ಉಡುಪಿ ವಿಧಾನಸಭಾ ವ್ಯಾಪ್ತಿಯ 45 ಪ್ರೌಢ ಶಾಲೆಗಳಲ್ಲಿ ಯಕ್ಷಗಾನ ತರಬೇತಿ ನೀಡುತ್ತಿರುವ ಯಕ್ಷಶಿಕ್ಷಣ ಟ್ರಸ್ಟ್ ನ ಗುರುಗಳ ಸಮಾಲೋಚನಾ ಸಭೆ ಇಂದು (10-06-2023ರಂದು) ಯಕ್ಷಗಾನ ಕಲಾರಂಗದ ಕಛೇರಿಯಲ್ಲಿ ಜರಗಿತು. ಉಡುಪಿಯ ನಿಕಟಪೂರ್ವ ಶಾಸಕರೂ, ಟ್ರಸ್ಟ್ ನ ಅಧ್ಯಕ್ಷರಾದ ಕೆ. ರಘುಪತಿ ಭಟ್ ಟ್ರಸ್ಟ್ ನ ನಿಯಮಾವಳಿಯಂತೆ ಉಡುಪಿ ಶಾಸಕರಾಗಿ ಆಯ್ಕೆಯಾದ ಯಶಪಾಲ್ ಸುವರ್ಣರಿಗೆ ಟ್ರಸ್ಟ್ ನ ಅಧ್ಯಕ್ಷ ಪದವಿಯನ್ನು ಹಸ್ತಾಂತರಿಸಿ ಗೌರವಿಸಿದರು. ಅಧಿಕಾರ ವಹಿಸಿಕೊಂಡ ಯಶಪಾಲ್ ಸುವರ್ಣರು ರಾಜ್ಯದಲ್ಲೇ ಅಪೂರ್ವವಾದ ಈ ಯೋಜನೆಯನ್ನು ಯಶಸ್ವಿಯಾಗಿ ಮುಂದುವರಿಯಲು ಎಲ್ಲರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಕೆ. ರಘುಪತಿ ಭಟ್ ಶಾಲೆಗಳ ಯಕ್ಷಶಿಕ್ಷಣದಿಂದ ಯಕ್ಷಗಾನಕ್ಕೂ, ಮಕ್ಕಳಿಗೂ ಸಿಗುತ್ತಿರುವ ಪ್ರಯೋಜನವನ್ನು ತಿಳಿಸಿ ಯಕ್ಷಗಾನ ಕಲಾರಂಗದ ಕಾರ್ಯಕರ್ತರು ಮತ್ತು ಗುರುಗಳು ಈ ಯಸಸ್ಸಿಗೆ ಕಾರಣರಾಗಿದ್ದಾರೆ ಎಂದು ಅಭಿನಂದಿಸಿದರು. ಯಕ್ಷಗಾನ ಕಲಾರಂಗದ ಉಪಾಧ್ಯಕ್ಷರಾದ ಎಸ್.ವಿ. ಭಟ್, ವಿ.ಜಿ. ಶೆಟ್ಟಿ, ಟ್ರಸ್ಟಿಗಳಾದ ಮೀನಾಲಕ್ಷಣಿ ಅಡ್ಯಂತಾಯ, ಹೆಚ್.ಎನ್. ಶೃಂಗೇಶ್ವರ, ನಟರಾಜ ಉಪಾಧ್ಯ, ನಾಗರಾಜ ಹೆಗಡೆ, ಮಂಜುನಾಥ ಮತ್ತು ಕಲಾರಂಗದ ಕಾರ್ಯಕರ್ತರು ಉಪಸ್ಥಿತರಿದ್ದರು. 18 ಜನ ಯಕ್ಷಶಿಕ್ಷಣ ಗುರುಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರ್ವಹಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು.