Yakshagana Kalaranga

ಮನೆ ನಿರ್ಮಾಣಕ್ಕೆ ಪೇಜಾವರ ಶ್ರೀಗಳಿಂದ ಚಾಲನೆ.

ಉಡುಪಿಯ ಹಿರಿಯ ಸಾಮಾಜಿಕ ಸಾಂಸ್ಕೃತಿಕ ಸಂಘಟನೆಯಾದ ಯಕ್ಷಗಾನ ಕಲಾರಂಗವು ಇಲ್ಲಿಯ ತನಕ ಕಲಾವಿದರು ಹಾಗೂ ವಿದ್ಯಾರ್ಥಿಗಳಿಗಾಗಿ 37 ಮನೆಗಳನ್ನು ನಿರ್ಮಿಸಿದ್ದು, ಇದೀಗ ಮೇ ಕೊನೆಯ ಒಳಗೆ ಮತ್ತೆ ಹದಿಮೂರು ಮನೆಗಳ ನಿರ್ಮಾಣಕಾರ್ಯ 12-03-2023ರಂದು ಪೇಜಾವರ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ದಿವ್ಯ ಸಾನಿಧ್ಯದಲ್ಲಿ ಆರಂಭಗೊಂಡಿತು. ಇಂದು ಪೇಜಾವರ ಶ್ರೀಗಳ ಷಷ್ಠ್ಯಬ್ಧದ ಪ್ರಥಮ ದಿನವಾಗಿದ್ದು(ಜನ್ಮ ನಕ್ಷತ್ರ ) ಈ ಹಿನ್ನೆಲೆಯಲ್ಲಿ ಮನೆ ನಿರ್ಮಾಣದ ಅಭಿಯಾನಕ್ಕೆ ಶ್ರೀಗಳೆ ಚಾಲನೆ ನೀಡಿದ್ದು ವಿಶೇಷವಾಗಿದೆ. ಉಡುಪಿ ಸಂತೆಕಟ್ಟೆಯಲ್ಲಿ ವಿದ್ಯಾಪೋಷಕ್‍ನ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿ ಹರ್ಷಿತಾ ಶೆಟ್ಟಿಯ ಮನೆ ನಿರ್ಮಾಣದ ಮುಹೂರ್ತದ ಸಂದರ್ಭದಲ್ಲಿ ಶ್ರೀಗಳು ಮಾತನಾಡಿ ಶ್ರೀಕೃಷ್ಣನ ಉಪದೇಶವನ್ನು ತನ್ನ ಸಮಾಜಮುಖಿ ಕಾರ್ಯಚಟುವಟಿಕೆಯ ಮೂಲಕ ನಿರ್ವಹಿಸುತ್ತಿರುವ ವಿಶಿಷ್ಟ ಸಂಸ್ಥೆ ಯಕ್ಷಗಾನ ಕಲಾರಂಗ. ಈ ಸಂಸ್ಥೆಯಿಂದ ನಾವು ಪ್ರೇರಣೆಗೊಂಡಿದ್ದೇವೆ. ಮನೆ ಬೇಗನೆ ಪೂರ್ಣಗೊಂಡು, ಎಲ್ಲರಿಗೂ ಶ್ರೇಯಸ್ಸಾಗಲಿ ಎಂದು ಅನುಗ್ರಹಿಸಿದರು. ಆರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ್ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯೊಂದಿಗೆ ನಿರೂಪಿಸಿದರು. ಎರಡು ತಿಂಗಳ ಹಿಂದೆ ಹರ್ಷಿತಾಳ ತಂದೆಗೆ ವಾಹನ ಅಪಘಾತವಾಗಿದ್ದು, ತಲೆಗೆ ಎರಡೆರಡು ಶಸ್ತ್ರ ಚಿಕಿತ್ಸೆಗಳಾಗಿ ಕುಟುಂಬ ತೀರಾ ಸಂಕಷ್ಟದಲ್ಲಿ ಇದ್ದುದನ್ನು ಗಮನಿಸಿ ಸಂಸ್ಥೆ ಸುಮಾರು 6 ಲಕ್ಷ ರೂ. ವೆಚ್ಚದ ಗೃಹ ನಿರ್ಮಾಣಕ್ಕೆ ಮುಂದಾಗಿದೆ. ಈ ಸಂದರ್ಭದಲ್ಲಿ ಹಿರಿಯರಾದ ಯು. ವಿಶ್ವನಾಥ ಶೆಣೈ, ರಾಜಗೋಪಾಲ ಆಚಾರ್ಯ ಹಾಗೂ ಸಂಸ್ಥೆಯ ಕಾರ್ಯಕರ್ತರಾದ ನಾರಾಯಣ ಎಂ. ಹೆಗಡೆ, ಬಿ. ಭುವನ ಪ್ರಸಾದ ಹೆಗ್ಡೆ, ಹೆಚ್. ಎನ್. ಶೃಂಗೇಶ್ವರ, ಪೃಥ್ವಿರಾಜ್ ಕವತ್ತಾರ್, ಅಶೋಕ ಎಂ., ರಮಾನಾಥ ಶಾನುಭಾಗ್, ಕಿಶೋರ್ ಸಿ. ಉದ್ಯಾವರ, ಸುದರ್ಶನ ಬಾಯಿರಿ ಉಪಸ್ಥಿತರಿದ್ದರು. ಅಧ್ಯಕ್ಷರಾದ ಎಂ. ಗಂಗಾಧರ್ ರಾವ್ ಅವರ ನೇತೃತ್ವದಲ್ಲಿ ಉಡುಪಿ ಜಿಲ್ಲೆಯ ಬೇರೆ ಬೇರೆ ಕಡೆಗಳಲ್ಲಿ 13 ಮನೆಗಳ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು, ಮೇ ಅಂತ್ಯದೊಳಗೆ ಪೂರ್ಣಗೊಳ್ಳಬೇಕಾಗಿದೆ. ಈ ಸಮಾಜಮುಖಿ ಕಾರ್ಯದಲ್ಲಿ ಕೈಜೋಡಿಸಲು ಆಸಕ್ತಿಯುಳ್ಳವರಿಗೆ ಅವಕಾಶವಿದೆ. ಪೇಜಾವರ ಶ್ರೀಗಳು ಪ್ರತಿ ವರ್ಷ ಒಂದು ಮನೆಯ ಪ್ರಾಯೋಜಕತ್ವ ವಹಿಸಿಕೊಂಡು ಹರಸುತ್ತಿರುವುದನ್ನು ಸಂಸ್ಥೆ ಸದಾ ಧನ್ಯತೆಯಿಂದ ಸ್ಮರಿಸುತ್ತದೆ.

We're currently hard at work gathering information and crafting content to bring you the best experience. Stay tuned for exciting updates!