Yakshagana Kalaranga

ಯಕ್ಷಗಾನ ಸವ್ಯಸಾಚಿ ತೋನ್ಸೆ ಜಯಂತ್ ಕುಮಾರರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಜೂನ್ 26 ರಂದು ನಮ್ಮನ್ನಗಲಿದ ಯಕ್ಷಗಾನ ಗುರು, ಭಾಗವತ, ಯಕ್ಷಗಾನದ ಸರ್ವಾಂಗಗಳನ್ನು ಬಲ್ಲ ಕಲಾವಿದ ತೋನ್ಸೆ ಜಯಂತ್ ಕುಮಾರರ ಶ್ರದ್ಧಾಂಜಲಿ ಸಭೆ ಉಡುಪಿ ಬನ್ನಂಜೆಯ ನಾರಾಯಣ ಗುರು ಅಡಿಟೋರಿಯಂನಲ್ಲಿ ಜೂನ್ 29, 2023ರಂದು ಜರಗಿತು. ಉಡುಪಿಯ ಯಕ್ಷಗಾನ ಕಲಾರಂಗ, ಯಕ್ಷಶಿಕ್ಷಣ ಟ್ರಸ್ಟ್ ಹಾಗೂ ತೋನ್ಸೆಯವರ ಶಿಷ್ಯವೃಂದ ಸಂಯುಕ್ತವಾಗಿ ಆಯೋಜಿಸಿದ್ದವು. ಬನ್ನಂಜೆ ಬಿಲ್ಲವರ ಸೇವಾಸಂಘದ ಸಹಯೋಗದಲ್ಲಿ ಕಾರ್ಯಕ್ರಮ ಜರಗಿತು. ಉಡುಪಿಯ ಶಾಸಕರೂ, ಯಕ್ಷಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷರೂ ಆದ ಯಶಪಾಲ್ ಸುವರ್ಣ, ನಿಕಟಪೂರ್ವ ಶಾಸಕ, ಯಕ್ಷಶಿಕ್ಷಣ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಕೆ. ರಘುಪತಿ ಭಟ್, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸಂಸ್ಥೆಗೆ ಅವರು ನೀಡಿದ ಸೇವೆಯನ್ನು ಸ್ಮರಿಸಿಕೊಂಡರು. ಹಿರಿಯ ಯಕ್ಷಗಾನ ವಿದ್ವಾಂಸ ಡಾ.ಎಂ. ಪ್ರಭಾಕರ ಜೋಶಿ ಮಾತನಾಡಿ ತಮ್ಮತಂದೆಯಿಂದ ಪಡೆದ ಯಕ್ಷಗಾನ ಕಲೆಯನ್ನು ಅವರಂತೆ ಸಾವಿರಾರು ವಿದ್ಯಾರ್ಥಿಗಳಿಗೆ ಕಲಿಸಿ ಪಿತೃಋಣ ತೀರಿಸಿದ್ದಾರೆ. ಹೊಸ ಕಾಲದ ಯಾವ ಗಿಮಿಕ್ಸ್ ಗೂ ಬಲಿಯಾಗದೆ ಪರಂಪರೆಯ ಪರಿಶುದ್ಧತೆ ಕಾಯ್ದುಕೊಂಡ ಅಪೂರ್ವ ಭಾಗವತರಾಗಿದ್ದರೆಂದು ಅಭಿಪ್ರಾಯ ವ್ಯಕ್ತಪಡಿಸಿದರು.ಎಸ್.ವಿ ಭಟ್, ಐರೋಡಿ ಗೋವಿಂದಪ್ಪ, ಪುಂಡರೀಕಾಕ್ಷ ಉಪಾಧ್ಯ, ಉದ್ಯಾವರ ನಾಗೇಶ್ ಕುಮಾರ್, ಮೂಕಾಂಬಿಕಾ ವಾರಂಬಳ್ಳಿ, ಸುಜಯೀಂದ್ರ ಹಂದೆ, ಗುಂಡ್ಮಿ ಸದಾನಂದ ಐತಾಳ್, ಶೇಖರ ಅಂಚನ್, ಕೃಷ್ಣಸ್ವಾಮಿ ಜೋಷಿ, ಬಿ. ಕೇಶವ ರಾವ್, ರತ್ನಾಕರ ಆಚಾರ್ಯ, ಡಾ. ಪ್ರತಿಮಾ ಜಯಪ್ರಕಾಶ್ ಆಚಾರ್ಯ ನುಡಿನಮನ ಸಲ್ಲಿಸಿದರು. ನುಡಿನಮನದಲ್ಲಿ ಅವರು ಹವ್ಯಾಸಿ ಯಕ್ಷಗಾನ ಕಲಾವಿದರಿಗೆ ಮಾದರಿ, ವೃತ್ತಿ ಪ್ರವೃತ್ತಿಯನ್ನು ಸರಿದೂಗಿಸಿದ ಸಾಧಕ, ಶಿಷ್ಯರ ಅಪಾರ ಪ್ರೀತಿ ಗೌರವಗಳಿಗೆ ಪಾತ್ರರಾದ ಶ್ರೇಷ್ಠ ಗುರು, ಶ್ರದ್ಧೆ ಮತ್ತು ಸಮರ್ಪಣಾಭಾವದ ಪ್ರತೀಕ ಹೀಗೆ ಅವರ ಹಲವು ಗುಣಗಳು ಪ್ರಸ್ತಾಪಗೊಂಡವು. ಜಯಂತ್ ಕುಮಾರರ ಭಾವಚಿತ್ರಕ್ಕೆ ಪುಷ್ಪನಮನ ಸಮರ್ಪಿಸಲಾಯಿತು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.