ಯಕ್ಷಗಾನ ಕಲಾರಂಗ ಪ್ರಥಮ ಪಿ.ಯು.ಸಿ ಮುಗಿಸಿದ ವಿದ್ಯಾಪೋಷಕ್ ವಿದ್ಯಾರ್ಥಿಗಳಿಗೆ ಕಳೆದ 11 ವರ್ಷಗಳಿಂದ ಶ್ರೀ ಅಂಬಲಪಾಡಿ ದೇವಳದ ಆಶ್ರಯದಲ್ಲಿ ನಡೆಸಿಕೊಂಡು ಬಂದಿರುವ ಐದು ದಿನಗಳ ಸನಿವಾಸ ಶಿಬಿರ ಮಾರ್ಚ್ 19, 2023ರಂದು ದೇವಳದ ಭವಾನಿ ಮಂಟಪದಲ್ಲಿ ಆರಂಭಗೊಂಡಿತು. ದೇವಳದ ಧರ್ಮದರ್ಶಿ ಡಾ. ನಿ. ಬೀ. ವಿಜಯ ಬಲ್ಲಾಳ್ ಜ್ಯೋತಿ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿದರು. ಡಾ. ಎನ್. ಎಸ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಅಭ್ಯಾಗತರಾಗಿ ಪ್ರೊ. ರಾಜಮೋಹನ್, ಶ್ರೀಮತಿ ಶ್ರೀದೇವಿ ಅರುಣ್ ಕುಮಾರ್, ಶ್ರೀ ಹಿರಿಯಣ್ಣ ಕಿದಿಯೂರು, ಭಾಗವಹಿಸಿದ್ದರು. ಮೈಲೈಫ್ ಹುಬ್ಬಳ್ಳಿ ಇದರ ಸ್ಥಾಪಕ, ಶಿಬಿರದ ನಿರ್ದೇಶಕ ಶ್ರೀ ಪ್ರವೀಣ್ ಗುಡಿ ಹಾಗೂ ಸಂಸ್ಥೆಯ ಉಪಾಧ್ಯಾಕ್ಷರಾದ ಎಸ್. ವಿ. ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಅಧ್ಯಕ್ಷರಾದ ಎಮ್. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದ ಕಾರ್ಯಕ್ರಮದ ಕೊನೆಯಲ್ಲಿ ಅಶೋಕ್ ಎಮ್. ವಂದನಾರ್ಪಣೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ನಳಿನ ಸಭಾಂಗಣದ ಮಾಲಕರಾದ ಪುಷ್ಪರಾಜ್ ಶೆಟ್ಟಿ ದಂಪತಿಗಳನ್ನು ಹಾಗೂ ನಿವೃತ್ತ ಬ್ಯಾಂಕ್ ಅಧಿಕಾರಿ ದೇವಾನಂದ ಉಪಾಧ್ಯರನ್ನು ಗೌರವಿಸಲಾಯಿತು. ಶಿಬಿರದಲ್ಲಿ 300 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು ಮಾರ್ಚ್ 23ರಂದು ಶಿಬಿರವು ಸಮಾಪನಗೊಳ್ಳಲಿದೆ.