅವರಿಗಿಂತ ಹಿಂದಿನ ಕಲಾವಿದರಿಗಿರಲಿಲ್ಲ, ಇವತ್ತಿನವರಲ್ಲಿಯೂ ಇಲ್ಲ. ಆ ಬಗೆಯಲ್ಲಿ ತನ್ನನ್ನು ರೂಪಿಸಿದವರು ಬಾಬು ರೈಗಳೆಂದು ಬಲ್ಲಾಳರೇ ಹೇಳುತ್ತಿದ್ದರು. ಬಾಬು ರೈಗಳು ಇತ್ತೀಚೆಗಿನವರೆಗೂ ಯಕ್ಷಗಾನವನ್ನು ಆಸಕ್ತಿಯಿಂದ ವೀಕ್ಷಿಸುತ್ತಿದ್ದರು. ಕಟೀಲು ಮೇಳದ ದಿಗ್ವಿಜಯ ನಾಂದಿಯ ಸಮಯದಲ್ಲಿ ಕಿಕ್ಕಿರಿದ ಜನಸಂದಣಿಯ ಮಧ್ಯದಲ್ಲಿ, ಭಾಗವತರು ಕುಳಿತ ಮಂಚಕ್ಕೆ ಆಧರಿಸಿ ನಿಂತುಕೊಂಡು ಬಾಬು ಬಾಬು ರೈಗಳು ಆಟ ನೋಡುತ್ತಿದ್ದರು. ಆ ದಿನಗಳಲ್ಲಿ ಕುಬಣೂರು ಶ್ರೀಧರ ರಾಯರ ಹಾಡುಗಾರಿಕೆಗೆ ಮೈಮರೆತು ಮಂಚದ ಮೇಲೆ ಬೆರಳಾಡಿಸುತ್ತಿರುವ ಬಾಬು ರೈಗಳನ್ನು ಕೆಲವರಾದರೂ ಗಮನಿಸಿರಬಹುದು. ಅದು ಅವರ ಯಕ್ಷಗಾನಾಭಿಮಾನ!
ಶೇಣಿ ಗೋಪಾಲಕೃಷ್ಣ ಭಟ್ಟರ ಆತ್ಮಸಖನಂತೆ ಇದ್ದವರು ಬಾಬು ರೈಗಳು. ಅವರ ಹರಿಕತೆಗೆ ಇವರದ್ದೇ ತಬಲಾ ಬೇಕು. ಶೇಣಿಯವರು ಮೊದಲ ಬಾರಿಗೆ ಅರ್ಥ ಮಾತನಾಡಿದ ಕಾರ್ಯಕ್ರಮಕ್ಕೂ ಬಾಬು ರೈ ಸಾಕ್ಷಿಯಾಗಿದ್ದರು. ಶೇಣಿಯವರದ್ದು ಕೂಡ ನದಿಯಂತೆ ತಿಟ್ಟು-ತಿರುವುಗಳ ಬದುಕು. ಮೈಸೂರಿಗೆ ಹೋಗಿ ಒಂದು ಸಿನೆಮಾದಲ್ಲಿ ಪಾತ್ರ ಮಾಡಿ, ಆ ಸಿನೆಮಾ ಬಿಡುಗಡೆಯೂ ಆಗದೆ, ಮತ್ತೆ ಊರಿಗೆ ಮರಳಿ, ಸ್ವಪ್ರಯತ್ನದಿಂದ ಅರ್ಥಧಾರಿಯಾಗಿ ಕೀರ್ತಿಯ ಶಿಖರವೇರಿದವರು ಶೇಣಿಯವರು. ಬಾಬು ರೈಗಳಿಗೆ ಕೂಡ ಪಂಡರೀಬಾಯಿಯವರ ‘ಸಕುಬಾಯಿ’ ಸಿನೆಮಾದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ನೆನಪು