ಡಿಸೆಂಬರ್ 22, 2022ರಂದು ಕಟೀಲಿನ ಸರಸ್ವತಿ ಸದನದಲ್ಲಿ ತ್ರಿಜನ್ಮ ಮೋಕ್ಷದ ಶಿಶುಪಾಲನ ವೇಷದಲ್ಲಿರುವಾಗಲೇ ಇಹಲೋಕ ಯಾತ್ರೆ ಮುಗಿಸಿದ ಕಲಾವಿದ, ಪ್ರಸಂಗಕರ್ತ ಗುರುವಪ್ಪ ಬಾಯಾರು ಹಾಗೂ ಇತ್ತೀಚೆಗೆ ಅಗಲಿದ ಸಸಿಹಿತ್ಲು ಮೇಳದ ಯುವ ಕಲಾವಿದ ಜಗದೀಶ ನಲ್ಕ ಇವರ ಕುಟುಂಬಕ್ಕೆ ಉಡುಪಿಯ ಯಕ್ಷಗಾನ ಕಲಾರಂಗದಿಂದ ಸಾಂತ್ವನ ನಿಧಿಯಾಗಿ ಅನುಕ್ರಮವಾಗಿ ರೂ. 50,000 ಮತ್ತು ರೂ. 75,000 ನೀಡಲಾಯಿತು. ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಕರ್ಣಾಟಕ ಬ್ಯಾಂಕಿನ ನಿವೃತ್ತ ಆಡಳಿತಾಧಿಕಾರಿ ಮಹಾಬಲೇಶ್ವರ ಎಂ. ಎಸ್. ಮತ್ತು ಮಾಹೆಯ ಸಹಕುಲಾಧಿಪತಿಗಳಾದ ಡಾ. ಎಚ್. ಎಸ್. ಬಲ್ಲಾಳ್ ಕಲಾವಿದರ ಪತ್ನಿಯರಿಗೆ ಚೆಕ್ಕನ್ನು ಹಸ್ತಾಂತರಿಸಿ ಸಂಸ್ಥೆ ಕಷ್ಟದಲ್ಲಿರುವ ಕಲಾವಿದರ ಕುಟುಂಬಕ್ಕೆ ನೆರವು ನೀಡುತ್ತಿರುವುದು ಮಾನವೀಯ ಕಳಕಳಿಯ ಕೆಲಸಕ್ಕೆ ಉದಾಹರಣೆಯಾಗಿದೆ ಎಂದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಉಪಸ್ಥಿತರಿದ್ದರು.