ಉಡುಪಿಯ ಸಾಂಸ್ಕೃತಿಕ ಸಾಮಾಜಿಕ ಸಂಘಟನೆ ಯಕ್ಷಗಾನ ಕಲಾರಂಗದ 48ನೆಯ ವಾರ್ಷಿಕ ಮಹಾಸಭೆಯು ಪೇಜಾವರ ಮಠದ ಶ್ರೀರಾಮವಿಠಲ ಸಭಾಭವನದಲ್ಲಿ ಜುಲೈ 08, 2023 ರಂದು ಎಂ. ಗಂಗಾಧರ ರಾವ್‍ರ ಅಧ್ಯಕ್ಷತೆಯಲ್ಲಿ ಜರಗಿತು.
ಮಹಾಸಭೆಯು ಡಾ. ರಾಜೇಶ್ ನಾವಡರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ವರದಿ ವರ್ಷದಲ್ಲಿ ಅಗಲಿದ ಸಂಸ್ಥೆಯ ಸದಸ್ಯರು ಹಾಗೂ ಕಲಾವಿದರಿಗೆ ಕಾರ್ಯದರ್ಶಿ ಮುರಲಿ ಕಡೆಕಾರ್ ನುಡಿನಮನ ಸಲ್ಲಿಸಿದರು. ಮಹಾಸಭೆಯ ಕಲಾಪಗಳಾದ ಗತ ಮಹಾಸಭೆಯ ವರದಿ, ವಾರ್ಷಿಕ ವರದಿ, ಪರಿಶೋಧಿತ ಲೆಕ್ಕಪತ್ರ ಮಂಡನೆ, ಲೆಕ್ಕಪರಿಶೋಧಕರ ನೇಮಕದ ಅನಂತರ ಕಾರ್ಯಕಾರೀ ಸಮಿತಿ ಮತ್ತು ಸಲಹಾ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಲಾಯಿತು. ವೇದಿಕೆಯಲ್ಲಿ ಉಪಾಧ್ಯಕ್ಷರುಗಳಾದ ಪಿ.ಕಿಶನ್ ಹೆಗ್ಡೆ, ವಿ.ಜಿ.ಶೆಟ್ಟಿ ಮತ್ತು ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್ ಉಪಸ್ಥಿತರಿದ್ದರು. ಡಾ. ಎಂ. ಪ್ರಭಾಕರ ಜೋಷಿ ಹಾಗೂ ವಿದ್ಯಾವಂತ ಆಚಾರ್ಯ ಸಂಸ್ಥೆಯ ಕಾರ್ಯಚಟುವಟಿಕೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲ ಪ್ರೊ. ಎಂ. ಆರ್. ಹೆಗಡೆ ಒಂದು ಮನೆಯ ಪ್ರಾಯೋಜಕತ್ವದ ಮೊದಲ ಕಂತಿನ ರೂಪದಲ್ಲಿ ರೂ. 3,00,000/- ಹಾಗೂ ವಿದ್ಯಾಪೋಷಕ್‍ಗೆ ರೂ. 10,000/-, ನಿವೃತ್ತ ಪ್ರಾಂಶುಪಾಲರಾದ ಅಲೆವೂರು ರಘುಪತಿ ಭಟ್ ಯಕ್ಷಗಾನ ಕಲಾರಂಗಕ್ಕೆ ರೂ. 80,000/- ಹಾಗೂ ವಿದ್ಯಾಪೋಷಕ್‍ಗೆ ರೂ. 20,000/-, ಮೀನುಗಾರಿಕಾ ಇಲಾಖೆಯ ನಿವೃತ್ತ ಉದ್ಯೋಗಿ ಎನ್. ರಾಮ ಭಟ್ ಸಂಸ್ಥೆಗೆ ರೂ. 40,000/-, ಎಂ.ಜಿ.ಎಂ ಕಾಲೇಜಿನ ನಿವೃತ್ತ ಕಛೇರಿ ವ್ಯವಸ್ಥಾಪಕ ಎಚ್. ನರಸಿಂಹ ಮೂರ್ತಿ ರೂ. 50,000/- ನೀಡಿದರು. ಇಂದು ಕುಂದಾಪುರದ ಸಹನಾ ಕನ್ವೆಂಶನಲ್ ಸಭಾಂಗಣದಲ್ಲಿ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್, ಇವರು ನೀಡಿದ ಹೆಗ್ಗುಂಜೆ ರಾಜೀವ ಶೆಟ್ಟಿ ವಿದ್ಯಾಪೋಷಕ್ ಪ್ರಶಸ್ತಿಯನ್ನು ಸಂಸ್ಥೆಯ ಕಾರ್ಯದರ್ಶಿ ಮುರಲಿ ಕಡೆಕಾರ್ ಸ್ವೀಕರಿಸಿ, ನಗದು ಪುರಸ್ಕಾರವಾಗಿ ಬಂದ 1,01,000/- ರೂಪಾಯಿಯನ್ನು ಸಂಸ್ಥೆಗೆ ನೀಡಿದರು.