ಸಾಂದ್ರವಾಗಿದೆ. ಇಬ್ಬರ ಬದುಕಿನ ಅಂತರಂಗ ಗೀತೆಯ ಆಧಾರ ಷಡ್ಜವೂ ಒಂದೇ. ಬಾಬು ರೈಯವರ ಮೃದಂಗ ಪಾಠಗಳ ಹೊತ್ತಗೆ ‘ಪ್ರತಿಧ್ವನಿ’ಗೆ ಶೇಣಿ ಗೋಪಾಲಕೃಷ್ಣ ಭಟ್ಟರೇ ಮುನ್ನುಡಿ ಬರೆದಿದ್ದರು. ತಮ್ಮ ವಿದ್ವತ್ತಿನ ಅಭಿವ್ಯಕ್ತಿಯ ದಾಖಲೆಯಾಗಿ ಈ ಪುಸ್ತಕ ಇದೆ ಎನ್ನುವುದಕ್ಕಿಂತ ‘ನೋಡಿ, ಈ ಪುಸ್ತಕದಲ್ಲಿ ಶೇಣಿಯವರ ಮುನ್ನುಡಿ ಇದೆ’ ಎಂದು ಅಭಿಮಾನದಿಂದ ಕೃತಿಯನ್ನು ಎತ್ತಿಕೊಡುತ್ತಾರೆ ಅವರು. ಶೇಣಿಯವರ ಕುರಿತ ಉತ್ಕಟ ಅಭಿಮಾನದ ದ್ಯೋತಕ ಅದು. ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಹಾರೈಕೆಯ ನುಡಿಗಳೂ ಈ ಕೃತಿಯಲ್ಲಿವೆ.
ಮೃದಂಗ-ಮದ್ದಲೆಗಳ ಅನುಬಂಧ
ಬಾಬು ರೈಗಳ ಜನ್ಮಶತಮಾನೋತ್ಸವವನ್ನು ಆಚರಿಸುವ ಸಂದರ್ಭವನ್ನು ಯಕ್ಷಗಾನದ ಕುರಿತ ವಿವೇಚನೆಗಳಿಗೆ ಬಳಸುವುದು ಯುಕ್ತವೆಂದೆನಿಸುತ್ತದೆ. ಹಿಮ್ಮೇಳ ವಿಭಾಗದಲ್ಲಿ ವಿಶಿಷ್ಟ ಪ್ರಯೋಗಗಳನ್ನು ನಡೆಸಿದರು ಎನ್ನಲಾಗುವ ಮಾಂಬಾಡಿ ನಾರಾಯಣ ಭಾಗವತರ ಜೊತೆ ಕೂಡ ಬಾಬು ರೈಗಳು ಒಡನಾಡಿದ್ದಾರೆ. ಮದ್ದಲೆಯು ಮೃದಂಗದ ನುಡಿಗಳನ್ನು ಆವಾಹಿಸಿಕೊಳ್ಳುತ್ತಿರುವ ಹಂತಗಳನ್ನು ಬಾಬು ರೈಗಳು ಸಾಕ್ಷಿಕಂಗಳಲ್ಲಿ ಕಂಡವರು. ಯಕ್ಷಗಾನ ಭಾಗವತಿಕೆಯು ಸಂಗೀತ ಶೈಲಿಯನ್ನು ಧರಿಸಿ ನಿಂತಿರುವ ಕಾಲದಲ್ಲಿ ಪಕ್ಕವಾದ್ಯವೂ ಅನುಗುಣವಾಗಿ ಸ್ಪಂದಿಸದಿದ್ದರೆ ಹೇಗೆ? ಹಾಗಾಗಿ, ಮೃದಂಗದ ನುಡಿತಗಳನ್ನು ಮದ್ದಲೆಯಲ್ಲಿ ಅಳವಡಿಸಿದ ಬೆಳವಣಿಗೆಯನ್ನು ಫಕ್ಕನೆ ಬೇಡವೆನ್ನುವುದು ತಾರ್ಕಿಕವಾಗಿ ಕಷ್ಟ. ಈಗ ದಿನಮಾನ ಸಾಕಷ್ಟು ಮುಂದೆ ಬಂದಿದೆ. ಈಗ ಮೈಕ್‌ ಬಂದಿದೆ. ಸಂಗೀತದ ಮೃದಂಗವಾದಕರಾಗಲಿ ಯಕ್ಷಗಾನದ ಮದ್ದಲೆವಾದಕರಾಗಲಿ, ಮೈಕ್‌ ಬಳಸಬೇಕಾದುದು ಹೇಗೆ? ಉದಾಹರಣೆಗೆ, ಮದ್ದಲೆಯ ಪೂರ್ಣ ಛಾಪು ಅಥವಾ ಕಪಾಳ ಛಾಪನ್ನು ಮೈಕ್‌ನಲ್ಲಿ ಕೇಳುವಾಗ ಸಹ್ಯವಾಗುವಂತೆ ಮಾಡುವುದು ಹೇಗೆ ; ನಮಗಲ್ಲ, ಹೊರಗಿನ ಪ್ರೇಕ್ಷಕರಿಗೆ ಕೇಳುವುದಕ್ಕಾದರೂ!

ಬಾಬು ರೈಯವರು ವಿಲಂಬಿತಲಯದಲ್ಲಿ ಸಿದ್ಧಿಯನ್ನು ಹೊಂದಿದವರು. ಟಿ. ಆರ್‌. ಮಹಾಲಿಂಗಂರಂಥವರ ಜೊತೆಗೆ ನುಡಿಸಲು ಸಾಧ್ಯವಾದದ್ದು ಅದೇ ಕಾರಣಕ್ಕೆ. ಯಕ್ಷಗಾನದ ಗತಿಯನ್ನು ವಿಲಂಬಿತಲಯದಲ್ಲಿ ಹೊಂದಿಸುವಲ್ಲಿ ಪ್ರಯತ್ನಗಳಾಗಬೇಕು. ಇಂಥ ಸಂದರ್ಭದಲ್ಲಿ ಬಾಬು ರೈಗಳಲ್ಲಿರುವ ದ್ರುತ-ಮಧ್ಯಮ-ವಿಲಂಬಿತ ಗತಿಯ ಕುರಿತ ಪ್ರಾಯೋಗಿಕ ಅನುಭವ, ತಾಳಗಳ ಪಂಚವಿಧಗಳ ಕುರಿತ ಅನುಭವ- ಇತ್ಯಾದಿಗಳೆಲ್ಲ ಸಂಪನ್ಮೂಲವಾಗಿ ಒದಗಬಲ್ಲವು. ಶಾಸ್ತ್ರೀಯ ಸಂಗೀತದ ಮಿಶ್ರಛಾಪು ಮತ್ತು ಯಕ್ಷಗಾನ/ಭಜನಾ ಪರಂಪರೆಯ ಅಷ್ಟತಾಳದ ಸಂಬಂಧವನ್ನು ಬಾಬು ರೈಗಳು ವಿಶಿಷ್ಟ ಬಗೆಯಲ್ಲಿ ವಿವರಿಸುತ್ತಾರೆ. ತಾಳಸಂಬಂಧಗಳ ಬಗ್ಗೆ ಅಂಥ ಎಷ್ಟೋ ಚಿಂತನೆಗಳು ಅವರಲ್ಲಿವೆ.

ಒಟ್ಟಿನಲ್ಲಿ ಅವರಿಂದ ಕಿರಿಯ ಕಲಾವಿದರು ಇನ್ನೂ ಪಡೆಯಬಹುದಾದ್ದು ಅಧಿಕ ಇವೆ ಅಂತನ್ನಿಸುತ್ತದೆ. ಹಾಗಿರುವುದೇ ಅವರ ನೂರು ವಸಂತಗಳ ಬದುಕಿನ ಸಾರ್ಥಕತೆ.
