ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಯಕ್ಷಶಿಕ್ಷಣ ತರಬೇತಿಯನ್ನು ಆಗಸ್ಟ್ 5, 2023ರಂದು ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ಎಸ್. ವಿ. ಭಟ್ ದೀಪಬೆಳಗಿಸಿ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆವಹಿಸಿದ್ದ ಕುಂದಾಪುರ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ನಮ್ಮ ವಿಧಾನಸಭಾ ವ್ಯಾಪ್ತಿಯ 10 ಪ್ರೌಢಶಾಲೆಗಳಲ್ಲಿ ಯಕ್ಷಗಾನ ತರಬೇತಿ ಈ ಬಾರಿ ಆರಂಭಗೊಂಡಿದೆ. ಮುಂದಿನ ವರ್ಷ ಹೆಚ್ಚಿನ ಶಾಲೆಗಳಲ್ಲಿ ಇದನ್ನು ಅಳವಡಿಸುವಂತಾಗಲಿ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಯಕ್ಷಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಮುರಲಿ ಕಡೆಕಾರ್ ಮಾತನಾಡಿ ಈ ಬಾರಿ ಉಡುಪಿಯಲ್ಲದೆ ಕಾಪು ಹಾಗೂ ಕುಂದಾಪುರದಲ್ಲಿ ಸೇರಿದಂತೆ ಒಟ್ಟು 68 ಪ್ರೌಢಶಾಲೆಗಳಲ್ಲಿ 32 ಗುರುಗಳಿಂದ ಯಕ್ಷಗಾನ ತರಬೇತಿ ನಡೆಸಲಾಗುವುದು. ಡಿಸೆಂಬರ್ ತಿಂಗಳಲ್ಲಿ ಪ್ರದರ್ಶನದ ವ್ಯವಸ್ಥೆ ಮಾಡಲಾಗುವುದು ಎಂದು ನುಡಿದರು. ಉಪಪ್ರಾಂಶುಪಾಲರಾದ ಕಿರಣ್ ಕುಮಾರ್ ಹೆಗ್ಡೆ ಸ್ವಾಗತಿಸಿದರು. ಗಣೇಶ್ ಕಾಂಚನ್ ನಿರ್ವಹಿಸಿದ ಕಾರ್ಯಕ್ರಮದ ಕೊನೆಯಲ್ಲಿ ಶಿಕ್ಷಕಿ ವಿನುತ ಗಾಂವ್ಕರ್ ಧನ್ಯವಾದ ಸಲ್ಲಿಸಿದರು. ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸತೀಶ್ ಕುಮಾರ್ ಶುಭಾಶಂಸನೆಗೈದರು. ಉದ್ಘಾಟನಾ ಪೂರ್ವದಲ್ಲಿ ಗುರುಗಳಾದ ದೇವರಾಜ ದಾಸ ಭಾಗವತರ ನಿರ್ದೇಶನದಲ್ಲಿ ಬಾಲಗೋಪಾಲ ಪ್ರಸ್ತುತಿ ಜರುಗಿತು.