ಕಳೆದ ಒಂದು ದಶಕದಿಂದ ಯಕ್ಷ ಶಿಕ್ಷಣ ಟ್ರಸ್ಟ್ ನ ಅಭಿಯಾನದಲ್ಲಿ ಗುರುಗಳಾಗಿ, ಭಾಗವತರಾಗಿ ಸೇವೆ ಸಲ್ಲಿಸುತ್ತಾ ಬಂದ ಕೇಶವ ಆಚಾರ್ಯ ಇವರಿಗೆ ಎರಡು ತಿಂಗಳ ಹಿಂದೆ ವಾಹನ ಅಪಘಾತವಾಗಿ ಕುತ್ತಿಗೆಯ ಭಾಗದ ನರಕ್ಕೆ ತೀವ್ರವಾದ ಆಘಾತವಾಗಿ, ತೀರಾ ಅಸೌಖ್ಯದಲ್ಲಿದ್ದಾರೆ. ಇವರಿಗೆ ಶಾಸಕರೂ,ಯಕ್ಷ ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷರೂ ಆದ ಕೆ.ರಘುಪತಿ ಭಟ್(15-3-2023) ಇಂದು ಹೇರಂಜೆಯಲ್ಲಿರುವ ಅವರ ಮನೆಗೆ ತೆರಳಿ ಟ್ರಸ್ಟ್ ವತಿಯಿಂದ ಒಂದು ಲಕ್ಷ ರೂಪಾಯಿ ವೈದ್ಯಕೀಯ ನೆರವನ್ನು ನೀಡಿದರು. ಮುಂದೆಯೂ ನಿಮ್ಮೊಂದಿಗೆ ನಾವಿದ್ದೇವೆ ಎಂದು ಭರವಸೆ ನೀಡಿದರು.ಕಳೆದ ವರ್ಷ ನಾಲ್ಕು ಶಾಲೆಗಳಲ್ಲಿ ಗುರುಗಳಾಗಿ ಸೇವೆ ಸಲ್ಲಿಸಿದ್ದನ್ನು ಕೃತಜ್ಞತೆಯಿಂದ ಸ್ಮರಿಸಿಕೊಂಡರು. ಹಂಗಾರಕಟ್ಟೆ ಯಕ್ಷಗಾನ ಕೇಂದ್ರ ಮತ್ತು ಉಡುಪಿ , ಬ್ರಹ್ಮಾವರದ ಸುತ್ತಮುತ್ತಲ ಹಲವಾರು ಸಂಘಗಳಲ್ಲಿ ನೃತ್ಯ ಗುರುಗಳಾಗಿ, ಭಾಗವತರಾಗಿ ಸೇವೆ ಸಲ್ಲಿಸುತ್ತಾ ಬಂದ ಕೇಶವಾಚಾರ್ಯರ ನಿಸ್ಪೃಹ ಸೇವೆಯನ್ನು ಟ್ಟಸ್ಟ ಸದಾ ಸ್ಮರಿಸುತ್ತದೆ.ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ್ ರಾವ್, ಉಪಾಧ್ಯಕ್ಷರಾದ ಎಸ್. ವಿ. ಭಟ್, ವಿ.ಜಿ. ಶೆಟ್ಟಿ,ನಾರಾಯಣ ಎಂ.ಹೆಗಡೆ,ಬಿ. ಭುವನಪ್ರಸಾದ್ ಹೆಗ್ಡೆ,ನರಸಿಂಹ ತುಂಗಾ,ರಘುರಾಮ್ ಬೈಕಾಡಿ ಉಪಸ್ಥಿತರಿದ್ದರು.ಆಚಾರ್ಯರ ಇಬ್ಬರು ಪುತ್ರಿಯರು(ಇಬ್ಬರೂ ಎಸ್. ಎಸ್.ಎಲ್.ಸಿ.ಯಲ್ಲಿ 95% ಕ್ಕಿಂತ ಹೆಚ್ಚು ಅಂಕಗಳಿಸಿದ್ದಾರೆ) ವಿದ್ಯಾಪೋಷಕ್ ನಲ್ಲಿ ಫಲಾನುಭವಿಗಳಾಗಿದ್ದಾರೆ.ಇವರ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ವಿದ್ಯಾಪೋಷಕ್ ಭರಿಸುತ್ತದೆ ಎಂದು ಕಾರ್ಯದರ್ಶಿ ಮುರಳಿ ಕಡೆಕಾರ್ ಈ ಸಂದರ್ಭದಲ್ಲಿ ತಿಳಿಸಿದರು.