ಬಾಬು ರೈಗಳು ಮದ್ದಲೆಯ ನುಡಿತದ ಮನೋಧರ್ಮ ಹೇಗಿರಬೇಕು ಎಂಬುದಕ್ಕೆ ‘ತತ್‌ಕಾರ’ವನ್ನು ಉದಾಹರಿಸುತ್ತಾರೆ. ತತ್‌ ಎಂದರೆ ಅದು, ಬ್ರಹ್ಮತತ್ತ್ವ. ಅದರಂತೆ ಇದು! ಅಂದರೆ, ಗಾಯನದಂತೆ ವಾದನ. ಸಂಗೀತವನ್ನು ಅನುಸರಿಸಿ ಪಕ್ಕವಾದ್ಯ. ಇದನ್ನು ಇನ್ನೂ ಕಾವ್ಯಾತ್ಮಕವಾಗಿ ಹೇಳುವುದಾದರೆ, ‘ನೀನು ನುಡಿದಂತೆ ನಾನು ನುಡಿಸುವೆ’. ಹಾಡನ್ನು ಮೀರಿ ವಾದಿಸಿದವರಲ್ಲ ಬಾಬು ರೈಗಳು. ಅವರದ್ದು ಅನು-ವಾದ! ಮೂಲವನ್ನು ಅನುಸರಿಸುವ ವಿಧೇಯತೆ ! ಅದೇ ವಿನಯದಲ್ಲಿ ಅವರು ಎಲ್ಲ ಗಾಯಕರಿಗೂ ಪಕ್ಕವಾದ್ಯ ಸಾಥಿ ನೀಡುತ್ತ ಬಂದಿದ್ದಾರೆ. ಅದೇ ವಿನಯ ಅವರನ್ನು ಬದುಕಿನ ಈ ದಿನದವರೆಗೂ ನಡೆಸಿಕೊಂಡು ಬಂದಿದೆ.
ಬಾಬು ರೈಗಳು ಬಹಳ ಹಿಂದೆಯೇ ಎಡನೀರು ಸಂಸ್ಥಾನದ ಶ್ರೀಶ್ರೀಈಶ್ವರಾನಂದ ಭಾರತೀ ಮಹಾಸ್ವಾಮಿಗಳವರ ಕೃಪಾಕಕ್ಷೆಯೊಳಗಿದ್ದವರು. ಶ್ರೀಕೇಶವಾನಂದ ಭಾರತೀ ಮಹಾಸ್ವಾಮಿಗಳವರು ಪೂರ್ವಾಶ್ರಮದಲ್ಲಿ ಮಠದಲ್ಲಿ ಹಾಡುತ್ತಿರುವಾಗ ಅದಕ್ಕೆ ಮೃದಂಗಸಾಥಿ ನೀಡಿದವರು ಮತ್ತು ಅವರ ಆಶ್ರಮ ಸ್ವೀಕಾರದ ಬಳಿಕ ಶ್ರೀಮಠದ ಮಹಾಸ್ವಾಮಿಗಳವರಿಗೆ ನಿಕಟರಾಗಿದ್ದವರು. ಈಗ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳವರ ಅನುಗ್ರಹದೊಂದಿಗೆ ಬಾಬು ರೈಗಳ ಜನ್ಮಶತಮಾನ ಸಂಮಾನ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಉಡುಪಿಯ ಯಕ್ಷಗಾನ ಕಲಾರಂಗ ಸಂಸ್ಥೆಯು ‘ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ಸಂಸ್ಮರಣಾರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ ಮಾಡಿ ವಿದ್ವತ್‌ ಸಂಮಾನ ನೀಡುತ್ತಿದೆ. ಆಗಸ್ಟ್‌ 15, 2023 ರಂದು ಸಂಜೆ ಶ್ರೀ ಎಡನೀರು ಮಠದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ.

We're currently hard at work gathering information and crafting content to bring you the best experience. Stay tuned for exciting updates!