ಉಡುಪಿಯ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿಗಳಾದ ಅಮಾಸೆಬೈಲಿನ ಚೇತನ್ ಮತ್ತು ನಯನಾ ಇವರಿಗೆ ಪಂಚಮಿ ಟ್ರಸ್ಟ್ (ರಿ.), ಗಾಂಧಿ ಆಸ್ಪತ್ರೆ, ಉಡುಪಿ ಇದರ ಪ್ರಾಯೋಜಕತ್ವದಲ್ಲಿ ನವೀಕರಣಗೊಂಡ ಮನೆ ‘ನಂದಾದೀಪ’ ವನ್ನು ಗಾಂಧಿ ಆಸ್ಪತ್ರೆಯ ವರಿಷ್ಠರಾದ ಡಾ. ಹರಿಶ್ಚಂದ್ರ ಹಾಗೂ ಶ್ರೀಮತಿ ಲಕ್ಷ್ಮೀ ಹರಿಶ್ಚಂದ್ರರು ಜೂನ್ 22, 2023ರಂದು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಡಾ. ಹರಿಶ್ಚಂದ್ರರು ಬಡ ವಿದ್ಯಾರ್ಥಿಗಳನ್ನು ಹುಡುಕಿ ಅವರ ಕಷ್ಟಗಳಿಗೆ ಸ್ಪಂದಿಸುತ್ತಿರುವ ಯಕ್ಷಗಾನ ಕಲಾರಂಗ ಸಂಸ್ಥೆ ದೇಶಕ್ಕೆ ಮಾದರಿಯಾಗಿದೆ. ಸೇವಾಮನೋಭಾವ ಹೊಂದಿರುವ ಕಾರ್ಯಕರ್ತರ ಪಡೆಯನ್ನು ಕಂಡು ಬೆರಗಾಗಿದ್ದೇನೆ. ಎರಡೂವರೆ ದಶಕಗಳ ಹಿಂದೆ ಗಾಂಧಿ ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡಿ, ಆಸ್ಪತ್ರೆಯ ಬೆಳವಣಿಗೆಗೆ ಕಾರಣಕರ್ತರಾದ ನನ್ನ ಸನ್ಮಿತ್ರ ಎಂ. ಗಂಗಾಧರ ರಾವ್ (ನಂದಕುಮಾರ್) ಇವರ ಮೇಲಿನ ಅಭಿಮಾನದಿಂದ ಇದನ್ನು ಅವರಿಗೆ ಕಾಣಿಕೆಯಾಗಿ ಅರ್ಪಿಸಿದ್ದೇನೆ ಎಂದರು. ಮುಂದಿನ ಐದು ವರ್ಷಗಳಲ್ಲಿ ವರ್ಷಕ್ಕೊಂದರಂತೆ ಐದು ಮನೆಗಳ ನಿರ್ಮಾಣಕ್ಕ ನಮ್ಮ ಟ್ರಸ್ಟ್ ಪ್ರಾಯೋಜಕತ್ವ ವಹಿಸಲಿದೆ ಎಂದು ಭರವಸೆ ನೀಡಿದರು. ಶ್ರೀಮತಿ ನಾಗರತ್ನ ಮತ್ತು ಮಕ್ಕಳಾದ ಚೇತನ್ ಹಾಗೂ ನಯನಾ ಮಾತನಾಡಿ ಸಂಸ್ಥೆಯ ಮೂಲಕ ನೆರವು ನೀಡಿದ ದಾನಿಗಳಿಗೂ, ವಿದ್ಯಾಪೆÇೀಷಕ್ ಸಂಸ್ಥೆಗೂ ನಾವು ಋಣಿಯಾಗಿರುತ್ತೇವೆ. ಮುಂದೆ ನಮ್ಮ ವಿದ್ಯಾಭ್ಯಾಸ ಮುಗಿಸಿ ಉದ್ಯೋಗ ದೊರೆತ ಬಳಿಕ ಸಂಸ್ಥೆಯ ಮೂಲಕ ನೆರವು ನೀಡುತ್ತೇವೆಂದು ಕೃತಜ್ಞತೆ ಹೇಳಿದರು. ಮುಖ್ಯ ಅಭ್ಯಾಗತರಾಗಿ ಸಾಮಾಜಸೇವೆಯಲ್ಲಿ ತೊಡಗಿಸಿಕೊಂಡ ಶಂಕರ ಐತಾಳ್ ಹಾಗೂ ಪಂಚಾಯತ್ ಉಪಾಧ್ಯಕ್ಷ ಕೃಷ್ಣ ಪೂಜಾರಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಮನೆ ನವೀಕರಣ ಕಾರ್ಯದಲ್ಲಿ ಸಹಕರಿಸಿದ ಸೂರ್ಯಪ್ರಕಾಶ್ ದಾಮ್ಲೆ ಹಾಗೂ ನಾರಾಯಣ ರಾವ್ ರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಸಂಸ್ಥೆಯ ಉಪಾಧ್ಯಕ್ಷ ವಿ.ಜಿ.ಶೆಟ್ಟಿ, ಕೆ. ಸದಾಶಿವ ರಾವ್, ಬಿ. ಭುವನಪ್ರಸಾದ್ ಹೆಗ್ಡೆ, ಅನಂತರಾಜ ಉಪಾಧ್ಯ, ಕೃಷ್ಣಮೂರ್ತಿ ಭಟ್, ನಟರಾಜ ಉಪಾಧ್ಯ, ಕಿಶೋರ್ ಸಿ. ಉದ್ಯಾವರ, ಅಶೋಕ್ ಎಂ., ಗಣೇಶ್ ಬ್ರಹ್ಮಾವರ, ಕೆ. ಅಜಿತ್ ಕುಮಾರ್, ಸುದರ್ಶನ ಬಾಯರಿ ಹಾಗೂ ಯಕ್ಷಗಾನ ಕಲಾವಿದ ಜೋಗು ಕುಲಾಲ್ ಉಪಸ್ಥಿತರಿದ್ದರು. ಕುಂದಾಪುರದ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿಯವರ ಸೂಚನೆಯಂತೆ ಅವರ ಕಾರ್ಯಕರ್ತರು ಎಲ್ಲ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದ್ದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಹೆಚ್. ಎನ್. ಶೃಂಗೇಶ್ವರ ಸಹಕರಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಇದು ಸಂಸ್ಥೆ ದಾನಿಗಳ ನೆರವಿನಿಂದ ನಿರ್ಮಿಸಿದ 40ನೆಯ ಮನೆಯಾಗಿದೆ. ಇನ್ನೂ 8 ಮನೆಗಳು ನಿರ್ಮಾಣದ ಹಂತದಲ್ಲಿವೆ.