ಯಕ್ಷಶಿಕ್ಷಣ ಟ್ರಸ್ಟ್ (ರಿ.) ಉಡುಪಿ ಇದರ ಸಹಭಾಗಿತ್ವದಲ್ಲಿ ಮಣೂರು ಪಡುಕರೆಯ ಸಂಯುಕ್ತ ಪೌಢ ಶಾಲೆಯಲ್ಲಿ ಉಚಿತ ಯಕ್ಷಗಾನ ನೃತ್ಯ ತರಬೇತಿಯನ್ನು ಗೀತಾನಂದ ಫೌಂಡೇಶನ್ ಇದರ ಪ್ರವರ್ತಕರಾದ ಶ್ರೀ ಆನಂದ ಸಿ. ಕುಂದರ್ ಆಗಸ್ಟ್ 5, 2023 ರಂದು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ, ಮೌಲ್ಯಾಧಾರಿತ ಯಕ್ಷಗಾನವನ್ನು ನೋಡುವುದರೊಂದಿಗೆ ಅಥವಾ ಅದರಲ್ಲಿ ಭಾಗವಹಿಸುವುದರೊಂದಿಗೆ ಮಕ್ಕಳಲ್ಲಿ ಉತ್ತಮ ಸಂಸ್ಕಾರವು ಬೆಳೆಯಲು ಸಹಕಾರಿಯಾಗುತ್ತದೆ. ಮುಂದೆ ಆ ಮಕ್ಕಳು ನಮ್ಮ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ, ಪ್ರಜ್ಞಾವಂತ ನಾಗರಿಕರಾಗುವುದರಲ್ಲಿ ಸಂದೇಹವಿಲ್ಲ. ಈ ನಿಟ್ಟಿನಲ್ಲಿ ಉಡುಪಿಯ ಯಕ್ಷಶಿಕ್ಷಣ ಟ್ರಸ್ಟ್ ಬಹುತೇಕ ಶಾಲೆಗಳಲ್ಲಿ ಉಚಿತ ಯಕ್ಷಗಾನ ನೃತ್ಯ ತರಬೇತಿ ನೀಡಿ, ನಂತರ ಮಕ್ಕಳಿಗೆ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ನೀಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಯಕ್ಷಶಿಕ್ಷಣ ಟ್ರಸ್ಟ್ ನ ಕಾರ್ಯದರ್ಶಿ ಮುರಲಿ ಕಡೆಕಾರ್ ಅವರು ಮಾತನಾಡುತ್ತ ಮಕ್ಕಳು ಯಕ್ಷಗಾನವನ್ನು ಕಲಿಯುವುದರಿಂದ ಮಕ್ಕಳಲ್ಲಿ ಸಭಾಕಂಪನ ದೂರವಾಗುವುದರ ಜೊತೆಗೆ ಆತ್ಮಸ್ಥೈರ್ಯ ಮೂಡುತ್ತದೆ. ನಮಗೆ ದೈಹಿಕ ವ್ಯಾಯಮ ಸಿಗುವುದರೊಂದಿಗೆ ಮಾನಸ್ಸಿಗೂ ಶಾಂತಿ ನೆಮ್ಮದಿಯನ್ನು ನೀಡುತ್ತದೆ. ಸಮಷ್ಟಿ ಕಲೆಯಾದ ಈ ಯಕ್ಷಗಾನದ ಕಲಿಕೆಯು ಶಿಕ್ಷಣಕ್ಕೆ ಪೂರಕವೇ ಹೊರತಾಗಿ ಮಾರಕವಾಗಲಾರದು ಎಂದು ಮಕ್ಕಳಿಗೆ ಕಿವಿಮಾತನ್ನು ಹೇಳಿದರು.
ಯಕ್ಷಶಿಕ್ಷಣ ಟ್ರಸ್ಟ್ ನ ಟ್ರಸ್ಟೀ ಶ್ರೀ ಎಸ್. ವಿ. ಭಟ್, ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಕಾರ್ಯದರ್ಶಿ ಶ್ರೀ ರಾಜಶೇಖರ ಹೆಬ್ಬಾರ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಶ್ರೀ ಜಯರಾಮ ಶೆಟ್ಟಿ, ಶುಭಾಶಂಸನೆಗೈದರು. ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ಸೇಸು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯಶಿಕ್ಷಕ ಶ್ರೀ ನಿರಂಜನ ನಾಯಕ್ ಧನ್ಯವಾದ ಸಲ್ಲಿಸಿದರು. ಯಕ್ಷಗಾನ ಗುರು ಶ್ರೀ ನರಸಿಂಹ ತುಂಗರು ಪ್ರಾರ್ಥನೆಗೈದರು. ಶಿಕ್ಷಕ ಶ್ರೀಧರ ಶಾಸ್ತ್ರಿ ಕಾರ್ಯಕ್ರಮ ನಿರ್ವಹಿಸಿದರು.