ಸಾತ್ವಿಕ ವ್ಯಕ್ತಿತ್ವದ ಮತ್ತು ಸಾಮಾಜಿಕ ಕಳಕಳಿಯ ಯು. ಎಸ್. ರಾಜಗೋಪಾಲ ಆಚಾರ್ಯರು ಸೇವಾಭೂಷಣ ಪ್ರಶಸ್ತಿಗೆ ಅತ್ಯಂತ ಅರ್ಹ ವ್ಯಕ್ತಿ ಎಂದು ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತಮ್ಮ ಅನುಗ್ರಹ ಸಂದೇಶದಲ್ಲಿ ನುಡಿದರು. ಯಕ್ಷಗಾನ ಕಲಾರಂಗ ಸಾಮಾಜಿಕ ಬದ್ಧತೆಯ ಚಟುವಟಿಕೆಗಳನ್ನು ಶ್ರೀಪಾದರು ಶ್ಲಾಘಿಸಿದರು. ಅವರು ಮಾರ್ಚ್ 1, 2023ರಂದು ಉಡುಪಿ ಪೇಜಾವರ ಮಠದ ಶ್ರೀರಾಮವಿಠಲ ಸಭಾಭವನದಲ್ಲಿ ಯಕ್ಷಗಾನ ಕಲಾರಂಗದಲ್ಲಿ ದೀರ್ಘಕಾಲ ಕೋಶಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದ ಎಸ್. ಗೋಪಾಲಕೃಷ್ಣರ ನೆನಪಿನಲ್ಲಿ ಸಂಸ್ಥೆ ನೀಡುವ ಸೇವಾಭೂಷಣ ಪ್ರಶಸ್ತಿಯನ್ನು ನಿವೃತ್ತ ಅಧ್ಯಾಪಕ ಶ್ರೀ ಯು. ಎಸ್. ರಾಜಗೋಪಾಲ ಆಚಾರ್ಯರಿಗೆ ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಿದ ರಾಜಗೋಪಾಲ ಆಚಾರ್ಯರು ಮಾತನಾಡಿ
ಪರೋಪಕಾರಾಯ ಫಲಂತಿ ವೃಕ್ಷಾಃ
ಪರೋಪಕಾರಾಯ ವಹಂತಿ ನದ್ಯಃ |
ಪರೋಪಕಾರಾಯ ದುಹಂತಿ ಗಾವಃ
ಪರೋಪಕಾರಾರ್ಥಮ್ ಇದಂ ಶರೀರಮ್ ||
ಎಂಬ ಸುಭಾಷಿತವನ್ನು ಉಲ್ಲೇಖಿಸಿ ಸಮಾಜಸೇವೆಯಿಂದ ಬದುಕು ಧನ್ಯವಾಗುವುದು. ಇದನ್ನು ಸಾಂಸ್ಥಿಕ ಮಟ್ಟದಲ್ಲಿ ಯಕ್ಷಗಾನ ಕಲಾರಂಗವು ನಡೆಸುತ್ತಾ ಬಂದಿದೆ ಎಂದರು. ಮುಖ್ಯ ಅಭ್ಯಾಗತರಾಗಿ ಸಿ.ಎ ಗುಜ್ಜಾಡಿ ಪ್ರಭಾಕರ ನಾಯಕ್, ಬಾಲಾಜಿ ರಾಘವೇಂದ್ರ ಆಚಾರ್ಯ ಭಾಗವಹಿಸಿದ್ದರು. ಉಪಾಧ್ಯಕ್ಷರುಗಳಾದ ಎಸ್.ವಿ ಭಟ್, ಪಿ. ಕಿಶನ್ ಹೆಗ್ಡೆ, ವಿ. ಜಿ. ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಎನ್. ರಾಮ ಭಟ್ ತಮ್ಮ ಸೇವಾನಿವೃತ್ತಿಯ ಸಂದರ್ಭದಲ್ಲಿ ರೂ. 60,000/-ವನ್ನು ಯಕ್ಷಗಾನ ಕಲಾರಂಗಕ್ಕೆ ದೇಣಿಗೆಯಾಗಿ ಸಮರ್ಪಿಸಿದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರರಾವ್ ಸ್ವಾಗತಿಸಿದರು. ಹೆಚ್. ಎನ್. ಶೃಂಗೇಶ್ವರ ಅವರು ಎಸ್. ಗೋಪಾಲಕೃಷ್ಣರ ಕುರಿತ ಸಂಸ್ಮರಣೆಯ ಮಾತುಗಳನ್ನಾಡಿದರು. ನಾರಾಯಣ ಎಂ. ಹೆಗಡೆ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು. ಆರಂಭದಲ್ಲಿ ಪೆರಂಪಳ್ಳಿ ವಾಸುದೇವ ಭಟ್ ಪ್ರಾರ್ಥನೆಗೈದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರ್ವಹಿಸಿದರು. ಹೆಚ್. ಎನ್. ವೆಂಕಟೇಶ್ ಧನ್ಯವಾದ ಸಲ್ಲಿಸಿದರು.