ಉಡುಪಿ : ಯಕ್ಷಗಾನ ಕಲಾರಂಗ (ರಿ.) ಉಡುಪಿ ಕಳೆದ ಎರಡು ದಶಕಗಳಿಂದ ವೃತ್ತಿ ಮೇಳದ ಕಲಾವಿದರ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನೊಳಗೊಂಡಿರುವ ಡೈರಿ ನೀಡುತ್ತಾ ಬಂದಿದ್ದು, ‘ಯಕ್ಷನಿಧಿ ಡೈರಿ – 2023’ರ ಬಿಡುಗಡೆ ಕಾರ್ಯಕ್ರಮವು ಇಂದು (30-12-2022) ಸಂಸ್ಥೆಯ ಕಚೇರಿಯಲ್ಲಿ ಜರಗಿತು. ಯಕ್ಷಗಾನ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಡಾ. ಜಿ. ಎಲ್. ಹೆಗಡೆಯವರು ಡೈರಿ ಬಿಡುಗಡೆ ಮಾಡಿ ಸಂಸ್ಥೆ ಕಲಾವಿದರ ಕ್ಷೇಮ ಚಿಂತನೆಗೆ ಮಾಡುತ್ತಿರುವ ಕೆಲಸವನ್ನು ಶ್ಲಾಘಿಸಿದರು. ಯಕ್ಷಗಾನ ಶ್ರೇಷ್ಠ ಕಲೆಯಾಗಿದ್ದು ಅದರ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವಲ್ಲಿ ಕಲಾವಿದರ ಹೊಣೆಗಾರಿಕೆ ಬಹಳವಾಗಿದೆ ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಕಳೆದ ತಿಂಗಳು ಅಗಲಿದ ಕಟೀಲು ಮೇಳ ಸಹಿತ ವಿವಿಧ ಮೇಳಗಳಲ್ಲಿ 18ವರ್ಷಗಳ ಕಾಲ ಭಾಗವತರಾಗಿ ಸೇವೆಸಲ್ಲಿಸಿದ್ದ ಕೀರ್ತನ್ ಆರ್. ಶೆಟ್ಟಿ ಮತ್ತು ಮಂದಾರ್ತಿ ಮೇಳದಲ್ಲಿ ನಾಲ್ಕು ವರ್ಷಗಳ ಕಾಲ ಸ್ತ್ರೀವೇಷಧಾರಿಯಾಗಿ ಸೇವೆಸಲ್ಲಿಸಿದ್ದ ಚಂದ್ರ ನಾಯ್ಕ್ ಇವರ ಪತ್ನಿಯರಿಗೆ ಅನುಕ್ರಮವಾಗಿ ರೂ. 75000/- ಮತ್ತು 50000/- ಸಾಂತ್ವನನಿಧಿಯನ್ನು ಕಾರ್ಪೊರೇಶನ್ ಬ್ಯಾಂಕ್‍ನ ನಿವೃತ್ತ ಅಧಿಕಾರಿ ವಿಲಾಸಿನಿ ಬಿ. ಶೆಣೈಯವರು ವಿತರಿಸಿದರು. ಇತ್ತೀಚೆಗೆ ಅಪಘಾತಕ್ಕೊಳಗಾದ ಮಂದಾರ್ತಿ ಮೇಳದ ಕಲಾವಿದ ಶಂಕರ ಮರಕಾಲ ಇವರಿಗೆ ವೈದ್ಯಕೀಯ ನೆರವನ್ನು ನೀಡಲಾಯಿತು. ಯಕ್ಷನಿಧಿ ಡೈರಿಯ ಪ್ರಾಯೋಜಕರಾದ ವುಡ್‍ಲ್ಯಾಂಡ್ ಹೋಟೆಲ್‍ನ ಮಾಲಕಿ ವಿದ್ಯಾ ಪ್ರಸಾದ್ ಹಾಗೂ ಆಗಮಿಸಿದ ಮೇಳದ ಪ್ರತಿನಿಧಿಗಳಿಗೆ ಸಾಂಕೇತಿಕವಾಗಿ ಡೈರಿಯನ್ನು ವಿತರಿಸಲಾಯಿತು. ಕಲಾಪೋಷಕರಾದ ಯು. ವಿಶ್ವನಾಥ ಶೆಣೈ, ರಾಜಗೋಪಾಲ ಆಚಾರ್ಯ, ಸಂಸ್ಥೆಯ ಉಪಾಧ್ಯಕ್ಷರಾದ ಎಸ್. ವಿ. ಭಟ್, ಪಿ. ಕಿಶನ್ ಹೆಗ್ಡೆ, ಸದಸ್ಯರಾದ ಎಚ್. ಎನ್. ಶೃಂಗೇಶ್ವರ, ಮನೋಹರ ಕೆ., ಬಿ. ಭುವನ ಪ್ರಸಾದ್ ಹೆಗ್ಡೆ, ಮುದ್ರಾಡಿ ವಿಜಯ ಕುಮಾರ್, ಕಿಶೋರ್ ಸಿ. ಉದ್ಯಾವರ, ಅನಂತರಾಜ ಉಪಾಧ್ಯ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು.