‘ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ ಹಾಗೆಯೇ ಕರ್ಣಾಟಕ ಬ್ಯಾಂಕ್ ಕರಾವಳಿ ಭಾಗದ ನಮಗೆ ಅತ್ಯಂತ ಹೆಮ್ಮೆಯ ವಿತ್ತೀಯ ಸಂಸ್ಥೆಯಾಗಿದೆ. ಮಹಾಬಲೇಶ್ವರ ಎಂ. ಎಸ್. ಕರ್ಣಾಟಕ ಬ್ಯಾಂಕ್‍ಗೆ ದೊಡ್ಡ ಶಕ್ತಿಯಾಗಿದ್ದರು. ಬ್ಯಾಂಕಿನಿಂದ ನಿವೃತ್ತರಾದ ಮೇಲೆ ಅವರನ್ನು ಅಭಿನಂದಿಸುತ್ತಿರುವುದು ಅವರು ಬ್ಯಾಂಕಿನ ಮೂಲಕ ಸಮಾಜಕ್ಕೆ ನೀಡಿದ ಕೊಡುಗೆಗೆ ನಿದರ್ಶನ. ಕರ್ಣಾಟಕ ಬ್ಯಾಂಕ್ ಸಮಾಜಸ್ನೇಹಿ, ಗ್ರಾಹಕಸ್ನೇಹಿಯಾಗಿ ವ್ಯವಹರಿಸುತ್ತಾ ಬಂದಿದೆ ಎಂದು ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಯಕ್ಷಗಾನ ಕಲಾರಂಗವು 25-04-2023ರಂದು ಉಡುಪಿಯ ಪೇಜಾವರ ಮಠದ ರಾಮವಿಠಲ ಸಭಾಭವನದಲ್ಲಿ ಆಯೋಜಿಸಿದ್ದ ಮಹಾಬಲೇಶ್ವರ ಎಂ. ಎಸ್. ಇವರ ಅಭಿನಂದನಾ ಸಮಾರಂಭದಲ್ಲಿ ಅನುಗ್ರಹ ಸಂದೇಶ ನೀಡುತ್ತಾ ಹೇಳಿದರು. ತನ್ನ ಅಧಿಕಾರಾವಧಿಯಲ್ಲಿ ಬಾಂಕನ್ನು ಬೆಳೆಸುವುದರೊಂದಿಗೆ ಯಕ್ಷಗಾನ ಕಲಾರಂಗದಂತಹ ಸಮಾಜಮುಖಿ ಸಂಸ್ಥೆಗಳಿಗೆ ಬ್ಯಾಂಕ್ ಮೂಲಕ ಪ್ರೋತ್ಸಾಹಿಸುತ್ತಾ ಬಂದಿದ್ದೇನೆ. ಇಂದು ಪಲಿಮಾರು ಶ್ರೀಗಳ ಸಾನಿಧ್ಯದಲ್ಲಿ ಗೌರವಿಸುತ್ತಿರುವುದು ಧನ್ಯತೆಯ ಕ್ಷಣವಾಗಿದೆ ಎಂದು ಅಭಿನಂದನೆಯನ್ನು ಸ್ವೀಕರಿಸುತ್ತಾ ಮಹಾಬಲೇಶ್ವರ ಎಂ. ಎಸ್. ರವರು ಹರ್ಷ ವ್ಯಕ್ತಪಡಿಸಿದರು. ಗೃಹನಿರ್ಮಾಣದ ಫಲಾನುಭವಿ ಪ್ರಿಯಲಕ್ಷ್ಮೀ ಅನಿಸಿಕೆ ಹಂಚಿಕೊಂಡಳು. ಮಾಹೆಯ ಸಹಕುಲಾಧಿಪತಿಗಳಾದ ಡಾ. ಎಚ್. ಎಸ್. ಬಲ್ಲಾಳ್‍ರ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭದಲ್ಲಿ ಶ್ರೀ ಹರಿಯಪ್ಪ ಕೋಟ್ಯಾನ್ ಶುಭಾಶಂಸನೆಗೈದರು. ಕರ್ಣಾಟಕ ಬ್ಯಾಂಕ್‍ನ ಎ.ಜಿ.ಎಂ ಬಿ. ರಾಜಗೋಪಾಲ್, ಶ್ರೀಮತಿ ಅನ್ನಪೂರ್ಣಾ ಮಹಾಬಲೇಶ್ವರ್, ಸಂಸ್ಥೆಯ ಉಪಾಧ್ಯಕ್ಷರುಗಳಾದ ಎಸ್. ವಿ. ಭಟ್, ಪಿ. ಕಿಶನ್ ಹೆಗ್ಡೆ ಹಾಗೂ ವಿ. ಜಿ. ಶೆಟ್ಟಿ ಹಾಗೂ ಕೆ. ಸದಾಶಿವ ರಾವ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅಕಾಲಿಕವಾಗಿ ನಿಧನ ಹೊಂದಿದ ಯಕ್ಷಗಾನ ಕಲಾವಿದರಾದ ಜಗದೀಶ ನಲ್ಕ ಹಾಗೂ ಗುರುವಪ್ಪ ಬಾಯಾರು ಇವರ ಕುಟುಂಬದವರಿಗೆ ಸಾಂತ್ವನ ನಿಧಿಯಾಗಿ ಅನುಕ್ರಮವಾಗಿ ರೂ. 75,000/- ಹಾಗೂ ರೂ. 50,000/- ನೆರವು ನೀಡಲಾಯಿತು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಜತೆಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಅಭಿನಂದನಪತ್ರ ವಾಚಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರ್ವಹಿಸಿದರು. ಜತೆಕಾರ್ಯದರ್ಶಿ ಹೆಚ್. ಎನ್. ಶೃಂಗೇಶ್ವರ ಸಹಕರಿಸಿದರು.